ADVERTISEMENT

ರೈತರೂ ಇಲ್ಲ... ಅಧಿಕಾರಿಗಳೂ ಇಲ್ಲ...

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ರಾಯಚೂರು: ಜಿಲ್ಲೆಯ ರೈತರ ಹಲವಾರು ಪ್ರತಿಭಟನೆ, ಒತ್ತಾಯದ ಬಳಿಕ ಮಂಗಳವಾರವಷ್ಟೇ ಜಿಲ್ಲಾ ಉಸ್ತುವಾರಿ ಸಚಿವ ಬಿ ಶ್ರೀರಾಮುಲು ಅವರು ಉದ್ಘಾಟಿಸಿದ್ದ ಬತ್ತ ಖರೀದಿ ಕೇಂದ್ರ ಬುಧವಾರ ತೆರೆದಿರಲಿಲ್ಲ!

ಮಂಗಳವಾರ ಇಲ್ಲಿನ ಎಪಿಎಂಸಿ ಆವರಣದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಸಗಟು ವ್ಯಾಪಾರ ಮಳಿಗೆ ಎದುರು ಬತ್ತ ಖರೀದಿ ಕೇಂದ್ರವನ್ನು ಜಿಲ್ಲಾ ಉಸ್ತುವಾರಿ ಸಚಿವರು ಅದ್ದೂರಿಯಾಗಿ ಉದ್ಘಾಟಿಸಿದ್ದರು. ಆದರೆ ಬುಧವಾರ ಅಲ್ಲಿ ಬತ್ತ ಖರೀದಿ ಕೇಂದ್ರವೇ ಮಾಯವಾಗಿತ್ತು!

ಅಲ್ಲಿದ್ದ ಇಲಾಖೆಯ ಸಿಬ್ಬಂದಿ ವಿಚಾರಿಸಿದಾಗ ಬತ್ತ ಖರೀದಿ ಕೇಂದ್ರವನ್ನು ಹೈದರಾಬಾದ್ ರಸ್ತೆಯ ಪಕ್ಕ ಹಾಗೂ ಅಗ್ರೋಕಾರ್ನ್ ಸಂಸ್ಥೆಯ ಆವರಣದಲ್ಲಿರುವ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಹೆಚ್ಚುವರಿ ಸಗಟು ವ್ಯಾಪಾರ ಮಳಿಗೆಗೆ ಸ್ಥಳಾಂತರಿಸಲಾಗಿದೆ ಎಂದು ಹೇಳಿದರು.

ADVERTISEMENT

ಸಂಬಂಧಪಟ್ಟ ಸ್ಥಳಕ್ಕ ತೆರಳಿದಾಗ ಬತ್ತ ಖರೀದಿ ಕೇಂದ್ರ ನಡೆಯಬೇಕಾದ ಮಳಿಗೆಗೆ ಬೀಗ ಹಾಕಲಾಗಿತ್ತು. ಬತ್ತ ಖರೀದಿ ಕೇಂದ್ರಕ್ಕೆ ಯಾವುದೇ ರೈತರೂ ಬತ್ತ ಮಾರಾಟ ಮಾಡಲು ಆಗಮಿಸಿರಲಿಲ್ಲ. ಬತ್ತ ಖರೀದಿ ಕೇಂದ್ರದ ಆವರಣ ಬಿಕೋ ಎನ್ನುತ್ತಿತ್ತು.

ರೈತರ ಹಬ್ಬವಾದ `ಕಾರ ಹುಣ್ಣಿಮೆ~ ಕಾರಣದಿಂದ ಬತ್ತ ಬೆಳೆದ ರೈತರು ಬತ್ತ ಖರೀದಿ ಕೇಂದ್ರಕ್ಕೆ ಬುಧವಾರ ಬತ್ತವನ್ನು ಮಾರಾಟಕ್ಕೆ ತಂದಿರದೇ ಇರಬಹುದು ಅಥವಾ ಖರೀದಿ ಕೇಂದ್ರ ಆರಂಭವಾಗಿ ಒಂದೆರಡು ದಿನ ಕಳೆಯಲಿ. ಸಾಧಕ-ಬಾಧಕ ಅರಿತು ಮಾರಾಟಕ್ಕೆ ತೆರಳಿದರಾಯಿತು ಎಂಬ ಭಾವನೆಯಿಂದ ಬಂದಿರದೆಯೂ ಇರಬಹುದು.

ಆದರೆ, ಮಂಗಳವಾರ ಖರೀದಿ ಕೇಂದ್ರ ಉದ್ಘಾಟಿಸಿದ ಸಚಿವರು, ಇಂದಿನಿಂದಲೇ ಖರೀದಿ ಕೇಂದ್ರ ಆರಂಭವಾಗಿದೆ. ರೈತರು ಖರೀದಿ ಕೇಂದ್ರಕ್ಕೆ ಪಹಣಿ ಪತ್ರದೊಂದಿಗೆ ಆಗಮಿಸಿ ಬತ್ತ ಮಾರಾಟ ಮಾಡಬೇಕು. ಒಂದೇ ದಿನದಲ್ಲಿ ಹಣ ಪಾವತಿ ಮಾಡಲಾಗುವುದು. ಖರೀದಿ ಕೇಂದ್ರದ ಪಕ್ಕವೇ ಬ್ಯಾಂಕ್ ಕೌಂಟರ್ ತೆರೆಯಲಾಗುವುದು ಎಂಬಿತ್ಯಾದಿ ಭರವಸೆಗಳನ್ನು ನೀಡಿದ್ದರು.

ಖರೀದಿ ಕೇಂದ್ರ ಆರಂಭವಾದರೂ ಖರೀದಿ ಪ್ರಕ್ರಿಯೆ ಆರಂಭಗೊಂಡಿಲ್ಲ. ಬತ್ತ ಖರೀದಿ ಕೇಂದ್ರ ಆರಂಭಕ್ಕೆ ರಾಜ್ಯ ಸರ್ಕಾರ ಮೌಖಿಕ ಆದೇಶ ನೀಡಿದೆಯಷ್ಟೇ. ಸರ್ಕಾರದಿಂದ ಅಧಿಕೃತ ಆದೇಶ ಹೊರಡಿಸಿಲ್ಲ. ಆದೇಶವಿಲ್ಲದೇ ಖರೀದ ಪ್ರಕ್ರಿಯೆ ಅಸಾಧ್ಯ. ಬತ್ತ ಖರೀದಿ ಮಾಡಿದ ತಕ್ಷಣ ರೈತರಿಗೆ ಬಿಲ್ ಪಾವತಿ ಆಗಲೇಬೇಕು. ಈ ತಾಂತ್ರಿಕ ಕಾರಣದಿಂದ ಖರೀದಿ ಕೇಂದ್ರವನ್ನು ಆಡಳಿತ ವರ್ಗ ತೆರೆದಿಲ್ಲ ಎಂದು ಹೇಳಲಾಗುತ್ತಿದೆ.

ಹೋದ ವರ್ಷ ಇದೇ ಸ್ಥಿತಿ: ಹೋದ ವರ್ಷವೂ ಇದೇ ರೀತಿ ಬತ್ತ ಖರೀದಿ ಕೇಂದ್ರವನ್ನು ಕೊನೆ ಗಳಿಗೆಯಲ್ಲಿ ಆರಂಭಿಸಲಾಯಿತು. ಆದರೆ, ಖರೀದಿ ಕೇಂದ್ರ ತೆರೆದಿರಲಿಲ್ಲ. ಆಕ್ರೋಷಗೊಂಡ ರೈತ ಸಂಘದ ಸದಸ್ಯರು ಖರೀದಿ ಕೇಂದ್ರದ ಎದುರು ಹಾಕಿದ್ದ ಇಲಾಖೆ ಬ್ಯಾನರ್ ಹರಿದು, ಪಿಠೋಪಕರಣ ಧ್ವಂಸಗೊಳಿಸಿದ್ದರು. ಕೊನೆಗೆ ಖರೀದಿ ಪ್ರಕ್ರಿಯೆ ನಡೆದರೂ ನಿಯಮಾವಳಿಗೆ ಬೆಚ್ಚಿದ ರೈತರು ಖರೀದಿ ಕೇಂದ್ರದತ್ತ ಸುಳಿದಿರಲಿಲ್ಲ.

ಖರೀದಿ ಕೇಂದ್ರದಲ್ಲಿ ನಿಯಮಾವಳಿ ಸಡಿಲಿಸಿ ಬತ್ತ ಖರೀದಿ ಮಾಡಬೇಕು ಎಂಬ ಬೇಡಿಕೆ ರೈತರದು. ಆದರೆ, ಸರ್ಕಾರ ಕಣ್ತೆರೆದಿಲ್ಲ. ಹೀಗಾಗಿ ರೈತರು ಈ ಬತ್ತ ಖರೀದಿ ಕೇಂದ್ರ ಕಾಟಾಚಾರಕ್ಕೆ ಸ್ಥಾಪನೆ ಮಾಡಿದಂತಾಗಿದೆ ಎಂದು ಆರೋಪಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.