ADVERTISEMENT

ಲಾಕಪ್‌ ಡೆತ್‌: ಹೈಕೋರ್ಟ್‌ ಕಿಡಿ

​ಪ್ರಜಾವಾಣಿ ವಾರ್ತೆ
Published 16 ಸೆಪ್ಟೆಂಬರ್ 2013, 19:59 IST
Last Updated 16 ಸೆಪ್ಟೆಂಬರ್ 2013, 19:59 IST

ಬೆಂಗಳೂರು: ‘ಪೊಲೀಸ್‌ ವಶದಲ್ಲಿ ಆರೋಪಿಗಳು ಅಸಹಜವಾಗಿ ಸಾವನ್ನಪ್ಪುವ ಘಟನೆಗಳನ್ನು ಸಹಿಸಲಾಗದು’ ಎಂದು ಹೇಳಿರುವ ಹೈಕೋರ್ಟ್‌, ‘ಆರೋಪಿಗಳ ವಿಚಾರಣೆ­ಯಲ್ಲಿ ಕ್ರೂರ ವಿಧಾನಗಳನ್ನು ಅನುಸರಿಸುವುದಕ್ಕೆ ಅಂತ್ಯ ಹಾಡಬೇಕು. ವೈಜ್ಞಾನಿಕ ತನಿಖಾ ವಿಧಾನಗಳನ್ನು ಅಳವಡಿಸಿ­ಕೊಳ್ಳಬೇಕು’ ಎಂದು ಕಿವಿಮಾತು ಹೇಳಿದೆ.

ಕಳೆದ ವರ್ಷ ನಗರದಲ್ಲಿ ವರದಿಯಾದ ಸರಣಿ ಅತ್ಯಾಚಾರ ಪ್ರಕರಣಗಳ ಸೂಕ್ತ ತನಿಖೆಗೆ ಆಗ್ರಹಿಸಿ ವಕೀಲ ಎಂ.ಕೆ. ವಿಜಯಕುಮಾರ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಡಿ.ಎಚ್‌. ವಘೇಲಾ ಮತ್ತು ನ್ಯಾಯ­ಮೂರ್ತಿ ಬಿ.ವಿ. ನಾಗರತ್ನ ಅವರನ್ನು ಒಳಗೊಂಡ ವಿಭಾಗೀಯ ಪೀಠ ಸೋಮವಾರ ನಡೆಸಿತು.

‘ಜನರು ಪಾಪಗಳನ್ನು ತೊಳೆದುಕೊಳ್ಳಲು ಗಂಗಾ ನದಿ­ಯತ್ತ ಮುಖ ಮಾಡುತ್ತಾರೆ. ಆದರೆ ಗಂಗೆಯೇ ಮಲಿನ­ವಾದರೆ? ಹಾಗೆಯೇ ಜನ ವಿಶ್ವಾಸದಿಂದ ನೋಡುವ ಪೊಲೀಸ್‌ ಠಾಣೆಗಳಲ್ಲಿ ಅಸಹಜ ಸಾವು ಸಂಭವಿಸಬಾರದು’ ಎಂದು ಪೀಠ ಮೌಖಿಕವಾಗಿ ಹೇಳಿತು.
ಅತ್ಯಾಚಾರ ಮತ್ತು ಇತರ ವಿಶೇಷ ಅಪರಾಧ ಪ್ರಕರಣಗಳ ತನಿಖೆಗೆ ಪೊಲೀಸ್‌ ಇಲಾಖೆಯಲ್ಲಿ ಪ್ರತ್ಯೇಕ ತಂಡ ಇರಬೇಕು. ಅದಕ್ಕೆ ಕಾನೂನು ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳುವ ಹೊಣೆ ಹೊರಿಸಬಾರದು ಎಂದೂ ಪೀಠ ಸಲಹೆ ಮಾಡಿತು.

ಮಹಿಳೆಯರಿಗೆ ಮೀಸಲಾತಿ: ಪೊಲೀಸ್‌ ಅಧಿಕಾರಿಗಳ ವರ್ಗಾವಣೆಯನ್ನು, ಪ್ರಕಾಶ್ ಸಿಂಗ್‌ ಮತ್ತು ಕೇಂದ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿರುವ ನಿರ್ದೇಶನಗಳ ಅನುಸಾರವೇ ನಡೆಸಬೇಕು ಎಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಪೀಠಕ್ಕೆ ವಿವರಣೆ ನೀಡಿದ ಅಡ್ವೊಕೇಟ್‌ ಜನರಲ್‌ ಪ್ರೊ. ರವಿವರ್ಮ ಕುಮಾರ್‌, ‘ಈ ಕುರಿತು ಸುಪ್ರೀಂ ಕೋರ್ಟ್‌ ಸ್ವಯಂ­ಪ್ರೇರಿತವಾಗಿ ಪ್ರಕರಣವೊಂದನ್ನು ದಾಖಲಿಸಿಕೊಂಡಿದೆ.

ಪ್ರಕಾಶ್‌ ಸಿಂಗ್‌ ಪ್ರಕರಣದಲ್ಲಿ ನೀಡಿದ್ದ ನಿರ್ದೇಶನಗಳಲ್ಲಿ ಎಷ್ಟನ್ನು ಅನುಷ್ಠಾನಕ್ಕೆ ತರಲಾಗಿದೆ ಎಂಬ ಬಗ್ಗೆ ಮಾಹಿತಿ ನೀಡುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ’ ಎಂದು ವಿವರಣೆ ನೀಡಿದರು.

ಅಲ್ಲದೆ, ‘ನಿಯಮಗಳಿಗೆ ಅಗತ್ಯ ತಿದ್ದುಪಡಿ ತಂದು, ಸಬ್‌ ಇನ್‌ಸ್ಪೆಕ್ಟರ್‌ ಮತ್ತು ಕಾನ್‌ಸ್ಟೆಬಲ್‌ಗಳ ನೇಮಕಾತಿಯಲ್ಲಿ ಮಹಿಳೆಯರಿಗೆ ಶೇಕಡ 10ರಷ್ಟು ಮೀಸಲಾತಿ ಕಲ್ಪಿಸಲಾಗಿದೆ’ ಎಂದು ತಿಳಿಸಿದರು. ಇದನ್ನು ದಾಖಲಿಸಿಕೊಂಡ ಪೀಠ, ಎರಡೂ ಅರ್ಜಿಗಳನ್ನು ಇತ್ಯರ್ಥಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.