ADVERTISEMENT

ರಾಷ್ಟ್ರೀಯ ಅರ್ಹತಾ, ಪ್ರವೇಶ ಪರೀಕ್ಷೆ: ಎಂಸಿಐ ಅಧಿಸೂಚನೆಗೆ ತಡೆ

​ಪ್ರಜಾವಾಣಿ ವಾರ್ತೆ
Published 4 ಮೇ 2012, 19:30 IST
Last Updated 4 ಮೇ 2012, 19:30 IST

ಬೆಂಗಳೂರು: ವೈದ್ಯ, ದಂತ ವೈದ್ಯಕೀಯ ವಿಭಾಗಗಳ ಪದವಿ ಮತ್ತು ಸ್ನಾತಕೋತ್ತರ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ಎನ್‌ಇಇಟಿ) ನಡೆಸಲು ಭಾರತೀಯ ವೈದ್ಯಕೀಯ ಮಂಡಳಿ (ಎಂಸಿಐ) ಫೆಬ್ರುವರಿ 15ರಂದು ಹೊರಡಿಸಿದ್ದ ಎರಡು ಅಧಿಸೂಚನೆಗಳಿಗೆ ಹೈಕೋರ್ಟ್ ಶುಕ್ರವಾರ ತಡೆ ನೀಡಿದೆ.

ಎನ್‌ಇಇಟಿ ನಡೆಸುವ ಸಂಬಂಧ ಎಂಸಿಐ ಹೊರಡಿಸಿದ್ದ ಅಧಿಸೂಚನೆಗಳನ್ನು ಪ್ರಶ್ನಿಸಿ ರಾಜ್ಯ ಖಾಸಗಿ ವೈದ್ಯ ಮತ್ತು ದಂತ ವೈದ್ಯ ಕಾಲೇಜುಗಳ ಒಕ್ಕೂಟ, ಎಂ.ಎಸ್.ರಾಮಯ್ಯ ಶಿಕ್ಷಣ ಸಂಸ್ಥೆ ಮತ್ತು ಎಂ.ಆರ್.ಜಯರಾಂ ಸಲ್ಲಿಸಿದ್ದ ರಿಟ್ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ. ಕೆ.ಭಕ್ತವತ್ಸಲ ಮತ್ತು ನ್ಯಾಯಮೂರ್ತಿ ಗೋವಿಂದರಾಜುಲು ಅವರಿದ್ದ ರಜಾಕಾಲದ ವಿಶೇಷ ವಿಭಾಗೀಯ ಪೀಠ, ಈ ಆದೇಶ ಹೊರಡಿಸಿದೆ.

ವೈದ್ಯಕೀಯ ಮತ್ತು ದಂತ ವೈದ್ಯ ಕೋರ್ಸ್‌ಗಳ ಪ್ರವೇಶಕ್ಕೆ ರಾಷ್ಟ್ರೀಯ ಮಟ್ಟದ ಪ್ರವೇಶ ಪರೀಕ್ಷೆ ನಡೆಸಲು ಪದವಿ ವೈದ್ಯಕೀಯ ಶಿಕ್ಷಣ ನಿಯಂತ್ರಣ ನಿಯಮ- 1997 ಮತ್ತು ಸ್ನಾತಕೋತ್ತರ ಪದವಿ ವೈದ್ಯಕೀಯ ಶಿಕ್ಷಣ ನಿಯಂತ್ರಣ ನಿಯಮ- 2000ಕ್ಕೆ ತಿದ್ದುಪಡಿ ತಂದು ಎಂಸಿಐ 2010ರಲ್ಲಿ ಎರಡು ಅಧಿಸೂಚನೆಗಳನ್ನು ಪ್ರಕಟಿಸಿತ್ತು.

ಈ ಅಧಿಸೂಚನೆಗಳಿಗೆ ಹೈಕೋರ್ಟ್ 2011ರ ನವೆಂಬರ್ 21ರಂದು ತಡೆ ನೀಡಿದೆ. ತಡೆಯಾಜ್ಞೆ ಇರುವಾಗಲೇ ಹೊಸದಾಗಿ ಫೆಬ್ರುವರಿಯಲ್ಲಿ ತಿದ್ದುಪಡಿ ಅಧಿಸೂಚನೆಗಳನ್ನು ಪ್ರಕಟಿಸಿದೆ ಎಂದು ಅರ್ಜಿದಾರರು ದೂರಿದ್ದಾರೆ.

ದೇಶದಲ್ಲಿ 271 ವೈದ್ಯಕೀಯ ಕಾಲೇಜುಗಳಿವೆ. 138 ಸರ್ಕಾರಿ ಕಾಲೇಜುಗಳಾದರೆ, 133 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಒಟ್ಟು 32,000 ವೈದ್ಯಕೀಯ ಪದವಿ ಸೀಟುಗಳು ಮತ್ತು 12,000 ಸ್ನಾತಕೋತ್ತರ ಪದವಿ ಸೀಟುಗಳಿವೆ.

ಕರ್ನಾಟಕದಲ್ಲಿ 10 ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು 28 ಖಾಸಗಿ ವೈದ್ಯಕೀಯ ಕಾಲೇಜುಗಳಿವೆ. ಇಲ್ಲಿ 4,895 ಪದವಿ ಸೀಟುಗಳು ಮತ್ತು 1,000 ಸ್ನಾತಕೋತ್ತರ ಪದವಿ ಸೀಟುಗಳಿವೆ.

ರಾಜ್ಯದಲ್ಲಿ ಪ್ರಸಕ್ತ ವರ್ಷ ವೃತ್ತಿ ಶಿಕ್ಷಣ ಕೋರ್ಸ್‌ಗಳ ಪ್ರವೇಶಕ್ಕೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸುವ ಸಂಬಂಧ ಖಾಸಗಿ ಕಾಲೇಜುಗಳು ಮತ್ತು ಸರ್ಕಾರದ ನಡುವೆ ಒಪ್ಪಂದ ನಡೆಯುತ್ತಿರುವಾಗಲೇ ಎಂಸಿಐ ಅಧಿಸೂಚನೆ ಹೊರಡಿಸಿರುವುದು ಸರಿಯಲ್ಲ ಎಂಬುದು ಅರ್ಜಿದಾರರ ವಾದ.

2011ರಲ್ಲಿ ನ್ಯಾಯಾಲಯ ತಡೆ ನೀಡಿರುವ 2010ರ ಅಧಿಸೂಚನೆಯಲ್ಲಿರುವ ಅಂಶಗಳೇ ಫೆಬ್ರುವರಿಯಲ್ಲಿ ಪ್ರಕಟಿಸಿರುವ ಅಧಿಸೂಚನೆಗಳಲ್ಲಿವೆ. ಯಾವುದೇ ಬದಲಾವಣೆಗಳೂ ಇಲ್ಲ. ಈ ಅಧಿಸೂಚನೆಗಳು ರಾಜ್ಯಪತ್ರದಲ್ಲಿ ಪ್ರಕಟವಾದ ದಿನದಿಂದಲೇ ಜಾರಿಗೆ ಬರುತ್ತವೆ ಎಂಬ ವಿವರ ಅವುಗಳಲ್ಲಿದೆ.

ಕರ್ನಾಟಕದಲ್ಲಿನ ವೈದ್ಯಕೀಯ ಪದವಿ ಸೀಟುಗಳ ಭರ್ತಿಗೆ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲು ಸರ್ಕಾರಕ್ಕೆ ಎರಡು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಹೀಗಿರುವಾಗ ರಾಷ್ಟ್ರೀಯ ಮಟ್ಟದಲ್ಲಿ `ಎನ್‌ಇಇಟಿ~ ನಡೆಸುವ ಪ್ರಸ್ತಾವ ಪ್ರಯೋಗ ಸಾಧುವಲ್ಲ. ಈ ಪ್ರಯತ್ನ ಸರ್ಕಾರದ ಪಾಲಿಗೆ ದುಬಾರಿಯಾಗಲಿದೆ. ಕಾಲೇಜುಗಳಿಗೂ ತೊಂದರೆ ಆಗುತ್ತದೆ ಎಂದು ಅರ್ಜಿದಾರರ ಪರ ವಕೀಲರು ವಾದಿಸಿದರು.

ಅರ್ಜಿಯ ವಿಚಾರಣೆ ನಡೆಸಿದ ವಿಭಾಗೀಯ ಪೀಠ, ಎಂಸಿಐ ಅಧಿಸೂಚನೆಗೆ ತಡೆ ನೀಡಿತು. ಪ್ರತಿವಾದಿಗಳಾದ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಭಾರತೀಯ ವೈದ್ಯಕೀಯ ಮಂಡಳಿಗೆ ನೋಟಿಸ್ ಜಾರಿಗೆ ಆದೇಶಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.