ADVERTISEMENT

ರೈತರ ಮಕ್ಕಳಿಗೆ ಬಡ್ಡಿ ರಹಿತ ಸಾಲ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 17:05 IST
Last Updated 25 ಫೆಬ್ರುವರಿ 2011, 17:05 IST

ಬೆಂಗಳೂರು: ಬಡ ರೈತ ಮಕ್ಕಳಿಗೆ ಉನ್ನತ ಶಿಕ್ಷಣ ವ್ಯಾಸಂಗಕ್ಕೆ ಅನುಕೂಲ ಕಲ್ಪಿಸಿಕೊಡುವ ದೃಷ್ಟಿಯಿಂದ ಬಡ್ಡಿರಹಿತ ಸಾಲ ನೀಡುವುದಾಗಿ ಸರ್ಕಾರ ಘೋಷಿಸಿದೆ.2011-12ನೇ ಸಾಲಿನ ಕೃಷಿ ಬಜೆಟ್‌ನಲ್ಲಿ ಈ ಘೋಷಣೆ ಮಾಡಲಾಗಿದ್ದು, ಇದಕ್ಕಾಗಿ 20 ಕೋಟಿ ರೂಪಾಯಿ ನೀಡಲಾಗುವುದು ಎಂದು ಮುಖ್ಯಮಂತ್ರಿ ಪ್ರಕಟಿಸಿದ್ದಾರೆ.

ಗ್ರಾಮೀಣ ಪ್ರದೇಶದಲ್ಲಿ ಕೃಷಿಕರೊಡನೆ ಕೆಲಸ ಮಾಡಲು ತಾಂತ್ರಿಕ ಸಿಬ್ಬಂದಿಯ ಕೊರತೆ ಇರುವುದರಿಂದ ಕೃಷಿ, ತೋಟಗಾರಿಕೆ, ಪಶುಸಂಗೋಪನೆ ಮತ್ತು ಮೀನುಗಾರಿಕೆ ವಿಶ್ವವಿದ್ಯಾಲಯಗಳು ಹಾಗೂ ಕೃಷಿ ವಿಜ್ಞಾನ ಕೇಂದ್ರಗಳ ಮೂಲಕ ವಿವಿಧ ವಿಷಯಗಳ ಡಿಪ್ಲೊಮಾ ಮತ್ತು ಸರ್ಟಿಫಿಕೇಟ್ ಕೋರ್ಸ್‌ಗಳನ್ನು ಆರಂಭಿಸಲಾಗುತ್ತದೆ.

ಈ ವರ್ಷ 1000 ವಿದ್ಯಾರ್ಥಿಗಳು ದೀರ್ಘಾವಧಿ ಹಾಗೂ ಮೂರು ಸಾವಿರ ವಿದ್ಯಾರ್ಥಿಗಳಿಗೆ ಅಲ್ಪಾವಧಿ ತರಬೇತಿ ನೀಡಲಾಗುತ್ತದೆ. ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ನೀಡಲಾಗುತ್ತದೆ.

ಸ್ವಯಂ ಉದ್ಯೋಗಕ್ಕೆ 25 ಸಾವಿರ
ಸ್ವಯಂ ಉದ್ಯೋಗ ನಡೆಸುವವರಿಗೆ ಇಲ್ಲಿವರೆಗೆ ದೊರೆಯುತ್ತಿದ್ದ 10ಸಾವಿರ ರೂಪಾಯಿಗಳನ್ನು 25ಸಾವಿರಕ್ಕೆ ಏರಿಸಲಾಗಿದೆ. ಇದಕ್ಕಾಗಿ ಬಜೆಟ್‌ನಲ್ಲಿ 12 ಕೋಟಿ ಹಣ ಮೀಸಲು ಇರಿಸಲಾಗಿದೆ.ವಿಶೇಷ ಘಟಕ ಯೋಜನೆಗೆ ಈ ಸಾಲಿನಲ್ಲಿ 4,633 ಕೋಟಿ ಹಾಗೂ ಗಿರಿಜನರ ಅಭಿವೃದ್ಧಿ ಕುರಿತಾದ ಯೋಜನೆಗಳಿಗೆ 1,867 ಕೋಟಿ ರೂಪಾಯಿಗಳನ್ನು ಮೀಸಲು ಇರಿಸಲಾಗಿದೆ. ಈ ಯೋಜನೆಗಳ ಕ್ರೋಡೀಕೃತ ಅನುದಾನವನ್ನು ಒಂದು ಸಾವಿರ ಕೋಟಿ ರೂ.ಗೆ ಏರಿಸಲಾಗಿದೆ.

ಕಿರು ಸಾಲ ಯೋಜನೆ ಅಡಿ ಸಾಲ ಮತ್ತು ಸಹಾಯಧನವನ್ನು 5ರಿಂದ 10ಸಾವಿರಕ್ಕೆ ಏರಿಸಲಾಗಿದೆ. ಇದಕ್ಕಾಗಿ 10ಕೋಟಿ ರೂಪಾಯಿ ಮೀಸಲಿಡಲಾಗಿದೆ.

ಖಾಸಗಿ ವಾಹನ ಚಾಲಕರಿಗೆ ವಿಮೆ
ಉದ್ಯೋಗ ಮತ್ತು ತರಬೇತಿ ಹಾಗೂ ಕಾರ್ಮಿಕ ಕಲ್ಯಾಣಕ್ಕೆ ಸಂಬಂಧಿಸಿದಂತೆ ಬಜೆಟ್‌ನಲ್ಲಿ ವಿವಿಧ ಯೋಜನೆಗಳನ್ನು ಪ್ರಕಟಿಸಲಾಗಿದೆ. ಸ್ವಾವಲಂಬನ ಯೋಜನೆ ಹಾಗೂ ಸುವರ್ಣ ವಸ್ತ್ರ ನೀತಿ ಯೋಜನೆಗೆ 25 ಕೋಟಿ ರೂಪಾಯಿಗಳನ್ನು ವಿನಿಯೋಗಿಸಲಾಗುತ್ತಿದೆ. ಖಾಸಗಿ ವಾಹನ ಚಾಲಕರಿಗಾಗಿ ನೂತನ ವಿಮಾ ಯೋಜನೆಯನ್ನು ಜಾರಿಗೆ ತರಲಾಗುತ್ತಿದೆ.ವೈದ್ಯಕೀಯ ವಿದ್ಯುನ್ಮಾನ ವೃತ್ತಿ ಆರಂಭ, ಆಟೊ ಮೆಕಾನಿಕ್ ಕೋರ್ಸ್‌ಗೆ ಆದ್ಯತೆ, ಎರಡು ಬಹು ಕೌಶಲ್ಯ ಅಭಿವೃದ್ಧಿ ಕೇಂದ್ರಗಳ ಸ್ಥಾಪನೆಗೆ ಹಣ ವಿನಿಯೋಗಿಸಲು ಸರ್ಕಾರ ಮುಂದಾಗಿದೆ.

ಅಸಂಘಟಿತ ಕಾರ್ಮಿಕ ವರ್ಗಕ್ಕೆ ಸೇರಿದ ಖಾಸಗಿ ವಾಹನ ಚಾಲಕರು ಹಾಗೂ ಖಾಸಗಿ ಹೋಟೆಲ್ ಮಾಲೀಕರು,  ವರ್ಕ್‌ಶಾಪ್‌ಗಳಲ್ಲಿ ದುಡಿಯುವ ಕೆಲಸಗಾರರಿಗೆ ಪಿಂಚಣಿ ನೀಡುವ ಸ್ವಾವಲಂಬನ ಯೋಜನೆಗೆ 25 ಕೋಟಿ ರೂಪಾಯಿಗಳನ್ನು ಒದಗಿಸಲು ಚಿಂತಿಸಿದೆ. ಈ ಬಾರಿ 4 ಲಕ್ಷ ಅಸಂಘಟಿತ ಕಾರ್ಮಿಕರು ಯೋಜನೆಗೆ ನೋಂದಣಿಯಾಗುತ್ತಾರೆ ಎಂದು ಅಂದಾಜಿಸಲಾಗಿದೆ.

ಪೊಲೀಸ್ ಠಾಣೆ ನಿರ್ಮಾಣಕ್ಕೆ ಆದ್ಯತೆ
ರಾಜ್ಯದಲ್ಲಿ ನೂತನ ಪೊಲೀಸ್ ಠಾಣೆಗಳ ಸ್ಥಾಪನೆಗೆ ಮತ್ತು ನಿರ್ಮಾಣ ಹಂತದಲ್ಲಿರುವ 31 ಠಾಣೆಗಳ ಕಾಮಗಾರಿಯನ್ನು ಪೂರ್ಣಗೊಳಿಸಲು ಬಜೆಟ್‌ನಲ್ಲಿ 25 ಕೋಟಿ ರೂಪಾಯಿ ಮೀಸಲಿಡಲಾಗಿದೆ.

ರಾಜ್ಯದ ಎಂಟು ಕೇಂದ್ರ ಕಾರಾಗೃಹಗಳಲ್ಲಿ ಸುಧಾರಿತ ತಂತ್ರಜ್ಞಾನದ ‘ಎಕ್ಸ್‌ರೇ ಬ್ಯಾಗೇಜ್’ ಸ್ಕ್ಯಾನರ್‌ಗಳು, ಮೊಬೈಲ್ ಜಾಮರ್‌ಗಳು, ಲೋಹ ಶೋಧಕಗಳು ಹಾಗೂ ಸಿ.ಸಿ ಕ್ಯಾಮೆರಾದಂತಹ ಭದ್ರತಾ ಸಲಕರಣೆಗಳನ್ನು ಅಳವಡಿಸಲು ಎಂಟು ಕೋಟಿ ರೂಪಾಯಿ ತೆಗೆದಿಡಲಾಗಿದೆ.

ಹಿಂ.ವರ್ಗಕ್ಕೆ 760 ಕೋಟಿ
ಹಿಂದುಳಿದ ವರ್ಗಗಳ ಅಭಿವೃದ್ಧಿಗಾಗಿ 760 ಕೋಟಿ ರೂಪಾಯಿಗಳನ್ನು ಮೀಸಲು ಇರಿಸಲಾಗಿದೆ. ಕಳೆದ ಬಾರಿಯ ಬಜೆಟ್‌ಗಿಂತ 154ಕೋಟಿ ರೂಪಾಯಿ ಹೆಚ್ಚು ಹಣವನ್ನು ಈ ಅಭಿವೃದ್ಧಿಗೆ ಮೀಸಲು ಇರಿಸಲಾಗಿದೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಈ ಬಾರಿ 326 ಕೋಟಿ ಮೀಸಲು ಇರಿಸಲಾಗಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ 19ಕೋಟಿ ರೂಪಾಯಿ ಹೆಚ್ಚು ಅನುದಾನ ಇದಕ್ಕೆ ದೊರೆತಿದೆ.

ವಕ್ಫ್ ಸಂಸ್ಥೆಗಳ ನಿರ್ಮಾಣ ಮತ್ತು ನವೀಕರಣಕ್ಕೆ 16ಕೋಟಿ, ಬೆಂಗಳೂರಿನಲ್ಲಿ ಹಜ್‌ಮಹಲ್ ನಿರ್ಮಾಣಕ್ಕೆ 5 ಕೋಟಿ, ಕ್ರೈಸ್ತ ಸಮುದಾಯಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳಿಗೆ 50ಕೋಟಿ ಇರಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.