
ಕಲಬುರ್ಗಿ: ‘ನಾನು ಪಡೆದಿರುವ ಅಂಕಗಳಲ್ಲಿ ತಂದೆ–ತಾಯಿಯ ಬೆವರಿದೆ. ಚಿನ್ನದ ಪದಕಗಳ ಹೊಳಪಿನ ಹಿಂದೆ ಅವರ ಶ್ರಮವಿದೆ. ಬಡತನದಲ್ಲೂ ಅವರು ನನ್ನ ಓದಿಗೆ ಪ್ರೋತ್ಸಾಹ ನೀಡಿದ್ದರಿಂದಲೇ ಈ ಸಾಧನೆ ಮಾಡಲು ಸಾಧ್ಯವಾಗಿದೆ..’
ಗುಲಬರ್ಗಾ ವಿಶ್ವವಿದ್ಯಾಲಯದ 34ನೇ ಘಟಿಕೋತ್ಸವದಲ್ಲಿ ಸ್ನಾತಕೋತ್ತರ ಕನ್ನಡ ಪದವಿಯಲ್ಲಿ ಎಂಟು ಚಿನ್ನದ ಪದಕ ಪಡೆದ ಶಿವಬಸಮ್ಮ ಅವರ ಮಾತುಗಳಿವು.
ಇಲ್ಲಿನ ಸೇಡಂ ರಸ್ತೆಯ ಇಎಸ್‌ಐಸಿ ಸಮುಚ್ಚಯದ ಸಭಾಂಗಣದಲ್ಲಿ ಗುರುವಾರ ನಡೆದ ಘಟಿಕೋತ್ಸವದಲ್ಲಿ ಚಿನ್ನದ ಪದಕ ಮತ್ತು ಪದವಿ ಪಡೆಯುತ್ತಿದ್ದಂತೆಯೇ ಅವರ ಕಣ್ಣುಗಳು ನೀರಾದವು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಯಚೂರು ಜಿಲ್ಲೆಯ ಮಾಚನೂರ ನಮ್ಮೂರು. ತಂದೆ ಶಿವಪ್ಪ ಹಾಗೂ ತಾಯಿ ಬಸಮ್ಮ ಇಬ್ಬರೂ ಕೃಷಿಕರು. ಎಂಟು ಎಕರೆ ಜಮೀನಿದೆ. ಆದರೆ ಒಣ ಬೇಸಾಯ. ಆದಾಗ್ಯೂ, ನನ್ನ ಓದಿಗೆ ಸಾಕಷ್ಟು ಪ್ರೋತ್ಸಾಹ ನೀಡಿದರು. ನಾನು ಎಂಟು ಪದಕ ಪಡೆಯಲು ಅವರ ಪರಿಶ್ರಮವೇ ಕಾರಣ’ ಎಂದು ಭಾವುಕರಾದರು.
‘ನಾವು ಮೂವರು ಸಹೋದರಿಯರು. ಒಬ್ಬ ಸಹೋದರ ಇದ್ದಾನೆ. ನಮ್ಮ ಮನೆಯಲ್ಲಿ ಸ್ನಾತಕೋತ್ತರ ಪದವಿ ಓದಿದ್ದು ನಾನೊಬ್ಬಳೆ. ಪದವಿ ಹಂತದಲ್ಲಿ ನಾನು ಪ್ರಾಧ್ಯಾಪಕರ ನೆಚ್ಚಿನ ಶಿಷ್ಯೆಯಾಗಿದ್ದೆ. ಸ್ನಾತಕೋತ್ತರ ಪದವಿಗೆ ಸೇರಿದ ಬಳಿಕ ಓದಿನಲ್ಲಿ ಹೆಚ್ಚಾಗಿ ತೊಡಗಿಸಿಕೊಂಡೆ. ಅದರಲ್ಲೂ ಬೆಳಗಿನ ಜಾವ ಓದುವ ಹವ್ಯಾಸ ಬೆಳೆಸಿಕೊಂಡೆ. ಎರಡು ವರ್ಷ ಹಾಸ್ಟೆಲ್‌ನಲ್ಲಿ ಇದ್ದು ಓದಿದ್ದರ ಫಲವಾಗಿ ಎಂಟು ಪದಕಗಳು ಲಭಿಸಿವೆ’ ಎಂದು ಖುಷಿ ಹಂಚಿಕೊಂಡರು.
‘ಮುಂದೆ ಸಂಶೋಧನೆಯಲ್ಲಿ ಮಾಡಿ ಬಳಿಕ ಬೋಧನೆಯಲ್ಲಿ ತೊಡಗಿಸಿಕೊಳ್ಳುವ ಗುರಿ ಇದೆ. ನನ್ನಂತೆ ಗ್ರಾಮೀಣ ಪ್ರದೇಶದಿಂದ ಬಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ಮಾಡಬೇಕು ಎಂಬುದು ನನ್ನ ಆಶಯ’ ಎಂದು ಹೇಳಿದರು.
ತಂದೆ ಶಿವಪ್ಪ ಹಾಗೂ ತಾಯಿ ಬಸಮ್ಮ ಮಾತನಾಡಿ, ‘ಬಡತನವಿದ್ದರೂ ಮಗಳ ಓದಿಗೆ ನಾವು ಕಡಿಮೆ ಮಾಡಿಲ್ಲ. ನಮ್ಮ ಮಗಳು 8 ಚಿನ್ನದ ಪದಕ ಪಡೆದಿರುವುದು ಖುಷಿಯಾಗಿದೆ’ ಎಂದರು.
ವಿಶಾಖಾಗೂ ಎಂಟು ಪದಕ: ಎಂಬಿಎ ವಿದ್ಯಾರ್ಥಿನಿ ವಿಶಾಖಾ ತಡವಾಳಕರ್ ಅವರೂ ಎಂಟು ಚಿನ್ನದ ಪದಕ ಪಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.