ADVERTISEMENT

ರಾಜ್ಯದ 173 ಏತ ನೀರಾವರಿ ಯೋಜನೆ `ನಿಷ್ಕ್ರಿಯ'

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 19:32 IST
Last Updated 17 ಡಿಸೆಂಬರ್ 2012, 19:32 IST

ದಾವಣಗೆರೆ: ಸಮರ್ಪಕ ನಿರ್ವಹಣೆಯ ಕೊರತೆ ಹಾಗೂ ಫಲಾನುಭವಿಗಳ ನಿರಾಸಕ್ತಿಯ ಪರಿಣಾಮ ನಿಷ್ಕ್ರಿಯಗೊಳ್ಳುತ್ತಿರುವ `ಏತ ನೀರಾವರಿ ಯೋಜನೆ'ಗಳ ಸಂಖ್ಯೆ ವರ್ಷ-ವರ್ಷಕ್ಕೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಈವರೆಗೆ 173 ಏತ ನೀರಾವರಿ ಯೋಜನೆಗಳು ಕೃಷಿ ಚಟುವಟಿಕೆಗೆ ಉಪಯೋಗಕ್ಕೆ ಬಾರದಂತಾಗಿವೆ. ಲಕ್ಷಾಂತರ ರೂಪಾಯಿ ಮೌಲ್ಯದ ಯಂತ್ರಗಳು ತುಕ್ಕು ಹಿಡಿಯುತ್ತಿವೆ.

ಸಣ್ಣ ನೀರಾವರಿ ಇಲಾಖೆ ಈಚೆಗೆ ಸಂಗ್ರಹಿಸಿದ ಅಂಕಿಸಂಖ್ಯೆಗಳ ಪ್ರಕಾರ, ಉತ್ತರ ಕರ್ನಾಟಕದಲ್ಲಿ ಇವುಗಳ ಪ್ರಮಾಣ ಹೆಚ್ಚು. ಒಟ್ಟು 173 ಯೋಜನೆಗಳಿಂದಾಗಿ ದಕ್ಷಿಣ ವಲಯ (8,475 ಹೆಕ್ಟೇರ್) ಹಾಗೂ ಉತ್ತರ ವಲಯ (23,953 ಹೆಕ್ಟೇರ್) ಸೇರಿ ಒಟ್ಟು 32,425 ಹೆಕ್ಟೇರ್ ಅಚ್ಚುಕಟ್ಟು ಪ್ರದೇಶದಲ್ಲಿ ಕೃಷಿಗೆ ಇದರ ಪ್ರಯೋಜನ ಸಿಗುತ್ತಿಲ್ಲ.

ಜಲ ಸಂಪನ್ಮೂಲ ಇಲಾಖೆ (ಸಣ್ಣ ನೀರಾವರಿ) ವತಿಯಿಂದ ಅಲ್ಲಲ್ಲಿ ಏತ ನೀರಾವರಿ ಯೋಜನೆ ಆರಂಭಿಸಲಾಗುತ್ತಿದೆ. ಆದರೆ, ನಿರ್ವಹಣೆ ಕೊರತೆ ಕಂಡುಬರುತ್ತಿದೆ. ಹೀಗಾಗಿ, ಯೋಜನೆಯಿಂದ `ತಾತ್ಕಾಲಿಕ ಪ್ರಯೋಜನ' ಆಗುತ್ತಿದೆಯೇ ಹೊರತು, ದೀರ್ಘ ಕಾಲದ ಪರಿಹಾರ ಸಿಗುತ್ತಿಲ್ಲ.

`ರೈತರೇ ಪಂಪ್‌ಸೆಟ್ ಹಾಕಿಕೊಂಡಿರುವುದರಿಂದ ಏತ ನೀರಾವರಿ ಯೋಜನೆ ಮೇಲಿನ ಅವಲಂಬನೆ ಕಡಿಮೆ ಆಗುತ್ತಿದೆ. ಬಹುತೇಕ ಯೋಜನೆಗಳು ಹಳೆಯವು. ಯಂತ್ರಗಳು ಹಳೆಯವಾಗಿವೆ ಅಥವಾ ಕೆಟ್ಟಿರುತ್ತವೆ. ಸರ್ಕಾರವೇ 10 ಅಶ್ವಶಕ್ತಿಯಷ್ಟು ಉಚಿತ ವಿದ್ಯುತ್ ನೀಡುತ್ತಿರುವುದರಿಂದ ರೈತರು ಸ್ವಂತ ಪಂಪ್‌ಸೆಟ್ ಹೊಂದುತ್ತಿದ್ದಾರೆ. ಎಕರೆ ಅಥವಾ ಬೆಳೆಗೆ ಇಂತಿಷ್ಟು ಎಂದು ಕಂದಾಯ ಕಟ್ಟಬೇಕಾಗುತ್ತದೆ ಎಂಬ ಕಾರಣಕ್ಕೆ ಏತ ನೀರಾವರಿ ಯೋಜನೆಯಿಂದ ನೀರು ಪಡೆಯಲು ರೈತರು ಮುಂದೆ ಬರುತ್ತಿಲ್ಲ' ಎನ್ನುತ್ತಾರೆ ಅಧಿಕಾರಿಗಳು.

ಈ ಬಗ್ಗೆ `ಪ್ರಜಾವಾಣಿ'ಗೆ ಪ್ರತಿಕ್ರಿಯಿಸಿದ ಸಣ್ಣ ನೀರಾವರಿ ಇಲಾಖೆ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಶಂಕರಾನಂದ ಮೂರ್ತಿ, `ರೈತರಿಂದಲೇ ಬೇಡಿಕೆ ಕಡಿಮೆಯಾಗಿದೆ. ಕೆಲವೆಡೆ ಯಂತ್ರಗಳು ಕೆಟ್ಟಿರುವುದರಿಂದ ನಿಷ್ಕ್ರಿಯವಾಗಿವೆ. ಕಡತಿಯಲ್ಲಿ ಯಂತ್ರ ಚೆನ್ನಾಗಿದೆ; ರೈತರು ನಿರಾಸಕ್ತಿ ತೋರಿದ್ದರಿಂದ ಬಳಕೆಗೆ ಬಾರದಂತಾಗಿದೆ. ಉಳಿದಂತೆ, ಜಿಲ್ಲೆಯಲ್ಲಿ 11 ಯೋಜನೆ ಚಾಲ್ತಿಯಲ್ಲಿದ್ದು, 8 ಸಾವಿರ ಹೆಕ್ಟೇರ್ ಅಚ್ಚುಕಟ್ಟು ಪ್ರದೇಶ ಹೊಂದಿವೆ' ಎಂದು ತಿಳಿಸಿದರು.

`ನಿರ್ವಹಣೆ ಕೊರತೆ ಯೋಜನೆಗಳು ನಿಷ್ಕ್ರಿಯಗೊಳ್ಳಲು ಕಾರಣ. ಏತ ನೀರಾವರಿ ಯೋಜನೆಗೆಂದೇ ಪ್ರತ್ಯೇಕ ಇಲಾಖೆ ಅಗತ್ಯವಿದೆ.ಏಕೆಂದರೆ, ನಿರ್ವಹಣೆ ಜಲ ಸಂಪನ್ಮೂಲ ಇಲಾಖೆಯದ್ದೇ ಅಥವಾ ಸಣ್ಣ ನೀರಾವರಿ ವಿಭಾಗದ್ದೇ ಎಂಬುದೇ ಸ್ಪಷ್ಟವಿಲ್ಲ. ಅನುದಾನ ಸಮರ್ಪಕವಾಗಿ ದೊರೆಯುತ್ತಿಲ್ಲ.

ಫಲಾನುಭವಿಗಳು ಕೂಡ ಜವಾಬ್ದಾರಿ ತೆಗೆದುಕೊಳ್ಳುವುದಿಲ್ಲ. ಹೀಗಾಗಿ, ಆ ಕ್ಷಣದ ಸಮಸ್ಯೆ ಪರಿಹಾರಕ್ಕಷ್ಟೇ ಏತ ನೀರಾವರಿ ಯೋಜನೆ ಎನ್ನುವಂತಾಗಿದೆ' ಎನ್ನುತ್ತಾರೆ ರಾಜ್ಯ ಕಬ್ಬು ಬೆಳೆಗಾರರ ಸಂಘದ ಪ್ರಧಾನ ಕಾರ್ಯದರ್ಶಿ ತೇಜಸ್ವಿ ವಿ. ಪಟೇಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.