ADVERTISEMENT

ರಾಜ್ಯದ ವಿವಿಧೆಡೆ ಮಳೆಯ ಸಿಂಚನ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2018, 19:30 IST
Last Updated 29 ಮಾರ್ಚ್ 2018, 19:30 IST
ಹನೂರು ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಗುರುವಾರ ಆಲಿಕಲ್ಲು ಸಹಿತ ಮಳೆ ಸುರಿಯಿತು. ಮಕ್ಕಳು ಅಲಿಕಲ್ಲುಗಳನ್ನು ಹೆಕ್ಕಿ ಸಂಭ್ರಮಿಸಿದರು. –ಪ್ರಜಾವಾಣಿ ಚಿತ್ರ
ಹನೂರು ತಾಲ್ಲೂಕಿನ ಕಣ್ಣೂರು ಗ್ರಾಮದಲ್ಲಿ ಗುರುವಾರ ಆಲಿಕಲ್ಲು ಸಹಿತ ಮಳೆ ಸುರಿಯಿತು. ಮಕ್ಕಳು ಅಲಿಕಲ್ಲುಗಳನ್ನು ಹೆಕ್ಕಿ ಸಂಭ್ರಮಿಸಿದರು. –ಪ್ರಜಾವಾಣಿ ಚಿತ್ರ   

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ಮೇಲ್ಮೈಸುಳಿಗಾಳಿ ಪರಿಣಾಮ ಬೆಂಗಳೂರು ನಗರ ಸೇರಿ ರಾಜ್ಯದ ವಿವಿಧೆಡೆ ಗುರುವಾರ ಬಿರುಗಾಳಿ ಸಹಿತ ಮಳೆ ಸುರಿದಿದೆ.

ರಾಜಧಾನಿಯಲ್ಲಿ 15 ನಿಮಿಷಕ್ಕೂ ಹೆಚ್ಚು ಕಾಲ ಆಲಿಕಲ್ಲು ಮಳೆಯಾಗಿದೆ. ಇನ್ನೆರಡು ದಿನಗಳು ರಾಜ್ಯದಲ್ಲಿ ಮಳೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಚಾಮರಾಜನಗರ ಜಿಲ್ಲೆ ಹನೂರು ತಾಲ್ಲೂಕಿನ ಕಣ್ಣೂರಿನಲ್ಲಿಯೂ ಅರ್ಧಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆ ಸುರಿದಿದೆ. ಆನಪುರ, ಮಂಗಳ, ಸಿಂಗಾನಲ್ಲೂರು, ದೊಡ್ಡಿಂದುವಾಡಿಗಳಲ್ಲಿ ಸಾಧಾರಣ ವರ್ಷಧಾರೆಯಾಗಿದೆ. ಕಣ್ಣೂರಿನಲ್ಲಿ 18.5 ಮಿ.ಮೀ, ಸಿಂಗಾನಲ್ಲೂರಿನಲ್ಲಿ 13 ಮಿ.ಮೀ ಮಳೆ ದಾಖಲಾಗಿದೆ.

ADVERTISEMENT

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲ್ಲೂಕಿನ ಮಾಡದಕೆರೆ ಹಾಗೂ ವಿವಿಧೆಡೆ ಬಿರುಗಾಳಿ ಸಹಿತ ಮಳೆಯಾಗಿದೆ. ಮಾಡದಕೆರೆಯ ಇಂದ್ರ
ಕುಮಾರ್, ನವೀನ್, ಶಿವಣ್ಣ ಎಂಬುವವರಿಗೆ ಸೇರಿದ ಬಾಳೆ, ಅಡಿಕೆ, ತೆಂಗಿನ ಮರಗಳು ನೆಲಕ್ಕುರುಳಿದೆ.

ಕೆಂಕೆರೆ ಗ್ರಾಮದಲ್ಲಿ 9 ವಿದ್ಯುತ್ ಕಂಬಗಳ ಜತೆಗೆ ವಿದ್ಯುತ್ ಪರಿವರ್ತಕಗಳು ಸಹ ಬಿದ್ದಿದ್ದು, ವಿದ್ಯುತ್ ವ್ಯತ್ಯಯ ಉಂಟಾಗಿದೆ. ಒಂದು ಗಂಟೆಗೂ ಅಧಿಕ ಹೊತ್ತು ಸುರಿದ ಮಳೆಯಿಂದಾಗಿ ಹಳ್ಳಗಳಲ್ಲಿ ನೀರು ಹರಿದು, ಹೊರನುಗ್ಗುತ್ತಿದೆ.

ಶಿಗ್ಗಾವಿಯಲ್ಲಿ 2 ಸೆಂ.ಮೀ ಮಳೆ: ಗುರುವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಬೆಂಗಳೂರು ದಕ್ಷಿಣ ಒಳನಾಡಿನ ಕೆಲವೆಡೆ ಮಳೆಯಾಗಿದೆ. ಉತ್ತರ ಒಳನಾಡು ಹಾಗೂ ಕರಾವಳಿ ಭಾಗದಲ್ಲಿ ಒಣ ಹವೆ ಮುಂದುವರೆದಿದೆ.

ಶಿಗ್ಗಾವಿಯಲ್ಲಿ 2 ಸೆಂ.ಮೀ ಮಳೆಯಾಗಿದೆ. ಕಲಬುರ್ಗಿಯಲ್ಲಿ 41.8 ಡಿಗ್ರಿ ಸೆಲ್ಸಿಯಸ್‌ ಗರಿಷ್ಠ ಉಷ್ಣಾಂಶ ಹಾಗೂ ಬೀದರ್‌ನಲ್ಲಿ 17.6 ಡಿಗ್ರಿ ಸೆಲ್ಸಿಯಸ್‌ ಕನಿಷ್ಠ ಉಷ್ಣಾಂಶ ದಾಖಲಾಗಿದೆ.

ಹವಾಮಾನ ಮುನ್ಸೂಚನೆ: ಮುಂದಿನ 48 ಗಂಟೆಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಒಳನಾಡು, ಕರಾವಳಿಯ ಕೆಲವೆಡೆ ಒಣಹವೆ ಮುಂದುವರೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.