ADVERTISEMENT

ರೈಲಿಲ್ಲದ ಕೋಲಾರಕ್ಕೆ ಕೋಚ್ ಕಾರ್ಖಾನೆ!

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2011, 18:35 IST
Last Updated 25 ಫೆಬ್ರುವರಿ 2011, 18:35 IST

ಕೋಲಾರ: ಶುಕ್ರವಾರ ಮಂಡನೆಯಾಗಿರುವ ರೈಲ್ವೆ ಬಜೆಟ್ ಜಿಲ್ಲೆಯ ಮಟ್ಟಿಗೆ, ನಿತ್ಯದೂಟಕ್ಕೆ ಎದುರು ನೋಡುತ್ತಿದ್ದವರಿಗೆ ಹಬ್ಬದೂಟವನ್ನೆ ಬಡಿಸಿದಂತಾಗಿದೆ!

ರೈಲ್ವೆ ಕೋಚ್ ಕಾರ್ಖಾನೆಯನ್ನು ಇಲ್ಲಿ ಸ್ಥಾಪಿಸುವ ಘೋಷಣೆ ಬಜೆಟ್‌ನಲ್ಲಿ ಹೊರಬಿದ್ದಿದೆ. ಆ ಮೂಲಕ, ರೈಲ್ವೆ ಕೋಚ್ ಕಾರ್ಖಾನೆಯುಳ್ಳ ಜಿಲ್ಲೆಯಾಗಿ ಕೋಲಾರ ವಿಶೇಷ ಗಮನ ಸೆಳೆಯಲಿದೆ. ದೇಶದ ಎಲ್ಲೆಡೆಗೆ ಅಗತ್ಯವಿರುವ ಕೋಚ್‌ಗಳ ನಿರ್ಮಾಣ ಕಾರ್ಖಾನೆ ಶುರುವಾದರೆ ಇಡೀ ದೇಶದಲ್ಲಿ ಕೋಲಾರದ ಹೆಸರು ವಿಶಿಷ್ಟವಾಗಿ ಹೊಳೆಯಲಿದೆ.

ಜಿಲ್ಲಾ ಕೇಂದ್ರವಾದ ಕೋಲಾರದಿಂದ ಬೆಂಗಳೂರಿಗೆ ನಿತ್ಯ ಪ್ರಯಾಣಿಸಲು ಸಮರ್ಪಕ ರೈಲು ವ್ಯವಸ್ಥೆಗಾಗಿ ಎದುರು ನೋಡುತ್ತಾ ‘ನಿಂತ’ ಹೋರಾಟಕ್ಕೆ 30 ವರ್ಷ. ಫಲಿತಾಂಶ ಮಾತ್ರ ಸಮಾಧಾನಕರವಾಗಿಲ್ಲ. ಇಂಥ ಸಂದರ್ಭದಲ್ಲೆ, ಕೋಲಾರದಲ್ಲಿ ರೈಲು ಕೋಚ್ ಕಾರ್ಖಾನೆ (ಆರ್‌ಸಿಎಫ್) ಸ್ಥಾಪಿಸುವ ನಿರ್ಧಾರವನ್ನು ಸಚಿವೆ ಮಮತಾ ಬ್ಯಾನರ್ಜಿ ಪ್ರಕಟಿಸಿದ್ದಾರೆ. ಈ ನಿರ್ಧಾರದ ಹಿಂದೆ, ರೈಲ್ವೆ ಖಾತೆ ಸಹಾಯಕ ಸಚಿವರೂ ಆಗಿರುವ ಇಲ್ಲಿನ ಸಂಸದ ಕೆ.ಎಚ್.ಮುನಿಯಪ್ಪನವರ ಪ್ರಯತ್ನ-ಪ್ರಭಾವ ಕೆಲಸ ಮಾಡಿರುವುದು ಮರೆಯುವಂತಿಲ್ಲ.

ಖಾಸಗಿ-ಸಾರ್ವಜನಿಕ ಸಹಭಾಗಿತ್ವ ಅಥವಾ ಜಂಟಿ ಪ್ರಯತ್ನದಲ್ಲಿ ಕೋಚ್ ಕಾರ್ಖಾನೆ ಸ್ಥಾಪಿಸುವ ಉದ್ದೇಶದ ಹಿಂದೆ ಕೋಲಾರದಲ್ಲಿ ರೈಲ್ವೆ ಮೂಲಸೌಕರ್ಯ ಕಲ್ಪಿಸುವ ಮತ್ತು ಅಪಾರ ಹಣಕಾಸು ಹೂಡುವ ಸಾಧ್ಯತೆ ಎದ್ದು ಕಂಡಿದೆ.

ಕಾರ್ಖಾನೆ ಸ್ಥಾಪನೆಯ ಘೋಷಣೆಯ ಬೆನ್ನಿಗೇ, ಕಾರ್ಖಾನೆಯಿಂದ ಸ್ಥಳೀಯರಿಗೆ ಸಾಕಷ್ಟು ಉದ್ಯೋಗವೂ ದೊರಕಲಿದೆ ಎಂಬ ನಿರೀಕ್ಷೆಯೂ ಹುಟ್ಟಿದೆ.

ಎಲ್ಲೆಲ್ಲಿ?: ಲಭ್ಯ ಮೂಲಗಳ ಪ್ರಕಾರ, ಮೊದಲು 1855ರಲ್ಲಿ ಈಸ್ಟ್ ಇಂಡಿಯನ್ ರೈಲ್ವೆಯು ಕ್ಯಾರಿಯೇಜ್ ಮತ್ತು ವ್ಯಾಗನ್ ವಿಭಾಗವನ್ನು ಸ್ಥಾಪಿಸಿತ್ತು. 1900ರ ಹೊತ್ತಿಗೆ ಅದರ ಕಾರ್ಯ ಸ್ಥಗಿತಗೊಂಡಿತ್ತು. ಎರಡನೇ ಕಾರ್ಖಾನೆ, ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) 1952ರಲ್ಲಿ ಚೆನ್ನೈನ ಪೆರಂಬೂರಿನಲ್ಲಿ ಆರಂಭವಾಯಿತು. ಮೂರನೇಯದು, ಪಂಜಾಬ್‌ನ ಕಪುರ್ತಲಾದಲ್ಲಿದೆ. ಈ ಕಾರ್ಖಾನೆಗೆ 1986ರಲ್ಲಿ ಅಂದಿನ ಪ್ರಧಾನಿ ರಾಜೀವಗಾಂಧಿ ಚಾಲನೆ ನೀಡಿದ್ದರು. 4ನೇ ಕಾರ್ಖಾನೆ ಉತ್ತರಪ್ರದೇಶದ ರಾಯ್‌ಬರೇಲಿಯಲ್ಲಿ ನಿರ್ಮಾಣವಾಗುತ್ತಿದೆ. ಕಳೆದ ಮೇ 26ರಂದು ಶುರುವಾದ ಕಾಮಗಾರಿಯ ಮೊದಲ ಹಂತ ಬರುವ ಮಾರ್ಚ್‌ನಲ್ಲಿ ಕೊನೆಗೊಳ್ಳಲಿದೆ. ಎರಡನೇ ಹಂತದ ಕಾಮಗಾರಿ ಇನ್ನೂ ಶುರುವಾಗಬೇಕಿದ್ದು, 2012 ಆಗಸ್ಟ್‌ನಲ್ಲಿ ಪೂರ್ಣಗೊಳಿಸುವ ಗುರಿ ಇದೆ. 2013ರ ಜೂನ್ ವೇಳೆಗೆ ಒಟ್ಟು ಕಾಮಗಾರಿ ಪೂರ್ಣಗೊಳಿಸುವ ಗುರಿ ಇದೆ. ಇದೀಗ ಕೋಲಾರದಲ್ಲೂ ಕೋಚ್ ಕಾರ್ಖಾನೆ ಸ್ಥಾಪನೆಯಾಗಲಿದೆ.

ಇಂಥ ಅದ್ಭುತ ಅವಕಾಶ ದೊರೆತಿರುವ ಕೋಲಾರ ಜಿಲ್ಲಾ ಕೇಂದ್ರದಿಂದ ಬೆಂಗಳೂರು ರೈಲು ನಿಲ್ದಾಣಕ್ಕೆ ತೆರಳಲು ಒಂದೇ ಒಂದು ರೈಲು ಸೌಲಭ್ಯವೂ ಇಲ್ಲ ಎಂಬುದು ವಿಪರ್ಯಾಸ. ಬೆಳಿಗ್ಗೆ 7.15ಕ್ಕೆ ಕೋಲಾರ ನಿಲ್ದಾಣ ಬಿಡುವ ರೈಲು ಬೆಂಗಳೂರು ಕಂಟೋನ್ಮೆಂಟ್‌ವರೆಗೂ ಹೋಗುತ್ತದಷ್ಟೆ. ಅಲ್ಲಿಂದ ಪ್ರಯಾಣಿಕರು, ಆಟೋರಿಕ್ಷಾ, ಬಸ್ ಹತ್ತಿ ತಮ್ಮ ಗಮ್ಯ ತಲುಪಬೇಕು. ಅದೇ ರೈಲು ಸಂಜೆ 5.55ಕ್ಕೆ ಕಂಟೋನ್ಮೆಂಟ್ ಬಿಟ್ಟು ರಾತ್ರಿ 8.15ಕ್ಕೆ ಕೋಲಾರಕ್ಕೆ ಬರುತ್ತದೆ. ಕೋಲಾರಕ್ಕೆ ಇರುವುದು ಒಂದೇ ರೈಲು. ಬಂಗಾರಪೇಟೆಯಿಂದ ಬೆಂಗಳೂರಿಗೆ ದಂಡಿಯಾಗಿ ರೈಲಿದ್ದರೂ ಕೋಲಾರದ ಮಂದಿಗೆ ಪ್ರಯೋಜನವಿಲ್ಲದಂತಾಗಿದೆ.

ಇದೀಗ ಬಜೆಟ್‌ನಲ್ಲಿ ಕೋಲಾರ- ಬೆಂಗಳೂರು ನಡುವೆ ಎಕ್ಸ್‌ಪ್ರೆಸ್ ರೈಲು ಸೌಲಭ್ಯ ಒದಗಿಸಲಾಗಿದೆ. ಕೋಲಾರ- ವೈಟ್‌ಫೀಲ್ಡ್ ನಡುವಿನ ರೈಲು ಮಾರ್ಗ ನಿರ್ಮಾಣಕ್ಕೆ ಹಣ ನೀಡಲಾಗಿದೆ. ಬೆಂಗಳೂರು- ಬಂಗಾರಪೇಟೆ ನಡುವೆ ಹೊಸ ರೈಲಿಗೂ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.