ADVERTISEMENT

ರೋಹಿತ್, ಪೂಜಾ, ಭಾಗ್ಯಶ್ರೀಗೆ ಯುವ ವಿಜ್ಞಾನಿ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 2 ಜುಲೈ 2013, 20:12 IST
Last Updated 2 ಜುಲೈ 2013, 20:12 IST

ಬೆಂಗಳೂರು: `ವಿಜ್ಞಾನಿಯಾಗಬೇಕೆಂಬುದು ಬಹುದೊಡ್ಡ ಕನಸು, ಈ ಪ್ರಶಸ್ತಿಯು ಅದರತ್ತ ಮುನ್ನುಗ್ಗಿ ಸಾಗುವಂತೆ ಪ್ರೇರೇಪಿಸಲು ಸಹಕಾರಿಯಾಗಿದೆ' ಎಂದು ಗದಗದ ಭಾಗ್ಯಶ್ರೀ ಜೋಶಿ ಹರ್ಷ ವ್ಯಕ್ತಪಡಿಸಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಮತ್ತು ರಾಜ್ಯ ವಿಜ್ಞಾನ ಪರಿಷತ್ತಿನ ಸಹಯೋಗದೊಂದಿಗೆ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಯುವ ವಿಜ್ಞಾನಿ ಪ್ರಶಸ್ತಿ ಸ್ವೀಕರಿಸಿ ಅವರು ಮಾತನಾಡಿದರು.

`ನ್ಯೂಟನ್ ತತ್ವಗಳನ್ನು ಆಧರಿಸಿದ ಮಾದರಿಯ ಮಂಡನೆ ಹಾಗೂ ಮೂಲ ವಿಜ್ಞಾನದ ಕುರಿತ ರಸಪ್ರಶ್ನೆಗಳಿಗೆ ಚುರುಕಿನ ಉತ್ತರ ನೀಡಿದ್ದರಿಂದ ಈ ಸ್ಪರ್ಧೆಯಲ್ಲಿ ಮೊದಲ ಪ್ರಶಸ್ತಿ ಪಡೆದುಕೊಳ್ಳಲು ಸಾಧ್ಯವಾಯಿತು. ಪೋಷಕರು ಹಾಗೂ ಗದಗದ ಸರ್ಕಾರಿ ಕಾಲೇಜಿನ ಅಧ್ಯಾಪಕರ ಸತತ ಪರಿಶ್ರಮವು ಇದರ ಹಿಂದಿದೆ' ಎಂದು ತಿಳಿಸಿದರು.

ಪ್ರಶಸ್ತಿ ಪ್ರದಾನ ಮಾಡಿದ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, `ರಾಜ್ಯ ವಿಜ್ಞಾನ ಪರಿಷತ್ತು ಮಕ್ಕಳಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತೆಗೆಯಲು ಸೂಕ್ತ ವೇದಿಕೆಯನ್ನು ಒದಗಿಸಿದೆ. ಪ್ರಶಸ್ತಿ ಸ್ವೀಕರಿಸಿದ ಮಕ್ಕಳಲ್ಲಿ ಕೆಲವರಿಗೆ ವೈದ್ಯರಾಗಬೇಕೆಂಬ ಕನಸಿರಬಹುದು. ಕೇವಲ ವೈದ್ಯರಾಗದೇ ವೈದ್ಯಕೀಯ ಕ್ಷೇತ್ರದಲ್ಲಿ ಉನ್ನತ ಮಟ್ಟದ ಸಂಶೋಧನೆ ಮಾಡುವತ್ತ ಆಸಕ್ತಿ ಬೆಳೆಸಿಕೊಳ್ಳಿ' ಎಂದು ಸಲಹೆ ನೀಡಿದರು.

`ಕ್ಯಾನ್ಸರ್, ಏಡ್ಸ್‌ನಂತಹ ಕಾಯಿಲೆಗಳಿಗೆ ಈವರೆಗೂ ಸಮರ್ಪಕ ಔಷಧಿಯನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಯುವವಿಜ್ಞಾನಿಗಳು ಇಂತಹ ವಿಚಾರಗಳ ಕುರಿತು ಚಿಂತನೆ ನಡೆಸಬೇಕು' ಎಂದು ತಿಳಿಸಿದರು.

ಪರಿಷತ್ತಿನ ಅಧ್ಯಕ್ಷ ಡಾ.ಎಚ್.ಎಸ್. ನಿರಂಜನ ಆರಾಧ್ಯ, `ವಿದ್ಯಾರ್ಥಿಗಳು ಮೂಲ ವಿಜ್ಞಾನದೆಡೆಗೆ ಕುತೂಹಲ ಬೆಳೆಸಿಕೊಳ್ಳುವ ಅಗತ್ಯವಿದೆ. ವಿದ್ಯಾರ್ಥಿ ಜೀವನದಿಂದಲೇ ಸಂಶೋಧನಾತ್ಮಕ ಪ್ರಕ್ರಿಯೆಯಲ್ಲಿ ತೊಡಗಿಕೊಂಡ ವಿದ್ಯಾರ್ಥಿಗಳಿಗೆ ಉತ್ತಮ ಭವಿಷ್ಯವಿದೆ' ಎಂದರು.

ಮೊದಲ ಪ್ರಶಸ್ತಿ ಪಡೆದುಕೊಂಡ ಭಾಗ್ಯಶ್ರೀ ಜೋಶಿ ಅವರಿಗೆ ರೂ 10 ಸಾವಿರ ನಗದು ಬಹುಮಾನ, ಶಿವಮೊಗ್ಗದ ಆರ್.ಪೂಜಾ (ದ್ವಿತೀಯ- ರೂ 7 ಸಾವಿರ), ಕೋಲಾರದ ಜಿ.ಎಸ್.ರೋಹಿತ್ (ತೃತೀಯ- ರೂ 5 ಸಾವಿರ) ಬಹುಮಾನ ನೀಡಲಾಯಿತು.
ನ್ಯಾಯ ವಿಜ್ಞಾನ ಪ್ರಯೋಗಾಲಯದ ಪ್ರಭಾರ ಉಪನಿರ್ದೇಶಕ ಡಾ.ವಿನೋದ್ ಲಕ್ಕಪ್ಪನ್ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.