ADVERTISEMENT

ರಾಜ್ಯದ ವೈದ್ಯರಿಂದ ಆರೋಪಿ ಪಾತ್ರ ಸಾಬೀತು

ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2013, 19:59 IST
Last Updated 12 ಸೆಪ್ಟೆಂಬರ್ 2013, 19:59 IST

ಹುಬ್ಬಳ್ಳಿ: ದೆಹಲಿಯಲ್ಲಿ ಕಳೆದ ವರ್ಷ ನಡೆದ ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ವಿಶೇಷ ತನಿಖಾ ತಂಡ (ಎಸ್ಐಟಿ) ಸಾಕಷ್ಟು ಶ್ರಮವಹಿಸಿ ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರ­ಗಳನ್ನು ಸಂಗ್ರಹಿಸಿದರೆ, ಅಂತಿಮವಾಗಿ ಬಂಧಿತ ಆರೋಪಿಗಳೇ ಈ ದುಷ್ಕೃತ್ಯವನ್ನು ನಡೆಸಿದ್ದಾರೆ ಎಂಬುದನ್ನು ಸಾಬೀತು­ಪಡಿಸುವಲ್ಲಿ ಧಾರವಾಡ ಬಳಿಯ ಸತ್ತೂರಿನಲ್ಲಿರುವ ಎಸ್ಡಿಎಮ್ ದಂತ ಮಹಾವಿದ್ಯಾಲಯದ ವೈದ್ಯರ ಪಾತ್ರ  ಪ್ರಮುಖವಾಗಿದೆ.

ಅತ್ಯಾಚಾರಕ್ಕೆ ಒಳಗಾಗಿದ್ದ ಯುವತಿಯ ಮೈ ಮೇಲಿನ ಕಚ್ಚಿದ ಗಾಯದ ಗುರುತುಗಳು ಈ ಪ್ರಕರಣದ ತನಿಖೆಯಲ್ಲಿ ಪ್ರಮುಖ ಪುರಾವೆಗಳಾಗಿದ್ದವು. ಯುವತಿ ಧರಿಸಿದ್ದ ಬಟ್ಟೆಗಳನ್ನು ದೆಹಲಿಯಲ್ಲಿ ಡಿಎನ್ಎ ಪರೀಕ್ಷೆಗೆ ಒಳಪಡಿಸಲಾಗಿತ್ತಾದರೂ, ಯುವತಿಯ ಮೈಮೇಲಿನ ಕಚ್ಚಿದ ಗಾಯದ ಗುರುತುಗಳಿಗೆ ಸಂಬಂಧಿಸಿದಂತೆ ನಿಖರವಾದ ಪರೀಕ್ಷೆ ನಡೆಸಿ, ವರದಿ ನೀಡಲು ಎಸ್ಐಟಿಯು ಸತ್ತೂರಿನಲ್ಲಿರುವ ಎಸ್ ಡಿಎಮ್ ದಂತ ಮಹಾವಿದ್ಯಾಲಯದ ವೈದ್ಯರ ಮೊರೆ ಹೋಗಿತ್ತು.

ಸುಸಜ್ಜಿತ 'ಡೆಂಟಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ' ಇರುವ ದೇಶದ ಏಕೈಕ ಸಂಸ್ಥೆ ಎಸ್‌ಡಿಎಮ್ ದಂತ ಮಹಾ­ವಿದ್ಯಾಲಯ. ಹಾಗಾಗಿ ಇಲ್ಲಿನ ಪ್ರಯೋಗಾಲಯದಲ್ಲಿ ಈ ಪ್ರಕ­ರಣ­ದ ಪರೀಕ್ಷೆಯನ್ನು ನಡೆಸಲಾಯಿತು. ಅಲ್ಲದೇ, ತಲೆ­ಬುರುಡೆ­ಯ ಪರೀಕ್ಷೆಯಿಂದ ವ್ಯಕ್ತಿಯ ನಿಖರವಾದ ವಯಸ್ಸು ಹಾಗೂ ಲಿಂಗವನ್ನು ಪತ್ತೆ ಹಚ್ಚುವಂತಹ ಸೌಲಭ್ಯ ಸಹ ಇದೊಂದೇ ಸಂಸ್ಥೆಯಲ್ಲಿದೆ.

'ಡೆಂಟಲ್ ಫೋರೆನ್ಸಿಕ್ ಸೈನ್ಸ್ ಲ್ಯಾಬೊರೇಟರಿ' ಮುಖ್ಯಸ್ಥ ಡಾ.ಆಶೀತ್ ಆಚಾರ್ಯ ಅವರೇ ಈ ಪ್ರಕರಣದಲ್ಲಿ ಆರೋಪಿಗಳು ಶಾಮೀಲಾಗಿರುವುದನ್ನು ಸಿದ್ಧಪಡಿಸಿ ವರದಿ ನೀಡಿದವರು. 'ವಿಚಾರಣೆ ನಡೆಸುತ್ತಿದ್ದ ದೆಹಲಿ ಕೋರ್ಟ್ ಮುಂದೆ ಸಹ ಹಾಜರಾಗಿರುವುದಾಗಿ' 'ಪ್ರಜಾವಾಣಿ'ಗೆ ತಿಳಿಸಿದ ಡಾ. ಆಚಾರ್ಯ, 'ನಾನು  ನೀಡಿದ ಈ ವರದಿಯ ಆಧಾರದ ಮೇಲೆಯೇ ಕೋರ್ಟ್ ಬಂಧಿತರ ವಿರುದ್ಧ ಆರೋಪ ಸಾಬೀತಾಗಿದೆ ಎಂಬುದಾಗಿ ಘೋಷಿಸಿತು' ಎಂದೂ ಹೇಳಿದರು.

ಈ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಧಾರಗಳ ಪೈಕಿ ಯುವತಿಯ ಮೈಮೇಲಿನ ಗಾಯಗಳ ಛಾಯಾ­ಚಿತ್ರಗಳನ್ನು ಹಾಗೂ ಈ ಗಾಯಗಳನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ನಲ್ಲಿ (ಪಿಒಪಿ) ಅಚ್ಚೊತ್ತಿರುವುದನ್ನು ಎಸ್ಐಟಿಯ ಅಧಿಕಾರಿ ವಿಶಾಲ್ ಚೌಧರಿ ಎಂಬುವವರು ಖುದ್ದಾಗಿ ಮಹಾವಿದ್ಯಾಲಯಕ್ಕೆ ತಂದಿದ್ದರಲ್ಲದೇ, ಈ ಸಾಕ್ಷಾ್ಯಧರಗಳ ಕೂಲಂಕಷ ವಿಶ್ಲೇಷಣೆ ಪೂರ್ಣ­ಗೊಳ್ಳುವವರೆಗೂ ಮಹಾವಿದ್ಯಾ­ಲಯದ ಅತಿಥಿಗೃಹ­ದಲ್ಲಿಯೇ ತಂಗಿದ್ದ ವಿಷಯ­ವನ್ನು ಗೋಪ್ಯವಾಗಿ ಕಾಪಾಡಲಾಗಿತ್ತು ಎಂದು ಅವರು ಹೇಳಿದರು.

ಇಂತಹ ಪ್ರಕರಣಗಳಲ್ಲಿ ಪರೀಕ್ಷೆಗಾಗಿ ವಿಶ್ವದಲ್ಲೆಡೆ ಬಳಸಲಾಗುವ 'ಟು ಡೈಮೆನ್ಷನಲ್ ಡಿಜಿಟಲ್ ಡೆಂಟಲ್ ಮಾರ್ಕ್ ಅನಲಿಸಿಸ್' ಎಂಬ ವಿಧಾನವನ್ನೇ ಬಳಸಲಾಗಿತ್ತು. ಯುವತಿಯ ದೇಹದ ಮೇಲಿನ ಗಾಯದ ಗುರುತುಗಳಿಗೂ ಪ್ರಕರಣದ ಆರೋಪಿಗಳಾದ ರಾಮ್‌ಸಿಂಗ್ ಮತ್ತು ಅಕ್ಷಯ್ ಠಾಕೂರ್ ಎಂಬುವವರ ಹಲ್ಲುಗಳ ಮಾದರಿಗಳ ನಡುವೆ  ಸಂಬಂಧ ಇರುವುದನ್ನು ಇದೇ ವಿಧಾನದ ಸಹಾಯದಿಂದ ಸಾಬೀತುಪಡಿಸಲಾಯಿತು ಎಂದೂ ವಿವರಿಸಿದರು.

'ರಾಮ್‌ಸಿಂಗ್ ನ ಹಲ್ಲಿನ ಮಾದರಿಯು ಯುವತಿಯ ಎಡ ಕೆನ್ನೆಯ ಮೇಲಿದ್ದ ಮೂರು ಗಾಯಗಳೊಂದಿಗೆ ಹೊಂದಾಣಿಕೆ­ಯಾದರೆ, ಹೊಟ್ಟೆಯ ಮೇಲಿದ್ದ ಎರಡು ಗಾಯದ ಗುರುತುಗಳೊಂದಿಗೆ ಅಕ್ಷಯ್ ಠಾಕೂರ್‌ನ  ಹಲ್ಲಿನ ಮಾದರಿ ಕರಾರುವಕ್ಕಾಗಿ ಹೊಂದಾಣಿಕೆಯಾದುದು ಪರೀಕ್ಷೆಯಲ್ಲಿ ದೃಢಪಟ್ಟಿತು' ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT