ADVERTISEMENT

ರಾಜ್ಯದಲ್ಲಿ ಹುಲಿ ಸಂರಕ್ಷಣಾ ನಿಧಿ ಸ್ಥಾಪನೆ

ಕೆ.ಎಚ್.ಓಬಳೇಶ್
Published 10 ಅಕ್ಟೋಬರ್ 2011, 19:30 IST
Last Updated 10 ಅಕ್ಟೋಬರ್ 2011, 19:30 IST

ಚಾಮರಾಜನಗರ: ರಾಜ್ಯದಲ್ಲಿರುವ ಹುಲಿ ರಕ್ಷಿತಾರಣ್ಯಗಳ ಸಂರಕ್ಷಣೆಗಾಗಿ `ಹುಲಿ ಸಂರಕ್ಷಣಾ ನಿಧಿ~ ಸ್ಥಾಪಿಸಲಾಗಿದೆ. ಹುಲಿ ರಕ್ಷಿತಾರಣ್ಯಗಳ ವ್ಯಾಪ್ತಿಯಲ್ಲಿ ಬರುವ ಆದಾಯ ಇನ್ನು ಮುಂದೆ ಸಂಪೂರ್ಣವಾಗಿ ಹುಲಿಗಳ ರಕ್ಷಣೆಗೆ ಬಳಕೆಯಾಗಲಿದೆ.

ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಸೆಕ್ಷನ್ 38ಎಕ್ಸ್ ಅನ್ವಯ ಹುಲಿ ರಕ್ಷಿತಾರಣ್ಯಗಳಲ್ಲಿ ಸಂರಕ್ಷಣಾ ನಿಧಿ ಸ್ಥಾಪಿಸುವುದು ಕಡ್ಡಾಯ. ಈ ಸಂಬಂಧ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಮಾರ್ಗಸೂಚಿ ಪ್ರಕಟಿಸಿದೆ. ಅದರನ್ವಯ ರಾಜ್ಯದ ಐದು ಹುಲಿ ರಕ್ಷಿತಾರಣ್ಯದಲ್ಲಿಯೂ ಸಂರಕ್ಷಣಾ ನಿಧಿ ಸ್ಥಾಪಿಸಲಾಗಿದೆ.

ಬಂಡೀಪುರ, ನಾಗರಹೊಳೆ, ದಾಂಡೇಲಿ-ಅಣಶಿ, ಭದ್ರಾ ಹಾಗೂ ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿ ಸಂರಕ್ಷಣಾ ನಿಧಿ ಸ್ಥಾಪನೆಯೊಂದಿಗೆ ಹುಲಿಗಳ ಸಂರಕ್ಷಣೆಗೆ ಅರಣ್ಯ ಇಲಾಖೆ ಮುಂದಾಗಿದೆ. ಪ್ರತಿಯೊಂದು ರಕ್ಷಿತಾರಣ್ಯದ ವ್ಯಾಪ್ತಿ ವಾರ್ಷಿಕವಾಗಿ ರೂ 20ರಿಂದ 40 ಲಕ್ಷ ದಷ್ಟು ಆದಾಯ ಬರುತ್ತಿದೆ. ಈ ಆದಾಯ ರಾಜ್ಯ ಸರ್ಕಾರದ ಬೊಕ್ಕಸ ಸೇರುತಿತ್ತು. ಪ್ರಸ್ತುತ ಈ ಆದಾಯವನ್ನು ಸಂರಕ್ಷಣಾ ನಿಧಿಗೆ ನೀಡಬೇಕಿದೆ.

ವಾರ್ಷಿಕವಾಗಿ ಕೇಂದ್ರ ಸರ್ಕಾರದಿಂದ ಹುಲಿ ಸಂರಕ್ಷಣೆಗೆ ಅನುದಾನ ಲಭಿಸುತ್ತದೆ. ಹುಲಿ ಯೋಜನೆಯಡಿ 2010-11ನೇ ಸಾಲಿನಲ್ಲಿ ರಾಜ್ಯಕ್ಕೆ 18.58 ಕೋಟಿ ರೂ ಅನುದಾನ ಬಿಡುಗಡೆಯಾಗಿದೆ. ಇದರಲ್ಲಿ ಮುಕ್ಕಾಲು ಭಾಗದಷ್ಟು ಹಣ ಅರಣ್ಯ ಸಿಬ್ಬಂದಿಯ ಸಂಬಳ, ವಾಹನ ದುರಸ್ತಿ ಇತ್ಯಾದಿಗೆ ವಿನಿಯೋಗವಾಗುತ್ತಿದೆ. ಈಗ ನಿಧಿ ಸ್ಥಾಪಿಸಿರುವುದರಿಂದ ರಕ್ಷಿತಾರಣ್ಯದ ವ್ಯಾಪ್ತಿ ಪರಿಸರ ಸಂಬಂಧಿ ಸಂಶೋಧನೆ, ಶಿಕ್ಷಣಕ್ಕೆ ಬಳಸಿಕೊಳ್ಳಲು ಅವಕಾಶ ಸಿಕ್ಕಿದೆ.

ಈ ನಿಧಿಗೆ ಸಾರ್ವಜನಿಕರು, ಸ್ವಯಂಸೇವಾ ಸಂಸ್ಥೆಗಳಿಂದಲೂ ಆರ್ಥಿಕ ನೆರವು ಪಡೆಯಲು ಅವಕಾಶವಿದೆ. ದಾನಿಗಳು ಹಾಗೂ ಪ್ರಾಣಿಪ್ರಿಯರು ಹಣಕಾಸಿನ ನೆರವು ನೀಡಬಹುದು. ಸಂರಕ್ಷಣಾ ನಿಧಿಯೂ ಸಹಕಾರ ಸಂಸ್ಥೆಯ ಮಾದರಿಯಡಿ ಕಾರ್ಯ ನಿರ್ವಹಿಸಲಿದೆ.

ಆಯಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಇದರ ಮುಖ್ಯಸ್ಥರಾಗಿರುತ್ತಾರೆ. ಉಪ ಅರಣ್ಯ ಸಂರಕ್ಷಣಾಧಿಕಾರಿ ಸದಸ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಲಿದ್ದಾರೆ. ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ವನಪಾಲಕ ಹಾಗೂ ಇಬ್ಬರು ನಾಗರಿಕರು ಈ ಸಂರಕ್ಷಣಾ ನಿಧಿಯ ಸದಸ್ಯರಾಗಿರುತ್ತಾರೆ.

ಅರಣ್ಯ ಆದಾಯ ಹಾಗೂ ದಾನಿಗಳು ನೀಡುವ ನೆರವು ಪಡೆದುಕೊಂಡು ಹುಲಿ ರಕ್ಷಿತಾರಣ್ಯದ ವ್ಯಾಪ್ತಿ ಅಭಿವೃದ್ಧಿ ಕಾರ್ಯಕೈಗೊಳ್ಳಲು ಅರಣ್ಯ ಸಂರಕ್ಷಣಾಧಿಕಾರಿ ನೇತೃತ್ವದ ಸಮಿತಿಗೆ ಅಧಿಕಾರವಿರುತ್ತದೆ. ಸಂಶೋಧನೆ, ಪರಿಸರ ಶಿಕ್ಷಣ ಇತ್ಯಾದಿ ಕುರಿತು ತರಬೇತಿ ಹಮ್ಮಿಕೊಂಡು ಕಾಡಂಚಿನ ನಾಗರಿಕರಿಗೆ ಅರಣ್ಯ ಸಂರಕ್ಷಣೆ ಬಗ್ಗೆ ತಿಳಿವಳಿಕೆ ಮೂಡಿಸುವುದು ಸಮಿತಿಯ ಹೊಣೆ.

ಹುಲಿ ಸಂರಕ್ಷಣೆಗೆ ನಿಯೋಜಿಸಲ್ಪಟ್ಟಿರುವ ಅರಣ್ಯ ಸಿಬ್ಬಂದಿಗೂ ನಿಧಿಯಡಿ ಸೌಲಭ್ಯ ಕಲ್ಪಿಸಲು ಅವಕಾಶವಿದೆ. ಸ್ಥಳೀಯರ ಸಹಭಾಗಿತ್ವದಡಿ ಎಕೋ-ಟೂರಿಸಂಗೂ ಅವಕಾಶ ಕಲ್ಪಿಸಬಹುದು. ಒಟ್ಟಾರೆ ಪರಿಸರ ಸಂಬಂಧಿ ಅಭಿವೃದ್ಧಿ ಚಟುವಟಿಕೆಗಳಿಗೆ ಒತ್ತು ನೀಡಬೇಕಿದೆ.

`ಬಿಳಿಗಿರಿರಂಗನಾಥಸ್ವಾಮಿ ಹುಲಿ ರಕ್ಷಿತಾರಣ್ಯದ ವ್ಯಾಪ್ತಿಯಲ್ಲೂ ಹುಲಿ ಸಂರಕ್ಷಣಾ ನಿಧಿ ಸ್ಥಾಪಿಸಲಾಗಿದೆ. ರಕ್ಷಿತಾರಣ್ಯದ ಬಲವರ್ಧನೆಗೆ ಉತ್ತೇಜನ ನೀಡುವುದೇ ಇದರ ಮೂಲ ಉದ್ದೇಶ. ರಕ್ಷಿತಾರಣ್ಯದ ವ್ಯಾಪ್ತಿ ವಾರ್ಷಿಕವಾಗಿ ರೂ. 30 ಲಕ್ಷ  ಆದಾಯವಿದೆ. ಈ ಹಣ ಬಳಸಿಕೊಂಡು ಹುಲಿಗಳ ಸಂರಕ್ಷಣೆಗೆ ಒತ್ತು ನೀಡಲಾಗುವುದು~ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಮಣಿಕಂದನ್ `ಪ್ರಜಾವಾಣಿ~ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.