ADVERTISEMENT

ರಾಜ್ ಕುರಿತ ಪುನೀತ್ ಕೃತಿ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 2 ಜೂನ್ 2012, 19:30 IST
Last Updated 2 ಜೂನ್ 2012, 19:30 IST
ರಾಜ್ ಕುರಿತ ಪುನೀತ್ ಕೃತಿ ಬಿಡುಗಡೆ
ರಾಜ್ ಕುರಿತ ಪುನೀತ್ ಕೃತಿ ಬಿಡುಗಡೆ   

ಬೆಂಗಳೂರು: ನಟ ಪುನೀತ್ ರಾಜ್‌ಕುಮಾರ್ ರಚಿಸಿರುವ `ಡಾ.ರಾಜ್‌ಕುಮಾರ್: ವ್ಯಕ್ತಿತ್ವದ ಹಿಂದಿನ ವ್ಯಕ್ತಿ~ ಪುಸ್ತಕದ ಕನ್ನಡ ಮತ್ತು ಇಂಗ್ಲಿಷ್ ಆವೃತ್ತಿಗಳನ್ನು ಶನಿವಾರ ಬಿಡುಗಡೆ ಮಾಡಲಾಯಿತು.

ನಗರದ ತಾರಾ ಹೋಟೆಲ್‌ನಲ್ಲಿ ನಡೆದ ಸಮಾರಂಭದಲ್ಲಿ ಪಾರ್ವತಮ್ಮ ರಾಜ್‌ಕುಮಾರ್ ಮತ್ತು ರಾಜ್ ಅವರ ಸಹೋದರಿ ನಾಗಮ್ಮ ಕೃತಿ ಬಿಡುಗಡೆ ಮಾಡಿದರು.

`ಅಪ್ಪಾಜಿ (ರಾಜ್) ಕುರಿತು ಕೃತಿ ರಚಿಸಬೇಕೆಂದು 1997ರಲ್ಲಿ ಪುನೀತ್ ಅವರಲ್ಲಿ ಹುಟ್ಟಿದ ಕನಸು ಈಗ ನನಸಾಗಿದೆ~ ಎಂದು ಸಂಭ್ರಮಿಸಿದ ರಾಘವೇಂದ್ರ ರಾಜ್‌ಕುಮಾರ್, `ಪುಸ್ತಕದ ಮಾರಾಟದಿಂದ ಬರುವ ಎಲ್ಲ  ಹಣವನ್ನು ಕನ್ನಡ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಲಾಗುವುದು~ ಎಂದು ಘೋಷಿಸಿದರು.

`ಸಾವಿರಾರು ಕಿ.ಮೀ. ವಲಸೆ ಹೋಗುವ ಪಕ್ಷಿಗಳಿಗೆ ಮರಿ ಪಕ್ಷಿಗಳು ದಾರಿ ತೋರುತ್ತವಂತೆ. ನಮ್ಮ ಕಿರಿಯ ಸಹೋದರ ಪುನೀತ್, ಅಪ್ಪಾಜಿ ಕುರಿತ ಕೃತಿ ರಚಿಸುವ ಮೂಲಕ ಅಂತಹ ಕೆಲಸ ಮಾಡಿದ್ದಾನೆ~ ಎಂದರು.
`ಅಪ್ಪಾಜಿ ಬಗ್ಗೆ ಇದುವರೆಗೆ 66 ಕೃತಿಗಳು ಬಂದಿವೆ. ಅವುಗಳಿಗೆ ಹೊರತಾಗಿ ಪುನೀತ್ ಕೃತಿಯಲ್ಲಿ ನಾವು ಹೊಸ ವಿಷಯ ಹೇಳಲು ಹೊರಟಿಲ್ಲ. ಆದರೆ ಸಣ್ಣ ಪುಟ್ಟ ಸುಂದರ ವಿಷಯಗಳನ್ನು ಹೇಳುವ ಪ್ರಯತ್ನ ಮಾಡಿದ್ದೇವೆ~ ಎಂದು ಅವರು ತಿಳಿಸಿದರು.

ಪುನೀತ್ ಮಾತನಾಡಿ, `ಬಂಧು ಬಾಂಧವರು, ಛಾಯಾಗ್ರಾಹಕರು, ಅಭಿಮಾನಿಗಳಿಂದ ಸಂಗ್ರಹಿಸಿದ ಛಾಯಾಚಿತ್ರಗಳು ಕೃತಿಯಲ್ಲಿವೆ. ಇವುಗಳ ಸಂಗ್ರಹಕ್ಕೆ 3-4 ವರ್ಷ ಹಿಡಿಯಿತು. ಕೃತಿ ರಚನೆಗೆ ಸ್ನೇಹಿತ ಪ್ರಕೃತಿ ಬನವಾಸಿ ಹೆಚ್ಚು ಕಷ್ಟಪಟ್ಟಿದ್ದಾನೆ~ ಎಂದರು.

`ಕೃತಿಯಲ್ಲಿ ಯಾವುದೇ ಭಾಗ ಓದಿದರೂ ಖುಷಿ ಆಗಬೇಕು. ಒಟ್ಟಾರೆ ಚಿಕ್ಕದಾಗಿ ಚೊಕ್ಕವಾಗಿರಬೇಕೆಂಬ ಆಶಯದೊಂದಿಗೆ ಈ ಕೃತಿಯನ್ನು ರಚಿಸಿದ್ದೇವೆ~ ಎಂದು ಅವರು ತಿಳಿಸಿದರು.ನಟ ಶಿವರಾಜ್‌ಕುಮಾರ್ ಮಾತನಾಡಿದರು.

ಒಂದು ಲಕ್ಷ ರೂಪಾಯಿಗೆ ಖರೀದಿ:  ಪುಸ್ತಕದ ಹಣವನ್ನು ಕನ್ನಡ ಶಾಲೆಗಳ ಅಭಿವೃದ್ಧಿಗೆ ಬಳಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ ಬಿಡುಗಡೆಯಾದ ಕೃತಿಯ ಮೊದಲ ಪ್ರತಿಯನ್ನು ಪಾರ್ವತಮ್ಮ ರಾಜ್‌ಕುಮಾರ್ ಅವರು ಒಂದು ಲಕ್ಷ ರೂಪಾಯಿ ಚೆಕ್ ನೀಡಿ ಖರೀದಿಸಿದರು. ಪೋತರಾಜು, ಮಹದೇವಯ್ಯ ಎಂಬುವವರು ಸಹ ಒಂದು ಲಕ್ಷ ರೂಪಾಯಿ ನೀಡಿ ಪುಸ್ತಕ ಕೊಂಡರು.

ಕೃತಿಯಲ್ಲಿ 1,750 ಚಿತ್ರಗಳು!: ಕಾಫಿ ಟೇಬಲ್ ಪುಸ್ತಕದ ಆಕಾರದಲ್ಲಿರುವ ಕೃತಿಯಲ್ಲಿ ಸುಮಾರು ಒಂದು ಲಕ್ಷ ಪದಗಳು ಮತ್ತು 1,750 ಚಿತ್ರಗಳ ಮೂಲಕ ರಾಜ್ ಕುರಿತು ಸಮಗ್ರ ಚಿತ್ರಣ ಕಟ್ಟಿಕೊಡಲು ಪ್ರಯತ್ನಿಸಲಾಗಿದೆ.

ಬೆಲೆ: ಕನ್ನಡ ಆವೃತ್ತಿ- ರೂ. 2,250. ಆಂಗ್ಲ ಆವೃತ್ತಿ- ರೂ. 2,750. ರಾಜ್ಯದ ಬಹುತೇಕ ಪುಸ್ತಕ ಮಳಿಗೆಗಳಲ್ಲಿ ಪುಸ್ತಕ ದೊರೆಯುವಂತೆ ವ್ಯವಸ್ಥೆ ಮಾಡಲಾಗಿದೆ. ಬಿಡುಗಡೆ ಸಮಾರಂಭದಲ್ಲಿ ಕನ್ನಡ ಆವೃತ್ತಿಗೆ ರೂ. 300 ಮತ್ತು ಆಂಗ್ಲ ಆವೃತ್ತಿಗೆ ರೂ. 750 ರಿಯಾಯಿತಿ ನೀಡಲಾಗಿತ್ತು. ಸಮಾರಂಭದಲ್ಲಿ 200ಕ್ಕೂ ಹೆಚ್ಚು ಪ್ರತಿಗಳು ಮಾರಾಟವಾಗಿದ್ದು, ಕನ್ನಡ ಆವೃತ್ತಿಯ ಪಾಲು ಹೆಚ್ಚಿತ್ತು.

ಸೌಹಾರ್ದ ಪ್ರಶಸ್ತಿ ಪ್ರದಾನ: ಹಿರಿಯ ಗಾಯಕ ಪಿ.ಬಿ.ಶ್ರೀನಿವಾಸ್, ಹಿರಿಯ ನಟಿ ರಂಗನಾಯಕಿ ಮತ್ತು ಚಿತ್ರ ಸಾಹಿತಿ ಚಿ.ದತ್ತರಾಜ್ ಅವರಿಗೆ `ಡಾ.ರಾಜ್‌ಕುಮಾರ್ ಸೌಹಾರ್ದ ಪ್ರಶಸ್ತಿ~ಯನ್ನು ಶನಿವಾರ ಪ್ರದಾನ ಮಾಡಲಾಯಿತು.

ಪ್ರಶಸ್ತಿ ಪುರಸ್ಕೃತರಿಗೆ ಒಂದು ಲಕ್ಷ ರೂಪಾಯಿ ನಗದು, ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಶ್ರೀನಿವಾಸ್, `ಹಿಂದೆ ನನ್ನನ್ನು ಡಾ.ರಾಜ್ ಅವರ ಶಾರೀರ ಎನ್ನುತ್ತಿದ್ದರು. ಈ ಶಾರೀರಕ್ಕೆ ಶರೀರದ ನೆನಪಿನಲ್ಲಿ ಪ್ರಶಸ್ತಿ ನೀಡಿರುವುದು ಬಹಳ ಸಂತೋಷ ತಂದಿದೆ~ ಎಂದು ಹೇಳಿ ರಾಜ್ ಕುರಿತ  ಸ್ವರಚಿತ ಪದ್ಯವೊಂದನ್ನು ಹಾಡಿದರು. ರಂಗನಾಯಕಿ ಮತ್ತು ದತ್ತರಾಜ್ ಅವರು ರಾಜ್ ಅವರ ಒಡನಾಟವನ್ನು ನೆನೆದು ಗದ್ಗದಿತರಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.