ADVERTISEMENT

ರೋಬೊಟಿಕ್ ಒಲಿಂಪಿಯಾಡ್

ಮಕ್ಕಳ ಮಾಂತ್ರಿಕ ಸ್ಪರ್ಶಕ್ಕೆ ನರ್ತಿಸಿದ ರೋಬೊಗಳು

​ಪ್ರಜಾವಾಣಿ ವಾರ್ತೆ
Published 4 ಆಗಸ್ಟ್ 2013, 19:59 IST
Last Updated 4 ಆಗಸ್ಟ್ 2013, 19:59 IST

ಬೆಂಗಳೂರು: ಮಕ್ಕಳಲ್ಲಿನ ತಾಂತ್ರಿಕ ಕೌಶಲವನ್ನು ಪ್ರಕಾಶಗೊಳಿಸುವ ಉದ್ದೇಶದಿಂದ ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯ ಹಾಗೂ ಎಜುಟೆಕ್ ಇಂಡಿಯಾ ಜಂಟಿಯಾಗಿ ನಗರದಲ್ಲಿ 8ನೇ ಇಂಡಿಯನ್ ರೊಬೊಟಿಕ್ ಒಲಿಂಪಿಯಾಡ್ ಸ್ಪರ್ಧೆಯನ್ನು ಭಾನುವಾರ ಆಯೋಜಿಸಿದ್ದವು.

ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ರೋಬೊಟ್ ಯಂತ್ರಗಳನ್ನು ತಯಾರಿಸುವಲ್ಲಿ ಉತ್ಸಾಹದಿಂದ ನಿರತರಾಗಿದ್ದರು. ರೋಬೊಟ್ ಯಂತ್ರಗಳ ಬಿಡಿ ಭಾಗಗಳನ್ನು ಜೋಡಿಸಿ, ಅದಕ್ಕೆ ಒಂದು ರೂಪು ನೀಡಿ ಯಂತ್ರವನ್ನು ತಯಾರಿಸುವಲ್ಲಿ ವಿದ್ಯಾರ್ಥಿಗಳು ಆಸಕ್ತರಾಗಿದ್ದರು. ತಾವು ತಯಾರಿಸಿದ ರೋಬೊಟ್ ಯಂತ್ರಗಳ ಉಪಯುಕ್ತತೆಯನ್ನು ಹೇಳಲು ವಿದ್ಯಾರ್ಥಿಗಳು ಉತ್ಸುಕರಾಗಿದ್ದರು.

`ನನಗೆ ವಿಜ್ಞಾನದ ಬಗ್ಗೆ ತಿಳಿದುಕೊಳ್ಳಲು ಆಸಕ್ತಿಯಿದೆ. ರೋಬೊಟ್ ಯಂತ್ರಗಳ ತಯಾರಿಕೆಯ ಸ್ಪರ್ಧೆಯಲ್ಲಿ ಭಾಗಿಯಾಗಿದ್ದು ಸಂತಸ ತಂದಿದೆ. ರೋಬೊಟ್ ಯಂತ್ರಗಳ ಬಳಕೆಯ ಕುರಿತು ಹೆಚ್ಚಿನ ಸಂಶೋಧನೆ ಕೈಗೊಳ್ಳಬೇಕೆಂಬ ಆಸೆಯಿದೆ. ಮುಂದೆ ವಿಜ್ಞಾನಿಯಾಗಬೇಕೆಂಬ ಗುರಿಯಿದೆ' ಎಂದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಅಭಿಷೇಕ್ ಭವಿಷ್ಯದ ಕನಸನ್ನು ಹಂಚಿಕೊಂಡರು.

`ಇಷ್ಟು ದಿನ ರೋಬೊಟ್‌ಗಳನ್ನು ಟಿ.ವಿ ಯಲ್ಲಿ ನೋಡುತ್ತಿದ್ದೆ. ಆದರೆ, ಈಗ ನಮ್ಮ ತಂಡದ ಮೂಲಕ ನಾವೇ ರೋಬೊಟ್ ಯಂತ್ರಗಳನ್ನು ನಿರ್ಮಿಸಲು ಅವಕಾಶ ದೊರೆತಿರುವುದು ಸಂತೋಷವಾಗಿದೆ' ಎಂದು ಪ್ರಥಮ ಪಿಯುಸಿ ವಿದ್ಯಾರ್ಥಿನಿ ಅಂಕಿತಾ ಹೇಳಿದರು.

`ಮಕ್ಕಳಿಗೆ ರೊಬೊಟ್‌ಗಳ ಬಗ್ಗೆ ಹೆಚ್ಚಿನ ಮಾಹಿತಿ ಮತ್ತು ಅರಿವು ನೀಡಲು ಈ ಸ್ಪರ್ಧೆಯನ್ನು ಆಯೋಜಿಸಿದೆ. ಮಕ್ಕಳು ಅವರೇ ಖುದ್ದಾಗಿ ರೋಬೊಟ್ ಯಂತ್ರಗಳನ್ನು ನಿರ್ಮಾಣ ಮಾಡುವ ಸ್ಪರ್ಧೆ ಇದಾಗಿದೆ' ಎಂದು ವಿಶ್ವೇಶ್ವರಯ್ಯ ಕೈಗಾರಿಕಾ ಮತ್ತು ತಾಂತ್ರಿಕ ವಸ್ತು ಸಂಗ್ರಹಾಲಯದ ಮೇಲ್ವಿಚಾರಕ ಕೆ.ಮದನ್‌ಗೋಪಾಲ್ ಹೇಳಿದರು.

`ಈ ಸ್ಪರ್ಧೆಗಾಗಿ ಮೂರು ತಿಂಗಳಿನಿಂದ ತಯಾರಿ ನಡೆದಿದೆ. ನಗರದ ಹಲವು ಶಾಲೆಗಳ ಮಕ್ಕಳು ಸ್ಪರ್ಧೆಯಲ್ಲಿ ಭಾಗವಹಿಸಿದ್ದಾರೆ. ಸ್ಪರ್ಧೆಯಲ್ಲಿ ಅವರಿಗೆ 2 ಗಂಟೆ ಅವಧಿ ನೀಡಲಾಗಿದೆ. ಈ ವೇಳೆಯಲ್ಲಿ ಅವರು ತಮ್ಮ ರೋಬೊಟ್ ಯಂತ್ರಗಳನ್ನು ನಿರ್ಮಿಸಬಹುದು' ಎಂದು ವಿವರಿಸಿದರು.

`ಸ್ಪರ್ಧೆಯು ಮೂರು ವಿಭಾಗಗಳಲ್ಲಿ ನಡೆಯುತ್ತಿದೆ. 12 ವರ್ಷಕ್ಕಿಂತ ಕಡಿಮೆ ವರ್ಷದ ಮಕ್ಕಳ ಜೂನಿಯರ್, 13 ರಿಂದ 15 ವರ್ಷದ ಎಲಿಮೆಂಟರಿ ಮತ್ತು 16 ರಿಂದ 19 ವರ್ಷದ ಸಿನಿಯರ್ ಹೈ ತಂಡಗಳು ಭಾಗವಹಿಸಿವೆ. ಒಟ್ಟು 35 ತಂಡಗಳಿವೆ. ಒಂದು ತಂಡದಲ್ಲಿ ಮೂವರು ವಿದ್ಯಾರ್ಥಿಗಳಿದ್ದಾರೆ. ಇಲ್ಲಿ ಪ್ರತಿಯೊಂದರಲ್ಲಿ ಒಂದೊಂದು ತಂಡವನ್ನು ಆಯ್ಕೆ ಮಾಡಲಾಗುವುದು' ಎಂದು ಅವರು ಹೇಳಿದರು.

`ಇಲ್ಲಿ ಆಯ್ಕೆಯಾದವರನ್ನು ದೆಹಲಿಯಲ್ಲಿ ನಡೆಯಲಿರುವ ಇಂಡಿಯನ್ ರೊಬೊಟಿಕ್ ಒಲಿಂಪಿಯಾಡ್ ದ್ವಿತೀಯ ಸುತ್ತಿನ ಸ್ಪರ್ಧೆಗೆ ಕಳಿಸಲಾಗುವುದು. ಅಲ್ಲಿ ಆಯ್ಕೆಯಾಗುವ ತಂಡಗಳಿಗೆ ಇಂಡೊನೇಷ್ಯಾದ ಜಕಾರ್ತಾದಲ್ಲಿ ನಡೆಯಲಿರುವ ವಿಶ್ವ ರೋಬೊಟಿಕ್ ಒಲಿಂಪಿಯಾಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲು ಅವಕಾಶ ಸಿಗಲಿದೆ' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.