ಬೆಳಗಾವಿ: ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ 7 ಮಂದಿ ಗಣ್ಯರಿಗೆ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಸಭಾಭವನದಲ್ಲಿ ಶನಿವಾರ ನಡೆದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಲಾಯಿತು.
ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕುಲಪತಿ ಪ್ರೊ. ಬಿ.ಆರ್.ಅನಂತನ್ ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿದರು. ಆರು ಮಂದಿ ಗಣ್ಯರು ಗೌರವ ಡಾಕ್ಟರೇಟ್ ಪದವಿ ಪಡೆದರೆ, ಸಾಹಿತಿ ಪ್ರೊ. ಬರಗೂರು ರಾಮಚಂದ್ರಪ್ಪ ಅವರ ಅನುಪಸ್ಥಿತಿಯಲ್ಲಿ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು.
ನವದೆಹಲಿಯ ಕೇಂದ್ರ ಲೋಕಸೇವಾ ಆಯೋಗದ ಅಧ್ಯಕ್ಷ ಪ್ರೊ. ಡಿ.ಪಿ.ಅಗರವಾಲ್, ಹಿರಿಯ ಪತ್ರಕರ್ತ ಪಾಟೀಲ ಪುಟ್ಟಪ್ಪ, ಸಮಾಜ ಸೇವಕಿ ತೇಜಸ್ವಿನಿ ಅನಂತಕುಮಾರ (ಬೆಂಗಳೂರು), ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಮಹಾದೇವಪ್ಪ ಪಟ್ಟಣ (ರಾಮದುರ್ಗ), ವಿಶ್ರಾಂತ ಕುಲಪತಿ ಪ್ರೊ. ವಿ.ಟಿ.ಪಾಟೀಲ (ಧಾರವಾಡ) ಹಾಗೂ ನಿವೃತ್ತ ಐಎಎಸ್ ಅಧಿಕಾರಿ ಪ್ರೊ. ಎಸ್.ಎಂ.ಜಾಮದಾರ (ಬೆಳಗಾವಿ) ಅವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಲಾಯಿತು.
ಡಾ. ಪಾಟೀಲ ಪುಟ್ಟಪ್ಪ ಮಾತನಾಡಿ, ‘ದೇಶದಲ್ಲಿ ಓದಿದವರ ಸಂಖ್ಯೆ ಶೇ. 75ರಷ್ಟಿದ್ದರೂ ಅನ್ಯಾಯದ ವಿರುದ್ಧ ಯಾರೂ ಧ್ವನಿ ಎತ್ತುತ್ತಿಲ್ಲ. ವಿದ್ಯಾವಂತರು ನ್ಯಾಯಕ್ಕಾಗಿ ಹೋರಾಡಿದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ’ ಎಂದು ಹೇಳಿದರು.
ಡಾ. ವಿಷ್ಣುಕಾಂತ ಚಟಪಲ್ಲಿ, ಡಾ. ಎಚ್.ಎಂ.ವಿರೂಪಾಕ್ಷಯ್ಯ, ಡಾ. ಕೆಎನ್.ಗಂಗಾ ನಾಯ್ಕ, ಡಾ. ಎಚ್.ಜಿ.ದಡ್ಡಿ ಅವರಿಗೆ ಡಿ.ಲಿಟ್. ಪದವಿ ನೀಡಿ ಗೌರವಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.