ADVERTISEMENT

‘ಲಕ್ಸ್‌ ಸೋಪ್‌’ನಿಂದ ತೊಳೆದಿದ್ದಾರಾ?’

​ಪ್ರಜಾವಾಣಿ ವಾರ್ತೆ
Published 28 ಫೆಬ್ರುವರಿ 2018, 19:37 IST
Last Updated 28 ಫೆಬ್ರುವರಿ 2018, 19:37 IST

ಹೊಸಪೇಟೆ: ‘ಬಿಜೆಪಿಯಲ್ಲಿದ್ದ ಆನಂದ್‌ ಸಿಂಗ್‌, ಬಿ.ನಾಗೇಂದ್ರ ಅವರು ಕಾಂಗ್ರೆಸ್‌ಗೆ ಹೋಗಿ ಪವಿತ್ರರಾದರೇ? ಅವರನ್ನು ಕಾಂಗ್ರೆಸ್‌ನವರು ‘ಲಕ್ಸ್‌ ಸೋಪ್‌’ನಿಂದ ತೊಳೆದಿದ್ದಾರಾ?’

ಹೀಗೆ ಪ್ರಶ್ನಿಸಿದ್ದು ಸಂಸದ ಬಿ. ಶ್ರೀರಾಮುಲು.

ಬುಧವಾರ ಇಲ್ಲಿ ಆಯೋಜಿಸಿದ್ದ ಬಿಜೆಪಿ ವಿಜಯ ಸಂಕಲ್ಪ ಸಭೆಯಲ್ಲಿ ಮಾತನಾಡಿದ ಅವರು, ‘ಬಳ್ಳಾರಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆಸಿ ಬಿಜೆಪಿ ಶಾಸಕರು ಜೈಲಿಗೆ ಹೋಗಿದ್ದರು ಎಂದು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲೆಡೆ ಟೀಕಿಸುತ್ತಿದ್ದರು. ಆದರೆ, ಇತ್ತೀಚೆಗೆ ಅವರೇ ತಮ್ಮ ಸಮ್ಮುಖದಲ್ಲಿ ಇವರಿಬ್ಬರನ್ನೂ ಪಕ್ಷಕ್ಕೆ ಸೇರಿಸಿಕೊಂಡರು. ಹಾಗಿದ್ದರೆ ಅವರಿಬ್ಬರೂ ಈಗ ಪವಿತ್ರರಾದರೇ’ ಎಂದು ಪ್ರಶ್ನಿಸಿದರು.

ADVERTISEMENT

‘ಆನಂದ್‌ ಸಿಂಗ್‌ ಬಿಜೆಪಿಯಿಂದ ಎರಡು ಸಲ ಶಾಸಕರಾದರು. ಪಕ್ಷ ಅವರನ್ನು ಮಂತ್ರಿ ಮಾಡಿತ್ತು. ಕೃತಜ್ಞತೆಯಿಲ್ಲದೇ ಪಕ್ಷ ಬಿಟ್ಟು ಹೋಗಿದ್ದಾರೆ. ಈಗ ಸಚಿವ ಸಂತೋಷ್‌ ಲಾಡ್‌ ಜತೆ ಸೇರಿಕೊಂಡಿರುವ ಆನಂದ್‌ ಸಿಂಗ್‌, ನಾಗೇಂದ್ರ ನಾಟಕವಾಡುತ್ತಿದ್ದಾರೆ’ ಎಂದರು.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಮಾತನಾಡಿ, ‘ಜೈಲಿಗೆ ಹೋಗಿ ಬಂದಿರುವ ಭ್ರಷ್ಟ ಆನಂದ್‌ ಸಿಂಗ್‌, ನಾಗೇಂದ್ರ ಅವರನ್ನು ಪಕ್ಕದಲ್ಲಿ ಕೂರಿಸಿಕೊಂಡು ರಾಹುಲ್‌ ಗಾಂಧಿ, ಸಿದ್ದರಾಮಯ್ಯನವರು ನನ್ನನ್ನು ಟೀಕಿಸಿದ್ದಾರೆ. ಇದು ಅವರು ಯಾವ ಮಟ್ಟಕ್ಕೆ ಇಳಿದಿದ್ದಾರೆ ಎಂಬುದನ್ನು ತೋರಿಸಿಕೊಡುತ್ತದೆ’ ಎಂದರು.

‘ಜೈಲಿಗೆ ಹೋಗಿದ್ದಾಗ, ಸಂಕಷ್ಟದಲ್ಲಿದ್ದಾಗ ಆನಂದ್‌ ಸಿಂಗ್‌ ಅವರೊಂದಿಗೆ ಪಕ್ಷ ಇತ್ತು. ಆದರೆ, ಬಿಜೆಪಿ ನಿಮಗೇನು ಅನ್ಯಾಯ ಮಾಡಿದೆ ಎಂದು ಪಕ್ಷ ತೊರೆದಿದ್ದೀರಿ. ಪಕ್ಷಕ್ಕೆ ದ್ರೋಹ ಎಸಗಿರುವ ನಿಮಗೆ ಕ್ಷೇತ್ರದಲ್ಲಿನ ಜನ ತಕ್ಕ ಪಾಠ ಕಲಿಸುವರು’ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.