ಬೆಂಗಳೂರು: ಆಹಾರ ಭದ್ರತಾ ಕಾಯ್ದೆಯ ಮಾದರಿಯಲ್ಲಿ ರೈತರಿಗೂ ಭದ್ರತೆ ಒದಗಿಸಲು ‘ರೈತ ಭದ್ರತಾ ಕಾಯ್ದೆ’ ಜಾರಿಗೆ ತರಬೇಕು ಎಂದು ಸರ್ವೋದಯ ಕರ್ನಾಟಕ ಪಕ್ಷದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಸರ್ಕಾರವನ್ನು ಆಗ್ರಹಿಸಿದರು.
ವಿಧಾನಸಭೆಯಲ್ಲಿ ಮಂಗಳವಾರ ಬಜೆಟ್ ಮೇಲಿನ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ದೇಶದಲ್ಲಿ ಎಲ್ಲರಿಗೂ ಭದ್ರತೆ ಇದೆ. ರೈತನಿಗೆ ಮಾತ್ರ ಇಲ್ಲ. ಕೃಷಿ ಉತ್ಪನ್ನಗಳ ಬೆಲೆ ಕುಸಿತದಿಂದ ರೈತರನ್ನು ರಕ್ಷಿಸಲು ರೈತ ಭದ್ರತಾ ಕಾಯ್ದೆ ಜಾರಿಗೆ ತನ್ನಿ. ಮಾರುಕಟ್ಟೆಯಲ್ಲಿ ಬೆಲೆ ಕುಸಿದರೂ ಸರ್ಕಾರವೇ ರೈತರ ಬೆನ್ನಿಗೆ ನಿಲ್ಲುವಂತಹ ವ್ಯವಸ್ಥೆ ಮಾಡಿ’ ಎಂದರು.
‘ರಾಜ್ಯದಲ್ಲಿ ಕೃಷಿ ಬೆಲೆ ಆಯೋಗ ಅಸ್ತಿತ್ವಕ್ಕೆ ತರುವುದಾಗಿ ಸರ್ಕಾರ ಹೇಳುತ್ತಿದೆ. ಆಯೋಗ ರಚನೆ ಆದ ತಕ್ಷಣವೇ ರೈತರ ಸಮಸ್ಯೆಗಳಿಗೆ ಪರಿಹಾರ ದೊರೆಯಲು ಸಾಧ್ಯವೇ? ಬೆಲೆ ಕುಸಿತದಿಂದ ರೈತರನ್ನು ಪಾರು ಮಾಡಲು ಹಣ ಎಲ್ಲಿದೆ? ರೈತರ ರಕ್ಷಣೆಗಾಗಿ ಹೊಸ ತೆರಿಗೆ ವಿಧಿಸಿ. ಕನಿಷ್ಠ ₨ 12 ಸಾವಿರ ಕೋಟಿ ನಿಧಿ ಸ್ಥಾಪಿಸಿ’ ಎಂದು ಸಲಹೆ ಮಾಡಿದರು.
ಪಾಳೇಕರ್ ನಾಮಕರಣ ಮಾಡಿ: ‘ಸಹಜ ಕೃಷಿಯಲ್ಲಿ ದೊಡ್ಡ ಸಾಧನೆ ಮಾಡಿರುವ ಸುಭಾಷ್ ಪಾಳೇಕರ್ ಅವರನ್ನು ಬಳಸಿಕೊಂಡು ರಾಜ್ಯದ ರೈತರನ್ನು ರಕ್ಷಿಸಿ. ಯಾರ್‌್ಯಾರನ್ನೋ ವಿಧಾನ ಪರಿಷತ್ತಿಗೆ ನಾಮಕರಣ ಮಾಡುತ್ತೀರಿ. ಪಾಳೇಕರ್ ಅವರನ್ನು ನಾಮಕರಣ ಮಾಡಿ, ಕೃಷಿ ಸುಧಾರಣೆಗೆ ಅವರ ಸಲಹೆ ಪಡೆಯಿರಿ’ ಎಂದು ಪುಟ್ಟಣ್ಣಯ್ಯ ಒತ್ತಾಯಿಸಿದರು.
ವಿಚ್ಛೇದನ ನಿಯಂತ್ರಣ ಕಾನೂನು: ರಾಜ್ಯದಲ್ಲಿ ವಿವಾಹ ವಿಚ್ಛೇದನ ಪಡೆಯುವವರ ಸಂಖ್ಯೆ ಹೆಚ್ಚುತ್ತಿದೆ. ಬೆಂಗಳೂರು ನಗರದಲ್ಲಿ ಇದು ತೀವ್ರಗತಿಯಲ್ಲಿ ಏರುತ್ತಿದೆ. ಇದಕ್ಕೆ ಕಡಿವಾಣ ಹಾಕದೇ ಇದ್ದರೆ, ಸಮಾಜದ ಸ್ವಾಸ್ಥ್ಯ ಕಾಯಲು ಸಾಧ್ಯವಿಲ್ಲ. ಈ ಕಾರಣಕ್ಕಾಗಿ ಮದುವೆ ಮತ್ತು ವಿಚ್ಛೇದನದ ಬಗ್ಗೆ ಸದನದಲ್ಲಿ ಗಂಭೀರ ಚರ್ಚೆ ಆಗಬೇಕು. ವಿಚ್ಛೇದನ ಪ್ರಕರಣಗಳನ್ನು ಕಡಿಮೆ ಮಾಡುವ ದಿಸೆಯಲ್ಲಿ ಕಾನೂನು ರೂಪಿಸಬೇಕು ಎಂದು ಒತ್ತಾಯಿಸಿದರು.
ಮಾತಿನ ಮೋಡಿಗೆ ತಲೆದೂಗಿದರು
ಪುಟ್ಟಣ್ಣಯ್ಯ ಒಂದು ಗಂಟೆಗೂ ಹೆಚ್ಚು ಕಾಲ ಮಾತನಾಡಿದರು. ತಮ್ಮ ಎಂದಿನ ಶೈಲಿಯಲ್ಲಿ ಹಲವು ಹಾಸ್ಯ ಚಟಾಕಿಗಳನ್ನು ಹಾರಿಸಿದರು. ಕೃಷಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಆರೋಗ್ಯ ಹೀಗೆ ಹತ್ತು ಹಲವು ವಿಷಯಗಳ ಬಗ್ಗೆ ಗಂಭೀರವಾಗಿ ವಿಚಾರ ಮಂಡಿಸಿದರು. ಅವರ ಮಾತಿನ ಶೈಲಿಗೆ ತಲೆದೂಗಿದ ಬಹುತೇಕ ಸದಸ್ಯರು ಅವರಿಗೆ ಹೆಚ್ಚು ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.