ADVERTISEMENT

ರಾಜ್ಯಪಾಲರ ವಿರುದ್ಧ ಪ್ರತಿಭಟನೆ; ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರ ಬಂಧನ

​ಪ್ರಜಾವಾಣಿ ವಾರ್ತೆ
Published 17 ಮೇ 2018, 19:30 IST
Last Updated 17 ಮೇ 2018, 19:30 IST
ಪ್ರತಿಭಟನಾನಿರತ ಜೆಡಿಎಸ್‌ ಕಾರ್ಯಕರ್ತರನ್ನು ಕಲಬುರ್ಗಿಯಲ್ಲಿ ಗುರುವಾರ ಬಂಧಿಸಲಾಯಿತು
ಪ್ರತಿಭಟನಾನಿರತ ಜೆಡಿಎಸ್‌ ಕಾರ್ಯಕರ್ತರನ್ನು ಕಲಬುರ್ಗಿಯಲ್ಲಿ ಗುರುವಾರ ಬಂಧಿಸಲಾಯಿತು   

ಬೆಂಗಳೂರು: ರಾಜ್ಯದ ಮುಖ್ಯಮಂತ್ರಿಯಾಗಿ ಬಿ.ಎಸ್‌. ಯಡಿಯೂರಪ್ಪ ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆ, ರಾಜ್ಯದ ಎಲ್ಲೆಡೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕಾರ್ಯಕರ್ತರ ಆಕ್ರೋಶ ಭುಗಿಲೆದ್ದಿತು. ವಿಧಾನಸೌಧ ಬಳಿ ಪ್ರತಿಭಟನೆ ನಡೆಸಿದ ಕಾರ್ಯಕರ್ತರು, ಬಿಜೆಪಿ ಮುಖಂಡರ ವಿರುದ್ಧ ಕಿಡಿಕಾರಿದರು.

‘ಸರ್ಕಾರ ರಚನೆಗೆ ರಾತ್ರೋರಾತ್ರಿ ಬಿಜೆಪಿಗೆ ಅವಕಾಶ ನೀಡುವ ಮೂಲಕ ರಾಜ್ಯಪಾಲರು, ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಕುದುರೆ ವ್ಯಾಪಾರಕ್ಕೆ ಕುಮ್ಮಕ್ಕು ನೀಡಿದ್ದಾರೆ’ ಎಂದು ಕಾರ್ಯಕರ್ತರು ಆರೋಪಿಸಿದರು.

ವಿಧಾನಸೌಧದ ಮುಖ್ಯದ್ವಾರದ ಬಳಿ ಸೇರಿದ್ದ ಯುವ ಕಾಂಗ್ರೆಸ್ ಕಾರ್ಯಕರ್ತರು, ರಾಜ್ಯಪಾಲ ವಜುಭಾಯಿ ವಾಲಾ, ಪ್ರಧಾನಿ ನರೇಂದ್ರ ಮೋದಿ ಹಾಗೂ ಯಡಿಯೂರಪ್ಪ ವಿರುದ್ಧ ಧಿಕ್ಕಾರ ಕೂಗಿದರು. ಇದೇ ವೇಳೆ ವಾಹನಗಳನ್ನು ತಡೆದು ಪ್ರತಿಭಟನೆ ನಡೆಸಲು ಮುಂದಾದರು.

ADVERTISEMENT

ಸ್ಥಳದಲ್ಲಿದ್ದ ಪೊಲೀಸರು, 30ಕ್ಕೂ ಹೆಚ್ಚು ಕಾರ್ಯಕರ್ತರನ್ನು ಬಂಧಿಸಿ ಬಸ್‌ನಲ್ಲಿ ಕರೆದೊಯ್ದರು. ಈ ವೇಳೆ ಮಾತಿನ ಚಕಮಕಿ ನಡೆದು, ತಳ್ಳಾಟ‌ ಉಂಟಾಯಿತು. ಬಸ್ಸಿನಲ್ಲೂ ಕಾರ್ಯಕರ್ತರು ಘೋಷಣೆ ಕೂಗಿ, ಬಂಧನವನ್ನು ಖಂಡಿಸಿದರು.

ಜೆಡಿಎಸ್‌ ಕಾರ್ಯಕರ್ತರ ಬಂಧನ: ಜೆಡಿಎಸ್ ಪಕ್ಷದ ನಗರ ಘಟಕದ ಕಾರ್ಯಕರ್ತರು ವಿಧಾನಸೌಧ ಪಶ್ಚಿಮ ದ್ವಾರದಲ್ಲಿ ಪ್ರತಿಭಟನೆ ನಡೆಸಿದರು. ಜಿಲ್ಲಾ ಘಟಕದ ಅಧ್ಯಕ್ಷ ಆರ್.ಪ್ರಕಾಶ್‌ ನೇತೃತ್ವದಲ್ಲಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ರಸ್ತೆಯಲ್ಲೇ ಕುಳಿತು ಘೋಷಣೆ ಕೂಗಿದ್ದ ಪ್ರತಿಭಟನಾಕಾರರು, ‘ಜೆಡಿಎಸ್‌ ಪಕ್ಷಕ್ಕೆ ಶಾಸಕರ ಬಹುಮತವಿದ್ದರೂ ರಾಜ್ಯಪಾಲರು ಸರ್ಕಾರ ರಚಿಸಲು ಅನುಮತಿ ನೀಡಿಲ್ಲ. ಅವರದ್ದು ಸಂವಿಧಾನ ವಿರೋಧಿ ನಡೆ ಆಗಿದೆ. ಇದರ ವಿರುದ್ಧ ರಾಜ್ಯದಾದ್ಯಂತ ಹೋರಾಟ ನಡೆಸಲಿದ್ದೇವೆ’ ಎಂದರು.

‘ಶಾಸಕರನ್ನು ಖರೀದಿಸಲು ಅಮಿತ್ ಶಾ ಹೊರಟಿದ್ದಾರೆ. ಆ ಮೂಲಕ ಅಕ್ರಮವಾಗಿ ಅಧಿಕಾರ ಹಿಡಿಯಲು ಮುಂದಾಗಿದ್ದಾರೆ’ ಎಂದು ಪ್ರತಿಭಟನಾಕಾರರು ದೂರಿದರು.

ಈ ವೇಳೆಯಲ್ಲೇ ಬಿಎಂಟಿಸಿ ಬಸ್‌ ಸಂಚಾರ ತಡೆಯಲು ಮುಂದಾದರು. ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಕಾರ್ಯಕರ್ತರನ್ನು ಚದುರಿಸಿದರು. ಈ ವೇಳೆ 10 ಕಾರ್ಯಕರ್ತರನ್ನು ಬಂಧಿಸಿ ಬಸ್ಸಿನಲ್ಲಿ ಕರೆದೊಯ್ದರು. ಅವರೆಲ್ಲರನ್ನೂ ಸಂಜೆ ಬಿಡುಗಡೆಗೊಳಿಸಲಾಯಿತು.
*
ಬಿಜೆಪಿ ಕಾರ್ಯಕರ್ತರಿಗೂ ಲಾಠಿ ಏಟು

ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ಸ್ಥಳದಲ್ಲೇ ಗುಂಪು ಕಟ್ಟಿಕೊಂಡು ನಿಂತಿದ್ದ ಬಿಜೆಪಿ ಕಾರ್ಯಕರ್ತರ ಮೇಲೂ ಪೊಲೀಸರು ಲಾಠಿ ಬೀಸಿದರು.

ವಿಧಾನಸೌಧ ಪಶ್ಚಿಮ ದ್ವಾರದ ಬಳಿ ನಿಂತಿದ್ದ ಬಿಜೆಪಿಯವರು, ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಿದ್ದ ಬಸ್‌ ಕಂಡು ಧಿಕ್ಕಾರ ಕೂಗಿದರು. ಅದಕ್ಕೆ ಪ್ರತಿಯಾಗಿ ಜೆಡಿಎಸ್‌ನವರು ಸಹ ಘೋಷಣೆ ಕೂಗಲಾರಂಭಿಸಿದರು. ಗಲಾಟೆ ಆಗುವ ಲಕ್ಷಣ ಕಾಣಿಸುತ್ತಿದ್ದಂತೆ ಎರಡೂ ಪಕ್ಷಗಳ ಕಾರ್ಯಕರ್ತರನ್ನು ಪೊಲೀಸರು ಚದುರಿಸಿದರು.

ಪೊಲೀಸರಿಂದ ತಪ್ಪಿಸಿಕೊಂಡು ಓಡಿದ ಕಾರ್ಯಕರ್ತರು, ಸಿಕ್ಕ ಸಿಕ್ಕಲೆಲ್ಲ ಪಕ್ಷದ ಬಾವುಟಗಳನ್ನು ನೇತು ಹಾಕಿದರು. ಒಂದು ಗಂಟೆಯ ಬಳಿಕ ಕಾರ್ಯಕರ್ತರು ಸ್ಥಳಕ್ಕೆ ವಾಪಸ್‌ ಬಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.