ADVERTISEMENT

ರಾಜ್ಯದಲ್ಲಿ ಶೇ 72.36 ಮತದಾನ

3 ಮತಗಟ್ಟೆಗಳಲ್ಲಿ ಇಂದು ಮರು ಮತದಾನ

​ಪ್ರಜಾವಾಣಿ ವಾರ್ತೆ
Published 13 ಮೇ 2018, 19:30 IST
Last Updated 13 ಮೇ 2018, 19:30 IST
ರಾಜ್ಯದಲ್ಲಿ ಶೇ 72.36 ಮತದಾನ
ರಾಜ್ಯದಲ್ಲಿ ಶೇ 72.36 ಮತದಾನ   

ಬೆಂಗಳೂರು: ರಾಜ್ಯ ವಿಧಾನಸಭೆಗೆ ಶನಿವಾರ ನಡೆದ ಚುನಾವಣೆಯಲ್ಲಿ ದಾಖಲೆ ಪ್ರಮಾಣದ ಶೇ 72.36ರಷ್ಟು ಮತದಾನವಾಗಿದೆ.

ಹೆಬ್ಬಾಳ ವಿಧಾನಸಭಾ ಕ್ಷೇತ್ರದ ಲೊಟ್ಟೆಗೊಲ್ಲಹಳ್ಳಿ ಮತ್ತು ಕೊಪ್ಪಳ ಜಿಲ್ಲೆ ಕುಷ್ಠಗಿ ಕ್ಷೇತ್ರದ ಎರಡು ಮತಗಟ್ಟೆಗಳಲ್ಲಿ ಸೋಮವಾರ ಮರು ಮತದಾನ ನಡೆಯಲಿದೆ.

ಈ ಬಾರಿ ಹೊಸಕೋಟೆ (ಶೇ 89.97) ಕ್ಷೇತ್ರದಲ್ಲಿ ಅತಿ ಹೆಚ್ಚು, ದಾಸರಹಳ್ಳಿಯಲ್ಲಿ (ಶೇ 48.03) ಅತಿ ಕಡಿಮೆ ಮತದಾನ ಆಗಿದೆ.

ADVERTISEMENT

1978ರ ಚುನಾವಣೆಯಲ್ಲಿ 71.90ರಷ್ಟು ಮತದಾನ ನಡೆದಿದ್ದು ಈವರೆಗಿನ ದಾಖಲೆಯಾಗಿತ್ತು. ಆ ನಂತರ 2013ರಲ್ಲಿ ಶೇ 71.45ರಷ್ಟು ಮತದಾನ ಆಗಿತ್ತು.

ಬದಲಾದ ಮತಗಟ್ಟೆ: ‘ಕುಷ್ಠಗಿ ಕ್ಷೇತ್ರದಲ್ಲಿ ಸುಮಾರು 250 ಮತದಾರರು 21ರ ಬದಲಾಗಿ 20ನೇ ಸಂಖ್ಯೆಯ ಮತಗಟ್ಟೆಯಲ್ಲಿ ಮತ ಹಾಕಿದ್ದಾರೆ. ಇದು ಕಾನೂನಿನ ಪ್ರಕಾರ ಲೋಪವಾಗುತ್ತದೆ. ಹೀಗಾಗಿ, ಮರು ಮತದಾನ ನಡೆಸಲು ತೀರ್ಮಾನಿಸಿದ್ದೇವೆ’ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್‌ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಇಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ಉದ್ದೇಶಪೂರ್ವಕವಾಗಿ ಈ ತಪ್ಪು ಮಾಡಿದ್ದರೆ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗುವುದು’ ಎಂದೂ ಹೇಳಿದರು.

‘ವಿದ್ಯುನ್ಮಾನ ಮತ ಯಂತ್ರದಲ್ಲಿ ದೋಷ ಕಂಡುಬಂದ ಕಾರಣ ಲೊಟ್ಟೆಗೊಲ್ಲಹಳ್ಳಿ ಮತಗಟ್ಟೆಯಲ್ಲಿ ಮತದಾನ ಮುಂದೂಡಲಾಗಿತ್ತು. ಇಲ್ಲಿ 1,444 ಹಾಗೂ ಕುಷ್ಠಗಿಯ ಎರಡು ಮತಗಟ್ಟೆಗಳಲ್ಲಿ ಒಟ್ಟು 1,683 ಮಂದಿ ಮತ ಚಲಾಯಿಸಬೇಕಿದೆ. ಮರುಮತದಾನದ ಬಗ್ಗೆ ಅವರಿಗೆ ಅರಿವು ಮೂಡಿಸಲಾಗಿದೆ’ ಎಂದು ಹೇಳಿದರು.

ಇನ್ನೂ ಹೆಚ್ಚಲಿದೆ ಪ್ರಮಾಣ: ‘ಶನಿವಾರ ಸಂಜೆ 6 ಗಂಟೆವರೆಗೆ ಶೇ 70.91ರಷ್ಟು ಮತದಾನವಾಗಿತ್ತು. 6 ಗಂಟೆಯೊಳಗೆ ಮತಗಟ್ಟೆಗೆ ಬಂದಿದ್ದ ಎಲ್ಲರಿಗೂ ಟೋಕನ್ ಕೊಟ್ಟು ಮತ ಹಾಕಲು ಅವಕಾಶ ನೀಡಿದ್ದೆವು. ಹೀಗಾಗಿ, ಕೆಲವೆಡೆ ರಾತ್ರಿ 8 ಗಂಟೆವೆರೆಗೂ ಪ್ರಕ್ರಿಯೆ ಮುಂದುವರಿದಿತ್ತು. ಅಂತಿಮವಾಗಿ ಮತದಾನ ಪ್ರಮಾಣ ಶೇ 72.36ಕ್ಕೆ ಏರಿಕೆಯಾಗುವ ಮೂಲಕ ಹಿಂದಿನ ಎಲ್ಲ ದಾಖಲೆಗಳನ್ನೂ ಅಳಿಸಿದೆ’ ಎಂದು ಸಂಜೀವ್‌ಕುಮಾರ್ ಹೇಳಿದರು.

‘ಅಂಚೆ ಮತಗಳು, ಮೂರು ಮತಗಟ್ಟೆಗಳಲ್ಲಿ ಮರುಮತದಾನ ಹಾಗೂ ಎರಡು ಕ್ಷೇತ್ರಗಳ ಮತದಾನ ಬಾಕಿ ಇರುವುದರಿಂದ ರಾಜ್ಯದ ಒಟ್ಟು ಮತದಾನ ಪ್ರಮಾಣದಲ್ಲಿ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ’ ಎಂದರು.
**
38 ಮತಎಣಿಕೆ ಕೇಂದ್ರಗಳು
‘ಮೇ 15ರಂದು ನಡೆಯಲಿರುವ ಮತ ಎಣಿಕೆಗೆ ವ್ಯವಸ್ಥಿತ ಸಿದ್ಧತೆ ಮಾಡಿಕೊಂಡಿದ್ದೇವೆ. ಈ ಕಾರ್ಯಕ್ಕೆ 11,160 ಸಿಬ್ಬಂದಿಯನ್ನು ಬಳಸಿಕೊಳ್ಳುತ್ತಿದ್ದೇವೆ. ಬೆಂಗಳೂರಿನಲ್ಲಿ ನಾಲ್ಕು, ಚಿತ್ರದುರ್ಗ, ದಕ್ಷಿಣ ಕನ್ನಡ, ಮೈಸೂರಿನಲ್ಲಿ ತಲಾ ಎರಡು ಹಾಗೂ ಉಳಿದ ಜಿಲ್ಲೆಗಳಲ್ಲಿ ಒಂದೊಂದು ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದು ಸಂಜೀವ್‌ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.