ಯಲ್ಲಾಪುರ (ಉ.ಕ. ಜಿಲ್ಲೆ): ರೋಗ ನಿರೋಧಕ ಚುಚ್ಚುಮದ್ದು ಮತ್ತು ಲಸಿಕೆ ಹಾಕಿದ ಮಾರನೆ ದಿನವೇ ಮಗುವೊಂದು ಮೃತಪಟ್ಟ ಘಟನೆ ತಾಲ್ಲೂಕಿನ ಅರಬೈಲ್ ಸಮೀಪದ ಕೆಳಾಸೆ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಕೆಳಾಸೆಯ ಗೋಪಾಲ ಮತ್ತು ಮಾದೇವಿ ಸಿದ್ದಿ ದಂಪತಿ ಪುತ್ರಿ, ಒಂದೂವರೆ ತಿಂಗಳ ಮಗಳು ಧನ್ಯಾ ಸಿದ್ದಿ ಮೃತಪಟ್ಟಿದ್ದಾಳೆ. ವಜ್ರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಗೆ ಬರುವ ಅರಬೈಲ್ ಉಪ ಆರೋಗ್ಯ ಕೇಂದ್ರದಲ್ಲಿ ಈಕೆಗೆ ಗುರುವಾರ ಗಂಟಲುಮಾರಿ, ನಾಯಿಕೆಮ್ಮು, ಧನುರ್ವಾಯು, ಹೆಪಟೈಟಿಸ್-ಬಿ ಚುಚ್ಚುಮದ್ದು ಮತ್ತು ಪೋಲಿಯೊ ಲಸಿಕೆ ಹಾಕಲಾಗಿತ್ತು.
ಲಸಿಕೆ ಹಾಕಿಸಿಕೊಂಡ ನಂತರ ಮಧ್ಯಾಹ್ನದವರೆಗೆ ಮಗು ಆರೋಗ್ಯದಿಂದಲೇ ಇತ್ತು. ಸಂಜೆ ಸ್ವಲ್ಪ ಅಸ್ವಸ್ಥಗೊಂಡಿದೆ. ಚುಚ್ಚುಮದ್ದು ಕೊಟ್ಟ ನಂತರ ಇದು ಸಹಜ ಇರಬಹುದು ಎಂದು ಪಾಲಕರು ಸುಮ್ಮನಾಗಿದ್ದಾರೆ. ಆದರೆ ರಾತ್ರಿ 12ರ ಸುಮಾರಿಗೆ ಮಗುವಿಗೆ ತೀವ್ರ ಉಸಿರಾಟದ ಸಮಸ್ಯೆ ಕಾಣಿಸಿಕೊಂಡಿದೆ.
ಪಟ್ಟಣದಲ್ಲಿರುವ ಆಸ್ಪತ್ರೆಗೆ ಬರಲು ಸಾಧ್ಯವಾಗದೇ ಇರುವುದರಿಂದ ಪಾಲಕರು ಮಗುವನ್ನು ಬೆಳಿಗ್ಗೆ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಬಂದಿದ್ದಾರೆ. ಮಗುವನ್ನು ಪರೀಕ್ಷೆ ಮಾಡಿದ ಆರೋಗ್ಯ ಸಹಾಯಕಿ, ಮಗು ಮೃತಪಟ್ಟಿರುವುದನ್ನು ದೃಢಪಡಿಸಿದ್ದಾರೆ.
`ಮಗಳ ಸಾವಿಗೆ ಆರೋಗ್ಯ ಕೇಂದ್ರದಲ್ಲಿ ನೀಡಿರುವ ಲಸಿಕೆಯೇ ಕಾರಣ~ ಎಂದು ಗೋಪಾಲ ಸಿದ್ದಿ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.`ಅರಬೈಲ್ ಆರೋಗ್ಯ ಕೇಂದ್ರದಲ್ಲಿ ಗುರುವಾರ ಒಟ್ಟು ಆರು ಮಕ್ಕಳಿಗೆ ಲಸಿಕೆ ಹಾಕಲಾಗಿದೆ. ಐವರು ಮಕ್ಕಳ ಆರೋಗ್ಯದ ಬಗ್ಗೆ ವಿಚಾರಿಸಲಾಗಿದ್ದು ಅವರು ಆರೋಗ್ಯದಿಂದಿದ್ದಾರೆ.
ಮಗುವಿಗೆ ನೀಡಿರುವ ಚುಚ್ಚುಮದ್ದು ಮತ್ತು ಲಸಿಕೆಯ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗುವುದು. ಮರಣೋತ್ತರ ಪರೀಕ್ಷೆ ವರದಿಯಿಂದ ನಿಖರ ಕಾರಣ ತಿಳಿಯಲಿದೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಅಶೋಕ ಕುಮಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.