
ವರ್ಷದ ಮುನ್ನೂರ ಅರವತ್ತನಾಲ್ಕು ದಿನಗಳಲ್ಲಿ ಹೆಂಡತಿಯಿಂದ ‘ಪೂಜೆ ಮಾಡಿಸಿಕೊಳ್ಳಲು ಹಿಂಜರಿಯುವ ಗಂಡಂದಿರು, ಪ್ರಸನ್ನವದನರಾಗಿ ಪತ್ನಿಯರಿಂದ ವರ್ಷಕ್ಕೊಮ್ಮೆ ‘ಪೂಜೆ’ ಸ್ವೀಕರಿಸುವ ಏಕೈಕ ದಿನ ‘ಭೀಮನ ಅಮಾವಾಸ್ಯೆ. ಇತರೆ ಅಮಾವಾಸ್ಯೆಗಳು ತಮ್ಮ ಕತ್ತಲೆಯ ರೂಪಕದ ಮೂಲಕ ಹೆದರಿಸಿದರೆ, ‘ಭೀಮನ ಅಮಾವಾಸ್ಯೆ’ಗೆ ಪ್ರೇಮದ ಸ್ವರೂಪ ಇರುವುದು ವಿಶೇಷ. ಅಂದಹಾಗೆ, ‘ಭೀಮನ ಅಮಾವಾಸ್ಯೆ’, ‘ಅಳಿಯನ ಅಮಾವಾಸ್ಯೆ’, ‘ಗಟಾರದ ಅಮಾವಾಸ್ಯೆ’ – ಹೀಗೆ ಬೇರೆ ಬೇರೆ ಹೆಸರುಗಳಲ್ಲಿ ಕರೆಸಿಕೊಳ್ಳುವ ಈ ಆಷಾಢ ಬಹುಳ ಅಮಾವಾಸ್ಯೆಗೆ ‘ಕರಾಳ ಛಾಯೆ’ ಅಂಟಿಕೊಂಡಿದ್ದು ಹದಿನಾರು ವರ್ಷಗಳ ಹಿಂದೆ – ಜುಲೈ 30ರ ಭೀಮನ ಅಮಾವಾಸ್ಯೆಯ ದಿನ.
ಜುಲೈ 31ರ ಮುಂಜಾವಿನ ವೇಳೆಗೆ ಕರ್ನಾಟಕದಲ್ಲಿ ಪ್ರಕ್ಷುಬ್ಧ ಸ್ಥಿತಿ. ನಿದ್ದೆ ಎತ್ತ ಜನರಿಗೆ, ಇದು ಕನಸೋ ನನಸೋ ಎಂದು ನಂಬಲಾಗದ ಅಯೋಮಯ ಸ್ಥಿತಿ. ಆದುದಿಷ್ಟು: ಚಾಮರಾಜನಗರ ಜಿಲ್ಲೆಯ ಗಾಜನೂರಿನ ತೋಟದ ಮನೆಯಿಂದ ರಾಜಕುಮಾರ್ ಅವರನ್ನು ವೀರಪ್ಪನ್ ಅಪಹರಿಸಿದ್ದ. ರಾಜಕುಮಾರ್ ಅವರ ಹೊಸ ಸಿನಿಮಾದ ನಿರೀಕ್ಷೆಯಲ್ಲಿದ್ದ ಕನ್ನಡಿಗರಿಗೆ ‘ಅಪಹರಣ ಸುದ್ದಿ’ಯೇ ಒಂದು ಅರಗಿಸಿಕೊಳ್ಳಲಾಗದ ಚಿತ್ರಪಟವಾಗಿ ಪರಿಣಮಿಸಿತು.
ಅಪಹರಣ ಪ್ರಕರಣ ಕೂಡ ಒಂದು ಸಿನಿಮಾದಂತೆಯೇ ಮುಂದುವರೆಯಿತು. ‘ಇಂದು ಕಾಡಿನಿಂದ ಬರುತ್ತಾರೆ, ನಾಳೆ ಬರುತ್ತಾರೆ’ ಎನ್ನುವ ರಾಜ್ ಆಗಮನದ ನಿರೀಕ್ಷೆ ‘ಶತದಿನೋತ್ಸವ’ ದಾಟಿ 108 ದಿನಗಳವರೆಗೆ ತಲುಪಿತು. ವರನಟನ ಬಿಡುಗಡೆಗಾಗಿ ನಾಡಿನಾದ್ಯಂತ ಪ್ರಾರ್ಥನೆಗಳು ಮೊಳಗಿದವು. ಕೆಲವು ಅಭಿಮಾನಿಗಳು ಕಾಡಿನೊಳಗೂ ಹೊರಗೂ ಓಡಾಡಿ ಬಂದರು. ಕೊನೆಗೆ, 108 ದಿನಗಳ ನಂತರ ರಾಜಕುಮಾರ್ ಕಾಡಿನಿಂದ ನಾಡಿಗೆ ಬಂದರು. ಅವರ ಬಿಡುಗಡೆಗಾಗಿ ವೀರಪ್ಪನ್‌ಗೆ ಏನೆಲ್ಲ ಸಂದಾಯವಾಯಿತು ಎನ್ನುವುದು ಕೊನೆಗೂ ಗುಟ್ಟಾಗಿಯೇ ಉಳಿಯಿತು.
ನಾಡಿಗೆ ಬಂದಮೇಲೆ ಕೂಡ ರಾಜಕುಮಾರ್ ತಮ್ಮ ಕಾಡಿನ ದಿನಗಳ ಬಗ್ಗೆ ನೋವಿನಿಂದ ಮಾತನಾಡಲಿಲ್ಲ. ವೀರಪ್ಪನ್ ಬಗ್ಗೆ ಕೆಟ್ಟ ಮಾತುಗಳನ್ನಾಡಲಿಲ್ಲ. ಎಂದಿನಂತೆ ನಗುನಗುತ್ತಲೇ ಕಾಡಿನ ತಮ್ಮ ಅನುಭವಗಳನ್ನು ರಸವತ್ತಾಗಿ ಬಣ್ಣಿಸತೊಡಗಿದರು. ಅವರ ವ್ಯಕ್ತಿತ್ವದ ಪ್ರೌಢಿಮೆಗೆ ‘ಅಪಹರಣ’ ಪ್ರಸಂಗ ಕೂಡ ಒಂದು ಉದಾಹರಣೆಯಾಗಿ ಒದಗಿಬಂದಂತಿತ್ತು.
ಒಂದೂವರೆ ದಶಕದ ಹಾದಿಯಲ್ಲಿ ಎಷ್ಟೆಲ್ಲ ಬದಲಾವಣೆಗಳಾಗಿವೆ! ರಾಜ್ ಹಾಗೂ ವೀರಪ್ಪನ್ ಇಬ್ಬರೂ ಈಗಿಲ್ಲ. 2004ರಲ್ಲಿ ವೀರಪ್ಪನ್ ಕರ್ನಾಟಕ–ತಮಿಳುನಾಡಿನ ವಿಶೇಷ ಪಡೆಗಳ ಕಾರ್ಯಾಚರಣೆಗೆ ಬಲಿಯಾದ. ಅದಾದ ಎರಡು ವರ್ಷಕ್ಕೆ (2006ರಲ್ಲ) ರಾಜಕುಮಾರ್ ನಿಧನರಾದರು.
ಈಗ ಮತ್ತೊಂದು ಭೀಮನ ಅಮಾವಾಸ್ಯೆ! ಇದು ತರುಣ ತರುಣಿಯರಲ್ಲಿ ದಾಂಪತ್ಯದ ಸಿಹಿಯನ್ನು ಗಾಢವಾಗಿಸುವ ಒಂದು ಸಂದರ್ಭ. ಇದೇ ಸಂದರ್ಭಕ್ಕೆ ರಾಜಕುಮಾರ್ ಅಪಹರಣದ ಕರಾಳ ನೆನಪಿನ ಛಾಯೆಯೂ ಇದೆ. ಕನ್ನಡಿಗರ ಪಾಲಿಗೆ ರಾಜ್ ನೆನಪು–ನಿಟ್ಟುಸಿರಿಲ್ಲದೆ ಭೀಮನ ಅಮಾವಾಸ್ಯೆ ಪೂರ್ಣಗೊಳ್ಳುವುದಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.