ADVERTISEMENT

ರಾಹುಲ್‌ ಗಾಂಧಿ, ಅಮಿತ್‌ ಷಾ ಬರಲೇಬೇಕಂತೆ

ರಾಜಕೀಯ ಪಕ್ಷಗಳಿಗೆ ಕರಾವಳಿಯಲ್ಲಿ ನಾಯಕತ್ವದ ಕೊರತೆ

ಚಿದಂಬರ ಪ್ರಸಾದ್
Published 20 ಅಕ್ಟೋಬರ್ 2017, 19:33 IST
Last Updated 20 ಅಕ್ಟೋಬರ್ 2017, 19:33 IST

ಮಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಎಲ್ಲ ಪಕ್ಷಗಳಿಗೂ ಪ್ರತಿಷ್ಠೆಯ ಪ್ರಶ್ನೆಯಾಗಿ ಪರಿಣಮಿಸಿದ್ದು, ಕರಾವಳಿ ಭಾಗದಲ್ಲಿ ಪ್ರಾಬಲ್ಯ ಸಾಧಿಸಲು ಪ್ರಮುಖ ರಾಜಕೀಯ ಪಕ್ಷಗಳ ಕಸರತ್ತು ಈಗಿನಿಂದಲೇ ಆರಂಭವಾಗಿದೆ. ನಿತ್ಯ ಒಂದಿಲ್ಲೊಂದು ಹೊಸ ಯೋಜನೆಗಳೊಂದಿಗೆ ಕರಾವಳಿಯ ಮತದಾರರಿಗೆ ಗಾಳ ಹಾಕುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ.

ಪ್ರಮುಖವಾಗಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌ ಸೇರಿದಂತೆ ಬಹುತೇಕ ಪಕ್ಷಗಳೂ ಪ್ರಭಾವಿ ನಾಯಕತ್ವದ ಕೊರತೆಯನ್ನು ಎದುರಿಸುತ್ತಿವೆ. ಇನ್ನೊಂದೆಡೆ ಇಲ್ಲಿನ ಮತದಾರರು ಪ್ರಬುದ್ಧರಾಗಿದ್ದಾರೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಬೆಂಬಲ ನೀಡಿದ್ದ ಜಿಲ್ಲೆಯ ಜನರು, ಲೋಕಸಭಾ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿಗೆ ಅಧಿಕಾರ ನೀಡಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ರಾಜಕೀಯ ಪಕ್ಷಗಳು ಕರಾವಳಿ ಭಾಗಕ್ಕೆ ಹೆಚ್ಚಿನ ಒತ್ತು ನೀಡುವುದು ಅನಿವಾರ್ಯ ಎನ್ನುವ ಮಾತುಗಳು ಕೇಳಿ ಬರುತ್ತಿವೆ.

ಮೀನುಗಾರರ ರಾಜಕೀಯ: ಜನಾರ್ದನ ಪೂಜಾರಿ, ಬಿ.ಎ. ಮೊಹಿದ್ದೀನ್‌, ಬ್ಲೆಸಿಯಸ್‌ ಡಿಸೋಜ, ಆಸ್ಕರ್‌ ಫರ್ನಾಂಡಿಸ್‌ ನಂತರ, ಕಾಂಗ್ರೆಸ್‌ನಲ್ಲಿಯೂ ಹೇಳಿಕೊಳ್ಳುವಂತಹ ನಾಯಕತ್ವ ಉಳಿದಿಲ್ಲ. ವೀರಪ್ಪ ಮೊಯಿಲಿ ಚಿಕ್ಕಬಳ್ಳಾಪುರಕ್ಕೆ ವಲಸೆ ಹೋಗಿಬಿಟ್ಟಿದ್ದಾರೆ.

ADVERTISEMENT

ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳನ್ನೇ ಗುರಿಯಾಗಿಸಿಕೊಂಡು, ಕಾಂಗ್ರೆಸ್‌ ಪಕ್ಷ ಈಗಾಗಲೇ ಮೀನುಗಾರರ ರಾಜಕೀಯ ಆರಂಭಿಸಿದೆ.

ಪ್ರತ್ಯೇಕವಾಗಿ ಮೀನುಗಾರರ ಘಟಕವನ್ನು ಆರಂಭಿಸಿರುವ ಕಾಂಗ್ರೆಸ್‌, ನವೆಂಬರ್‌ನಲ್ಲಿ ಮೀನುಗಾರರ ಬೃಹತ್‌ ಸಮಾವೇಶವನ್ನು ಕುಮಟಾದಲ್ಲಿ ಆಯೋಜಿಸಿದೆ. ಈ ಸಮಾವೇಶಕ್ಕೆ ರಾಹುಲ್‌ ಗಾಂಧಿ ಅವರನ್ನು ಕರೆತರುವ ಮೂಲಕ ಮೀನುಗಾರರನ್ನು ಪಕ್ಷದ ವೋಟ್‌ ಆಗಿ ಪರಿವರ್ತಿಸುವ ಸಿದ್ಧತೆ ನಡೆಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ 8 ವಿಧಾನಸಭಾ ಕ್ಷೇತ್ರಗಳ ಪೈಕಿ ಏಳರಲ್ಲಿ ಪ್ರಾಬಲ್ಯ ಸಾಧಿಸಿರುವ ಕಾಂಗ್ರೆಸ್‌, ಬರುವ ವಿಧಾನಸಭೆ ಚುನಾವಣೆಯಲ್ಲೂ ಅದನ್ನು ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ.

ರಾಷ್ಟ್ರೀಯ ನಾಯಕರೇ ಆಸರೆ: ಇನ್ನೊಂದೆಡೆ ಬಿಜೆಪಿಗೂ ಹೇಳಿಕೊಳ್ಳುವಂತಹ ನಾಯಕತ್ವ ಜಿಲ್ಲೆಯಲ್ಲಿ ಇಲ್ಲ. ಹೀಗಾಗಿ ರಾಷ್ಟ್ರೀಯ ನಾಯಕರನ್ನೇ ಅವಲಂಬಿಸುವುದು ಅನಿವಾರ್ಯವಾಗಿದೆ.

ಇದರ ಜತೆಗೆ ಹಿಂದುತ್ವವನ್ನೇ ಬಂಡವಾಳ ಮಾಡಿಕೊಂಡು, ಈ ಭಾಗದ ಹಿಂದೂ ಮತಗಳ ಧ್ರುವೀಕರಣಕ್ಕೆ ಮುಂದಾಗಿದೆ. ರಾಜ್ಯದ ನಾಯಕರೆಲ್ಲರನ್ನೂ ಕರೆಸಿ, ಇತ್ತೀಚೆಗಷ್ಟೇ ಬೈಕ್‌ ರ‍್ಯಾಲಿ ಹಮ್ಮಿಕೊಂಡಿದ್ದ ಬಿಜೆಪಿ, ಕೆಲ ದಿನಗಳ ಹಿಂದಷ್ಟೇ ಮುದ್ರಾ ಸಾಲ ಯೋಜನೆ ನೆಪದಲ್ಲಿ ಕೇಂದ್ರ ಸಚಿವರನ್ನು ಜಿಲ್ಲೆಗೆ ಕರೆಸಿತ್ತು.

ಇದಕ್ಕೂ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ಅವರ ಕಾರ್ಯಕ್ರಮವನ್ನೂ ಆಯೋಜಿಸಿತ್ತು. ಆದರೆ, ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಮತ್ತೊಮ್ಮೆ ಅಮಿತ್‌ ಷಾ ಅವರನ್ನು ಜಿಲ್ಲೆಗೆ ಕರೆಸುವ ಮೂಲಕ ಚುನಾವಣೆಯ ರಣಕಹಳೆ ಊದಲು ಬಿಜೆಪಿ ಸಿದ್ಧತೆ ನಡೆಸಿದೆ. ರಮೇಶ ಜಿಗಜಿಣಗಿ, ಪ್ರಕಾಶ್‌ ಜಾವಡೇಕರ್‌, ರಾಜೀವ್‌ ಪ್ರತಾಪ್‌ ರೂಡಿ ಸೇರಿದಂತೆ ಅನೇಕ ಕೇಂದ್ರ ಸಚಿವರು ಆಗಾಗ್ಗೆ ಜಿಲ್ಲೆಗೆ ಭೇಟಿ ನೀಡುತ್ತಲೇ ಇದ್ದಾರೆ.

ಜೆಡಿಎಸ್‌ ಕೂಡ ಜಿಲ್ಲೆಯ ಒಂದು ಕ್ಷೇತ್ರದಲ್ಲಾದರೂ ಪ್ರಾಬಲ್ಯ ಸಾಧಿಸಲು ಯೋಜನೆ ರೂಪಿಸುತ್ತಿದೆ. ಆದರೆ, ರಾಜ್ಯಮಟ್ಟದ ನಾಯಕರಿಂದ ಹೆಚ್ಚಿನ ಪ್ರೋತ್ಸಾಹ ದೊರೆಯದೇ ಇರುವುದು, ಸ್ಥಳೀಯ ನಾಯಕರಲ್ಲಿ ಚಿಂತೆಗೆ ಕಾರಣವಾಗಿದೆ.

ರಾಜಕೀಯ ಪಕ್ಷಗಳು ಒಂದೆಡೆ ಜಿಲ್ಲೆಯ ಮತದಾರರನ್ನು ಸೆಳೆಯುವ ಪ್ರಯತ್ನ ನಡೆಯುತ್ತಿದ್ದರೆ, ಇನ್ನೊಂದೆಡೆ ಎಸ್‌ಡಿಪಿಐ ಹಾಗೂ ಕೇರಳದಲ್ಲಿ ಪ್ರಾಬಲ್ಯ ಹೊಂದಿರುವ ಸಿಪಿಎಂ ಇತರ ಪಕ್ಷಗಳನ್ನು ಕಟ್ಟಿಹಾಕುವ ನಿಟ್ಟಿನಲ್ಲಿಯೂ ಯೋಜನೆ ರೂಪಿಸುತ್ತಿವೆ.
*
ಬೀದರ್‌ಗೆ 29ರಂದು ಪ್ರಧಾನಿ ಮೋದಿ
ಬೀದರ್: ಬೀದರ್-ಕಲಬುರ್ಗಿ ರೈಲು ಮಾರ್ಗವನ್ನು ಅಕ್ಟೋಬರ್ 29 ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲೋಕಾರ್ಪಣೆ ಮಾಡುವರು.

‘ವಿಶೇಷ ವಿಮಾನದ ಮೂಲಕ ಪ್ರಧಾನಿ ಅಂದು ಸಂಜೆ 4 ಗಂಟೆಗೆ ನಗರದ ವಾಯುಪಡೆ ತರಬೇತಿ ಕೇಂದ್ರಕ್ಕೆ ಬರುವರು. ರೈಲು ಮಾರ್ಗ ಉದ್ಘಾಟಿಸಿದ ನಂತರ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುವರು. ರೈಲ್ವೆ ಸಚಿವ ಪೀಯೂಷ್ ಗೋಯಲ್ ಪಾಲ್ಗೊಳ್ಳುವರು’ ಎಂದು ಸಂಸದ ಭಗವಂತ ಖೂಬಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.