ADVERTISEMENT

ರಾಜ್ಯದಲ್ಲಿ ಮುಂಗಾರು ದುರ್ಬಲ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2012, 19:30 IST
Last Updated 1 ಆಗಸ್ಟ್ 2012, 19:30 IST

ಬೆಂಗಳೂರು: ಜುಲೈ 27ಕ್ಕೆ ಕೊನೆಗೊಂಡಂತೆ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮುಂಗಾರು ದುರ್ಬಲವಾಗಿದೆ. ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಕೊಪ್ಪಳ, ಧಾರವಾಡ ಮತ್ತು ಹಾವೇರಿ ಈ ಏಳು ಜಿಲ್ಲೆಗಳಲ್ಲಿ ಮಾಮೂಲು ಮಳೆಯಾಗಿದೆ.

ಬೆಂಗಳೂರು ನಗರ, ಚಿತ್ರದುರ್ಗ, ದಾವಣಗೆರೆ, ಚಿಕ್ಕಬಳ್ಳಾಪುರ, ದಕ್ಷಿಣ ಕನ್ನಡ, ಬಳ್ಳಾರಿ, ಬೀದರ್, ಗುಲ್ಬರ್ಗ, ಯಾದಗಿರಿ, ಬಾಗಲಕೋಟೆ, ಬೆಳಗಾವಿ, ಗದಗ ಮತ್ತು ಉತ್ತರ ಕನ್ನಡ ಈ ಹದಿಮೂರು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಿದೆ ಎಂದು ಆರ್ಥಿಕ ಮತ್ತು ಸಾಂಖ್ಯಿಕ ಇಲಾಖೆ ಪ್ರಕಟಿಸಿದೆ.

ಉಳಿದ ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು, ಉಡುಪಿ, ರಾಯಚೂರು ಮತ್ತು ವಿಜಾಪುರ ಈ ಹತ್ತು ಜಿಲ್ಲೆಗಳಲ್ಲಿ ಅಲ್ಪ ಮಳೆಯಾಗಿದೆ.

ತಾಲ್ಲೂಕುವಾರು ಮಳೆಯ ಹಂಚಿಕೆ: ರಾಜ್ಯದ 176 ತಾಲ್ಲೂಕುಗಳ ಪೈಕಿ 13 ತಾಲ್ಲೂಕುಗಳಲ್ಲಿ ಅಧಿಕ, 26 ತಾಲ್ಲೂಕುಗಳಲ್ಲಿ ಮಾಮೂಲು, 51 ತಾಲ್ಲೂಕುಗಳಲ್ಲಿ ಸಾಧಾರಣ ಮತ್ತು 65 ತಾಲ್ಲೂಕುಗಳಲ್ಲಿ ಅಲ್ಪ ಮಳೆಯಾಗಿದೆ.  21 ತಾಲ್ಲೂಕುಗಳಲ್ಲಿ ಮಳೆಯಾಗಿಲ್ಲ.

ರಾಜ್ಯದಲ್ಲಿ ಜೂನ್‌ನಿಂದ ಜುಲೈ ತಿಂಗಳಿನ ಮಳೆಯ ಪ್ರಮಾಣವನ್ನು ಪರಿಶೀಲಿಸಲಾಗಿ ಮಾಮೂಲು ಮಳೆಯು 446 ಮಿ.ಮೀ. ಆಗಬೇಕಾಗಿತ್ತು. ಆದರೆ, ವಾಸ್ತವವಾಗಿ 283 ಮಿ.ಮೀ. ಮಳೆಯಾಗಿದೆ. ಅಂದರೆ ಈ  ತಿಂಗಳುಗಳಲ್ಲಿ ಸಾಧಾರಣ ಮಳೆಯಾಗಿದೆ.

ಈ ಅವಧಿಯ ಮುಂಗಾರನ್ನು ಕಳೆದ ಸಾಲಿನ ಇದೇ ಅವಧಿಯ ಮುಂಗಾರಿಗೆ ಹೋಲಿಸಿದರೆ, ಕಳೆದ ಬಾರಿ ಮುಂಗಾರು ಉತ್ತಮವಾಗಿತ್ತು. ಏಕೆಂದರೆ, ಕಳೆದ ಸಾಲಿನಲ್ಲಿ 24 ತಾಲ್ಲೂಕುಗಳಲ್ಲಿ ಅಧಿಕ ಮಳೆಯಾಗಿದ್ದು, 88 ತಾಲ್ಲೂಕುಗಳಲ್ಲಿ ಮಾಮೂಲು, 58 ತಾಲ್ಲೂಕುಗಳಲ್ಲಿ ಸಾಧಾರಣ ಮತ್ತು 6 ತಾಲ್ಲೂಕುಗಳಲ್ಲಿ ಅಲ್ಪ ಮಳೆಯ ವರದಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT