ನವದೆಹಲಿ: ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗೆ ಆದ್ಯತೆ ನೀಡಲು ಹಾಗೂ ಬೆಂಗಳೂರು ನಗರಕ್ಕೆ ಸೂಕ್ತ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರಕ್ಕೆ ಯೋಜನಾ ಆಯೋಗವು ಸೂಚಿಸಿದೆ.
ರಾಜ್ಯದ ಯೋಜನಾ ಗಾತ್ರ ನಿರ್ಧರಿಸಲು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಅಹ್ಲುವಾಲಿಯಾ ಹೀಗೆ ಹೇಳಿದರು.
ಬೆಂಗಳೂರಿನ ಮೂಲಭೂತ ಸೌಕರ್ಯದ ಗುಣಮಟ್ಟ ಕುಸಿಯುತ್ತಿರುವ ಬಗ್ಗೆ ಗಂಭೀರವಾಗಿ ಪ್ರಸ್ತಾಪಿಸಿದ ಮೊಂಟೆಕ್ ಸಿಂಗ್, ಐಟಿ ನಗರ ಎಂಬ ಹೆಗ್ಗಳಿಕೆಯನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ನಗರದ ಸಮಗ್ರ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ಹೊಸದಾಗಿ ಸೇರಿದ ಪ್ರದೇಶಗಳ ಅಭಿವೃದ್ಧಿಗಾಗಿ ಸೂಕ್ತ ಯೋಜನೆ ಹಾಕಿಕೊಳ್ಳಬೇಕು; ಆ ಪ್ರದೇಶಗಳಿಗೆ ಕುಡಿಯುವ ನೀರು, ತ್ಯಾಜ್ಯ ನಿರ್ವಹಣಾ ವ್ಯವಸ್ಥೆ, ವಿದ್ಯುತ್ ಮತ್ತಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಹೈದರಾಬಾದ್ ಕರ್ನಾಟಕ ಪ್ರದೇಶದಲ್ಲಿ, ಮುಖ್ಯವಾಗಿ ರಾಯಚೂರು, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಮಾನವ ಅಭಿವೃದ್ಧಿ ಸೂಚ್ಯಂಕದ ಮಟ್ಟ ಕಳಪೆ ಯಾಗಿರುವುದನ್ನು ಪ್ರಸ್ತಾಪಿಸಿದ ಮೊಂಟೆಕ್ ಸಿಂಗ್, ಈ ಪ್ರದೇಶಗಳಲ್ಲಿ ಅಪೌಷ್ಟಿಕತೆಗೆ ಕಡಿವಾಣ ಹಾಕಲು ಸಲಹೆ ನೀಡಿದರು. ಶಿಕ್ಷಣ ಹಾಗೂ ಆರೋಗ್ಯ ಸಂಬಂಧಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಆದ್ಯತೆ ನೀಡುವಂತೆಯೂ ಅವರು ಹೇಳಿದರು.
ಯೋಜನಾ ಗಾತ್ರ ಹೆಚ್ಚಳ: ಇದೇ ವೇಳೆ, ಯೋಜನಾ ಆಯೋಗವು 2012-13ನೇ ಸಾಲಿಗೆ ರಾಜ್ಯದ ಯೋಜನಾ ಗಾತ್ರವನ್ನು 42,030 ಕೋಟಿ ರೂ.ಗಳಿಗೆ ನಿಗದಿ ಮಾಡಿದೆ.
ಕಳೆದ ವರ್ಷದ ಯೋಜನಾ ಗಾತ್ರವಾದ 38,070 ಕೋಟಿ ರೂಪಾಯಿಗೆ ಹೋಲಿಸಿದರೆ ಈ ಬಾರಿ ಶೇ 10.4ರಷ್ಟು ಹೆಚ್ಚಳವಾಗಿದೆ.
ತನಗೆ ಮೀಸಲಾದ ಹಣವನ್ನು ರಾಜ್ಯ ಬಳಸಿಕೊಳ್ಳುತ್ತಿರುವ ರೀತಿ ಹಾಗೂ ಆರ್ಥಿಕ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ತಂತ್ರಜ್ಞಾನ ಅಳವಡಿಸಿಕೊಂಡು ಆಡಳಿತವನ್ನು ದಕ್ಷಗೊಳಿಸುವ ನಿಟ್ಟಿನಲ್ಲಿ ರಾಜ್ಯವು ಇನ್ನೂ ಹೆಚ್ಚಿನ ಪಾತ್ರ ವಹಿಸಬಹುದು ಎಂದರು.
ಕೃಷಿ, ಮೂಲಸೌಕರ್ಯ ಕ್ಷೇತ್ರಗಳಲ್ಲಿ ಅಭಿವೃದ್ಧಿಗೆ ಗಮನ ಕೇಂದ್ರೀಕರಿಸುವ ಜತೆಗೆ ಸರ್ಕಾರಿ ಹಾಗೂ ಖಾಸಗಿ ಸಹಭಾಗಿತ್ವವನ್ನು ಉತ್ತೇಜಿಸಲು ಮುಖ್ಯಮಂತ್ರಿಯವರಿಗೆ ಸಲಹೆ ನೀಡಿದರು.
ರಾಜ್ಯದ ಆರ್ಥಿಕ ಬೆಳವಣಿಗೆಯು ಇತ್ತೀಚೆಗೆ ರಾಷ್ಟ್ರೀಯ ಸರಾಸರಿಗಿಂತ ಕಡಿಮೆ ಮಟ್ಟಕ್ಕೆ ಇಳಿದಿರುವ ಬಗ್ಗೆಯೂ ಮಾತುಕತೆ ವೇಳೆ ಪ್ರಸ್ತಾಪಿಸಲಾಯಿತು.
ರಾಜ್ಯವು ಮುಂಚಿನಿಂದಲೂ ಪಂಚ ವಾರ್ಷಿಕ ಯೋಜನೆಗಳಲ್ಲಿ ನಿಗದಿ ಮಾಡಿದ್ದಕಿಂತ ಹೆಚ್ಚಿನ ಹಣವನ್ನು ವ್ಯಯಿಸುತ್ತಿದೆ. 11ನೇ ಪಂಚವಾರ್ಷಿಕ ಯೋಜನೆಯಲ್ಲಿ (2007-12) 1,01,664 ಕೋಟಿ ರೂಪಾಯಿ ನಿಗದಿಯಾಗಿದ್ದರೆ, ರಾಜ್ಯದ ವೆಚ್ಚವು 1,14,152 ಕೋಟಿ ರೂಪಾಯಿ ಮುಟ್ಟುವ ನಿರೀಕ್ಷೆ ಇದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಈ ಸಂದರ್ಭದಲ್ಲಿ ತಿಳಿಸಿದರು.
ತೀವ್ರ ಬರವು ರಾಜ್ಯದ ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಹೊಡೆತ ನೀಡಿದ್ದರೆ, ಜಾಗತಿಕ ಆರ್ಥಿಕ ಹಿನ್ನಡೆಯು ಕೈಗಾರಿಕಾ ರಂಗದ ಹಿನ್ನಡೆಗೆ ಕಾರಣವಾಗಿದೆ ಎಂದೂ ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.