ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಎದುರಿಸಲು ರಾಜ್ಯದಲ್ಲೂ ಸಮಾನಮನಸ್ಕ ರಾಜಕೀಯ ಶಕ್ತಿಗಳು ಒಂದಾಗಬೇಕು ಎಂದು ಜೆಡಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಕೆ.ಸಿ. ರೆಡ್ಡಿ ಅಭಿಪ್ರಾಯಪಟ್ಟರು.
ಕಾಂಗ್ರೆಸ್ ಮತ್ತು ಬಿಜೆಪಿಗೆ ಭ್ರಷ್ಟಾಚಾರದ ಕಳಂಕ ಅಂಟಿಕೊಂಡಿದೆ. ರಾಜ್ಯದ ಜನತೆ ಈ ಎರಡು ಪಕ್ಷಗಳಿಗೆ ಪರ್ಯಾಯ ರಾಜಕೀಯ ಶಕ್ತಿಯನ್ನು ಬಯಸಿದ್ದಾರೆ. ಕರ್ನಾಟಕದಲ್ಲಿ ಪರ್ಯಾಯ ರಂಗಕ್ಕೆ ಸೇರುವ ಪಕ್ಷಗಳಲ್ಲಿ ಜೆಡಿಎಸ್ ದೊಡ್ಡ ಪಕ್ಷವಾಗಿದೆ.
ಹೀಗಾಗಿ ತೃತೀಯ ಶಕ್ತಿ ಒಂದುಗೂಡಿಸುವ ಪ್ರಕ್ರಿಯೆಯನ್ನು ಜೆಡಿಎಸ್ ರಾಷ್ಟ್ರ ಘಟಕದ ಅಧ್ಯಕ್ಷ ಎಚ್.ಡಿ. ದೇವೇಗೌಡ ಅವರು ಕೈಗೊಳ್ಳಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಈಗಾಗಲೇ ರಾಷ್ಟ್ರಮಟ್ಟದಲ್ಲಿ ಜವಾಬ್ದಾರಿಯುತ ಪರ್ಯಾಯ ರಂಗ ಸ್ಥಾಪನೆಯಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಸಮಾನ ಮನಸ್ಕ ಪಕ್ಷಗಳು ಒಂದುಗೂಡಿದರೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಬಹುದು ಎಂದು ಅವರು ಅಭಿಪ್ರಾಯಪಟ್ಟರು.
ಲಿಂಗನಮಕ್ಕಿಯಿಂದ ನೀರು ಹರಿಸಿ: ಲಿಂಗನಮಕ್ಕಿ ಜಲಾಶಯದಿಂದ ಸುಮಾರು 60 ಟಿಎಂಸಿ ನೀರನ್ನು ಬೆಂಗಳೂರಿಗೆ ಹಾಗೂ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳಿಗೆ ಪೂರೈಸಬಹುದು ಎಂದು ಬಿ.ಎನ್. ತ್ಯಾಗರಾಜ್ ಅಧ್ಯಕ್ಷತೆಯ ತಜ್ಞರ ಸಮಿತಿ ಅಭಿಪ್ರಾಯಪಟ್ಟಿದೆ.
ಆದ್ದರಿಂದ, ರಾಜ್ಯ ಸರ್ಕಾರ ಆದ್ಯತೆಯ ಮೇರೆಗೆ ತಕ್ಷಣ ಈ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.