ADVERTISEMENT

ರಾಯಚೂರು–ಯಾದಿಗಿರಿ ಅಭಿವೃದ್ಧಿಗೆ ನೀತಿ ಆಯೋಗದ ಯೋಜನೆ

​ಪ್ರಜಾವಾಣಿ ವಾರ್ತೆ
Published 26 ಫೆಬ್ರುವರಿ 2018, 19:30 IST
Last Updated 26 ಫೆಬ್ರುವರಿ 2018, 19:30 IST

ಬೆಂಗಳೂರು: ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳನ್ನು ಅತ್ಯಂತ ಹಿಂದುಳಿದ ಜಿಲ್ಲೆಗಳು ಎಂದು ಗುರುತಿಸಿರುವ ನೀತಿ ಆಯೋಗ, ಉಳಿದ ಜಿಲ್ಲೆಗಳ ಮಾದರಿಯಲ್ಲಿ ಅಭಿವೃದ್ಧಿಯ ಮುಂಚೂಣಿಗೆ ತರಲು ವಿಶೇಷ ಯೋಜನೆ ರೂಪಿಸಿದೆ.
ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವ ಡಿ.ವಿ. ಸದಾನಂದಗೌಡ, ಸಂಸದೀಯ ವ್ಯವಹಾರಗಳ ಸಚಿವ ಅನಂತ ಕುಮಾರ್‌, ಗ್ರಾಮೀಣ ನೈರ್ಮಲ್ಯ ಖಾತೆ ರಾಜ್ಯ ಸಚಿವ ರಮೇಶ ಜಿಗಜಿಣಗಿ ಅವರು ವಿಧಾನಸೌಧದಲ್ಲಿ ಸೋಮವಾರ ಈ ಕುರಿತ ಮೊದಲ ಸಭೆ ನಡೆಸಿದರು.

ಸಭೆ ಬಳಿಕ ಮಾತನಾಡಿದ ಸದಾನಂದಗೌಡ, ದೇಶದಲ್ಲಿ 115 ಜಿಲ್ಲೆಗಳು ಅಭಿವೃದ್ಧಿಯಿಂದ ದೂರ ಉಳಿದಿರುವುದನ್ನು ನೀತಿ ಆಯೋಗ ಗುರುತಿಸಿದೆ. ಉಳಿದ ಜಿಲ್ಲೆಗಳ ರೀತಿಯಲ್ಲಿ ಈ ಜಿಲ್ಲೆಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸುವಂತೆ ಪ್ರಧಾನಿ ನರೇಂದ್ರ ಮೋದಿ ಸೂಚಿಸಿದ್ದಾರೆ. ಇನ್ನು ಮುಂದೆ ಈ ಜಿಲ್ಲೆಗಳ ಅಭಿವೃದ್ಧಿಯ ಮೇಲುಸ್ತುವಾರಿಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಇರುವ ತಂಡ ನೋಡಿಕೊಳ್ಳಲಿದೆ. ಕರ್ನಾಟಕ ಸರ್ಕಾ
ರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್ ಅವರನ್ನು ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿದೆ ಎಂದು ವಿವರಿಸಿದರು.

ಈ ಜಿಲ್ಲೆಗಳ ಸ್ಥಿತಿಗತಿ ಕುರಿತು 70 ಸೂಚ್ಯಂಕಗಳನ್ನು ಮೊದಲು ಗುರುತಿಸಲಾಗುವುದು. ಯಾವ ಕ್ಷೇತ್ರದಲ್ಲಿ ಹಿಂದುಳಿದಿದೆ ಎಂಬ ಬಗ್ಗೆ ತಲಸ್ಪರ್ಶಿ ಪರಿಶೀಲನೆ ನಡೆಸಿದ ನಂತರ ಯೋಜನೆ ಸಿದ್ಧಪಡಿಸಲಾಗುವುದು. ಶಿಕ್ಷಣ, ಆರೋಗ್ಯ, ಮೂಲಸೌಕರ್ಯ, ಕೃಷಿ ಹಾಗೂ ಆರ್ಥಿಕ ಒಳಗೊಳ್ಳುವಿಕೆ ಹೀಗೆ ಐದು ಕ್ಷೇತ್ರಗಳಿಗೆ ಆದ್ಯತೆ ನೀಡಿ ಏಪ್ರಿಲ್ ಅಂತ್ಯದ ಹೊತ್ತಿಗೆ ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.

ADVERTISEMENT

ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿವಿಧ ಅನುದಾನಗಳನ್ನು ಒಗ್ಗೂ ಡಿಸಿ ಆದ್ಯತಾ ವಲಯಗಳಿಗೆ ವೆಚ್ಚ ಮಾಡಲಾಗುತ್ತದೆ. ರಾಜ್ಯ ಅಥವಾ ಕೇಂದ್ರ ಸಚಿವರ ಹಸ್ತಕ್ಷೇಪ ಇಲ್ಲದಂತೆ ಅಭಿವೃದ್ಧಿಯ ಮುನ್ನೋಟ ಸಿದ್ಧಪಡಿಸಿ, ಅನುಷ್ಠಾನ ಮಾಡುವುದು ಈ ಯೋಜನೆಯ ಆಶಯ ಎಂದರು.

ಒಟ್ಟು ಹಂಚಿಕೆಯಾಗುವ ಅನುದಾನದಲ್ಲಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ತಲಾ ಶೇ 30ರಷ್ಟು, ಉಳಿದ ಶೇ 40ರಷ್ಟನ್ನು ಇನ್ನಿತರ ಮೂರು ಕ್ಷೇತ್ರಗಳಿಗೆ ಖರ್ಚು ಮಾಡಲು ಅವಕಾಶ ಇರುತ್ತದೆ. ಈ ಜಿಲ್ಲೆಗಳಿಗೆ ಆದ್ಯತೆ ನೀಡಿ ಖರ್ಚು ಮಾಡಲು ಸರ್ಕಾರದ ನೀತಿ ಮತ್ತು ಆದೇಶಗಳಲ್ಲಿ ಬದಲಾವಣೆ ಮಾಡಿಕೊಳ್ಳ
ಲಾಗುವುದು ಎಂದರು.

500ರಿಂದ 1500 ಜನಸಂಖ್ಯೆ ಇರುವ ಗ್ರಾಮಗಳನ್ನು ಮಾತ್ರ ಪ್ರಧಾನಮಂತ್ರಿ ಗ್ರಾಮ ಸ್ವರಾಜ್ ಯೋಜನೆಯಡಿ (ಪಿಎಂಜಿಎಸ್‌ವೈ) ಅಭಿವೃದ್ಧಿ ಪಡಿಸಲು ಅವಕಾಶ ಇದೆ. 250 ಜನಸಂಖ್ಯೆ ಇರುವ ಗ್ರಾಮಗಳನ್ನು ಪಿಎಂಜಿಎಸ್‌ವೈ ಅಡಿ ತೆಗೆದುಕೊಳ್ಳಲು ನೀತಿಯಲ್ಲಿ ಬದಲಾವಣೆ ತರಲಾಗು
ವುದು. ಅಭಿವೃದ್ಧಿಯ ಉದ್ದೇಶದಿಂದ ಇಂತಹ ಕ್ರಮಗಳನ್ನು ಕೈಗೊಳ್ಳುವಂತೆ ಪ್ರಧಾನಿ ಸೂಚಿಸಿದ್ದಾರೆ ಎಂದು ತಿಳಿಸಿದರು.‌

ಕೇಂದ್ರ - ರಾಜ್ಯ ಮಧ್ಯೆ ಜಟಾಪಟಿ

ಕೇಂದ್ರದ ಮೂವರು ಸಚಿವರು ರಾಜ್ಯ ಸರ್ಕಾರದ ಗಮನಕ್ಕೆ ತರದೇ ಸಭೆ ನಡೆಸಿರುವುದು ಜಟಾಪಟಿಗೆ ಕಾರಣವಾಗಿದೆ.

ಈ ಸಭೆಗೆ ರಾಜ್ಯ ಸರ್ಕಾರದ ಯೋಜನಾ ಸಚಿವ ಎಂ.ಆರ್. ಸೀತಾರಾಂ ಪಾಲ್ಗೊಂಡಿರಲಿಲ್ಲ. ಈ ಕುರಿತ ಪ್ರಶ್ನೆಗೆ ಉತ್ತರಿಸಿದ ಸದಾನಂದಗೌಡ, ‘ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ತಿಳಿಸಿ ಎಂದು ಪ್ರಧಾನಿ ಸೂಚಿಸಿದ್ದರು.

ಸೀತಾರಾಂ ಜತೆಗೆ ನಾನು ಮಾತನಾಡಿದ್ದೆ. ಬರುತ್ತೇನೆ ಎಂದು ತಿಳಿಸಿದ್ದರು. ಉದ್ದೇಶಪೂರ್ವಕವಾಗಿ ಗೈರು ಹಾಜರಾದಂತಿಲ್ಲ’ ಎಂದರು.

‘ನನಗೆ ಆಹ್ವಾನ ನೀಡುವುದು ಬೇಡ. ನೀತಿ ಆಯೋಗ ಅಥವಾ ಕೇಂದ್ರ ಯೋಜನಾ ಸಚಿವರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದು ವಿಷಯ ತಿಳಿಸುವ ಔದಾರ್ಯ ತೋರಬೇಕಾಗಿತ್ತು. ಕೇಂದ್ರ ಸರ್ಕಾರಕ್ಕೆ ಕನಿಷ್ಠ ಸೌಜನ್ಯವೂ ಇಲ್ಲ. ನನಗೆ ಮಾಹಿತಿಯೂ ಇಲ್ಲ ’ ಎಂದು ಸೀತಾರಾಂ ಕಿಡಿಕಾರಿದರು.

‘ಚುನಾವಣೆ ಬಂದ ಕಾರಣಕ್ಕೆ ಸದಾನಂದಗೌಡ ಹಾಗೂ ಮೋದಿ ಕಣ್ಣು ಬಿಟ್ಟಿದ್ದಾರೆ. ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿ ಕೊಪ್ಪಳ,ರಾಯಚೂರು ಸೇರಿಸಿದ್ದರು. ನಾನೇ ಅದನ್ನು ಬದಲಾವಣೆ ಮಾಡಿ ಯಾದಗಿರಿ ಸೇರಿಸಿದ್ದೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.