ದಾವಣಗೆರೆ: ಬಿಪಿಎಲ್ ಕುಟುಂಬಗಳಿಗೆ ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ನೀಡುವ ಯೋಜನೆ ರಾಜ್ಯದಲ್ಲಿ ಜುಲೈ 1ರಿಂದ ಜಾರಿಗೆ ಬರಲಿದೆ. ಇದಕ್ಕೆ ಕೊರತೆ ಬೀಳುವ 1.3 ಲಕ್ಷ ಟನ್ ಅಕ್ಕಿಯನ್ನು ಛತ್ತೀಸಗಡ ಸರ್ಕಾರದಿಂದ ಖರೀದಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಸಚಿವ ಶಾಮನೂರು ಶಿವಶಂಕರಪ್ಪ ಅವರ 83ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ ಅವರು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಅಕ್ಕಿ ಬೆಲೆ ಹೆಚ್ಚದು: ಎಪಿಎಲ್ ಕುಟುಂಬಗಳಿಗೆ ಅಕ್ಕಿ ವಿತರಣೆ ನಿಲ್ಲಿಸುವುದರಿಂದ ಬೆಲೆ ಏರಿಕೆ ಆಗುವುದಿಲ್ಲ. ಎಪಿಎಲ್ ಕುಟುಂಬ ವರ್ಗ ಪಡಿತರ ವ್ಯವಸ್ಥೆ ಅಡಿ ಈ ಹಿಂದೆಯೂ ಅಕ್ಕಿ ಖರೀದಿಸಿರುವುದು ಕಡಿಮೆ. ಹಾಗಾಗಿ, ಅದು ಅಕ್ಕಿ ಬೆಲೆಯ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದರು.
ಮೊದಲು ಘೋಷಿಸಿದಂತೆ ಪ್ರತಿ ಕುಟುಂಬಕ್ಕೆ 30 ಕೆ.ಜಿ. ಅಕ್ಕಿ ನೀಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಒಬ್ಬರು, ಇಬ್ಬರು ಇರುವ ಕುಟುಂಬಕ್ಕೆ 30 ಕೆ.ಜಿ. ನೀಡಿದರೆ ದುರುಪಯೋಗವಾಗುವ ಸಾಧ್ಯತೆ ಇರುತ್ತದೆ. ರಾಜ್ಯದಲ್ಲಿ ಇರುವ 98 ಲಕ್ಷ ಬಿಪಿಎಲ್ ಕುಟುಂಬಗಳಲ್ಲಿ ಒಬ್ಬರು ಹಾಗೂ ಇಬ್ಬರು ಸದಸ್ಯರು ಇರುವ ಕುಟುಂಬಗಳು ಕೇವಲ 11 ಲಕ್ಷ. ಹೀಗಾಗಿ, ಯೂನಿಟ್ ಪದ್ಧತಿ ಅನುಸರಿಸಲಾಗುತ್ತಿದೆ ಎಂದು ಸಮರ್ಥಿಸಿಕೊಂಡರು.
ಪ್ರಯಾಣ ದರ ಏರಿಕೆಗೆ ಸಮರ್ಥನೆ: ಡೀಸೆಲ್ ಬೆಲೆಯ ಸತತ ಏರಿಕೆಯಿಂದ ಆಗುತ್ತಿದ್ದ ನಷ್ಟ ತುಂಬಲು ಬಸ್ ಪ್ರಯಾಣದರ ಏರಿಕೆ ಅನಿವಾರ್ಯವಾಗಿತ್ತು ಎಂದು ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿ ಬಸ್ ದರ ಏರಿಕೆಯನ್ನು ಸಮರ್ಥಿಸಿಕೊಂಡರು.
`ಬೆಂಗಳೂರಿಗೇ ನೀರಿಲ್ಲ': `ತಮಿಳುನಾಡಿಗೆ ನೀರು ಬಿಡದ ರಾಜ್ಯದ ಧೋರಣೆ ನ್ಯಾಯಾಂಗ ನಿಂದನೆ ಆಗುವುದಿಲ್ಲ. ನಾವು ನೀರು ಬಿಡುವುದಿಲ್ಲ ಎಂದು ಹೇಳಿಲ್ಲ. ನಮ್ಮ ಜಲಾಶಯದಲ್ಲಿ ನೀರಿಲ್ಲ ಎಂದು ಹೇಳಿದ್ದೇವೆ. ಸದ್ಯದ ಪರಿಸ್ಥಿತಿಯಲ್ಲಿ ಬೆಂಗಳೂರಿನ ಜನರಿಗೇ ಕುಡಿಯುವ ನೀರು ಸರಬರಾಜು ಮಾಡಲು ಕಷ್ಟವಾಗುತ್ತಿದೆ' ಎಂದು ರಾಜ್ಯದ ಧೋರಣೆಯನ್ನು ಸಮರ್ಥಿಸಿಕೊಂಡರು.
ಇಂದಿನಿಂದ ಬಜೆಟ್‌ಗೆ ಸಿದ್ಧತೆ
ಬಜೆಟ್ ಹೇಗಿರಬೇಕು ಎನ್ನುವ ಬಗ್ಗೆ ಇನ್ನೂ ನಿರ್ಧಾರ ಮಾಡಿಲ್ಲ. ಬಜೆಟ್ ಸಿದ್ಧತಾ ಕಾರ್ಯಕ್ಕೆ ಜೂನ್ 17ರಂದು ಚಾಲನೆ ನೀಡಲಾಗುವುದು. ಎಲ್ಲ ಇಲಾಖೆಗಳ ಮುಖ್ಯಸ್ಥರು ಹಾಗೂ ಅಧಿಕಾರಿಗಳ ಜತೆ ಚರ್ಚೆ ಆರಂಭಿಸಲಾಗುವುದು ಎಂದರು.
ಹೈಕಮಾಂಡ್ ಒಪ್ಪಿಗೆ ನೀಡಿದ ನಂತರ ಸಚಿವ ಸಂಪುಟ ವಿಸ್ತರಿಸಲಾಗುವುದು. ಜುಲೈ ನಂತರ ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕ ಮಾಡಲಾಗುವುದು. ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ, ಉಪಾಧ್ಯಕ್ಷರ ಮೀಸಲಾತಿ ಜಾರಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ನಗರ ಪ್ರದೇಶಗಳಲ್ಲಿ ಹೆಚ್ಚಿಸಿರುವ ನೀರಿನ ಕಂದಾಯ ಇಳಿಸುವ ಬಗ್ಗೆ ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.
ಗಣಿಗಾರಿಕೆ: ಸುಪ್ರೀಂಕೋರ್ಟ್ ನಿರ್ದೇಶನ ಹಾಗೂ ಲೋಕಾಯುಕ್ತ ಶಿಫಾರಸಿನಂತೆ ರಾಜ್ಯದಲ್ಲಿ ಗಣಿಗಾರಿಕೆಗೆ ಅವಕಾಶ ನೀಡಲಾಗುವುದು. ಆದರೆ, ಎಂತಹ ಸಂದರ್ಭದಲ್ಲೂ ಕಾನೂನುಬಾಹಿರ ಗಣಿಗಾರಿಕೆಗೆ ಅವಕಾಶ ನೀಡುವುದಿಲ್ಲ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.