ADVERTISEMENT

‘ಲಿಂಗಾಯತ ಧರ್ಮ ವಿರೋಧಿಸುವ ಸಚಿವರು ರಾಜೀನಾಮೆ ಕೊಡಲಿ’

ಲಿಂಗಾಯತ ಧರ್ಮ ಮಹಾಸಭಾದ ಗೌರವಾಧ್ಯಕ್ಷೆ ಮಾತೆ ಮಹಾದೇವಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2018, 20:31 IST
Last Updated 10 ಮಾರ್ಚ್ 2018, 20:31 IST

ಬೆಂಗಳೂರು: ‘ಲಿಂಗಾಯತ ಪಂಗಡಕ್ಕೆ ಸ್ವತಂತ್ರ ಧರ್ಮದ ಮಾನ್ಯತೆ ನೀಡುವುದನ್ನು ವಿರೋಧಿಸುತ್ತಿರುವ ಕೆಲವು ಸಚಿವರು ಬೇಕಿದ್ದರೆ ರಾಜೀನಾಮೆ ಕೊಡಲಿ. ಆದರೆ, ಮುಖ್ಯಮಂತ್ರಿ ಯಾವುದೇ ಕಾರಣಕ್ಕೂ ಬ್ಲಾಕ್‌ಮೇಲ್‌ ತಂತ್ರಕ್ಕೆ ಬಗ್ಗಬಾರದು’ ಎಂದು ಲಿಂಗಾಯತ ಧರ್ಮ ಮಹಾಸಭಾದ ಗೌರವಾಧ್ಯಕ್ಷೆ ಮಾತೆ ಮಹಾದೇವಿ ಗುಡುಗಿದರು.

‘ಸಚಿವರಾದ ಈಶ್ವರ ಖಂಡ್ರೆ ಮತ್ತು ಎಸ್‌.ಎಸ್. ಮಲ್ಲಿಕಾರ್ಜುನ ಅವರ ವಿರೋಧದಿಂದಾಗಿ ಲಿಂಗಾಯತ ಪಂಗಡಕ್ಕೆ ಸ್ವತಂತ್ರ ಧರ್ಮದ ಮಾನ್ಯತೆಗೆ ಶಿಫಾರಸು ಮಾಡಲು ಹಿಂದೇಟು ಹಾಕುವುದರಿಂದ ಈ ಸಮಾಜಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೇಲಿನ ಗೌರವ ಕಡಿಮೆಯಾಗುತ್ತದೆ’ ಎಂದು ಶನಿವಾರ ಮಾಧ್ಯಮಗೋಷ್ಠಿಯಲ್ಲಿ ಎಚ್ಚರಿಸಿದರು.

‘ಮುಖ್ಯಮಂತ್ರಿಗೆ ತಮ್ಮ ಸಂಪುಟದ ಸಹೋದ್ಯೋಗಿಗಳ ಮೇಲೆ ಹಿಡಿತವಿದೆ ಎಂಬ ನಂಬಿಕೆ ಜನರಲ್ಲಿದೆ. ಇದೇ 14ರಂದು ನಡೆಯಲಿರುವ  ಸಂಪುಟ ಸಭೆಯಲ್ಲಿ ಸರ್ಕಾರ ಸಕಾರಾತ್ಮಕ ನಿರ್ಧಾರ ಕೈಗೊಳ್ಳುವ ವಿಶ್ವಾಸವಿದೆ’ ಎಂದೂ ಅವರು ತಿಳಿಸಿದರು.

ADVERTISEMENT

ಪ್ರಾತಿನಿಧಿಕವಲ್ಲ:
ಅಖಿಲ ಭಾರತ ವೀರಶೈವ ಮಹಾಸಭಾ ವೀರಶೈವರ ಹಿತಾಸಕ್ತಿ ಕಾಪಾಡುವ ಸಂಸ್ಥೆಯೇ ಹೊರತು ಅಖಂಡ ಲಿಂಗಾಯತರ ಪ್ರಾತಿನಿಧಿಕ ಸಂಘಟನೆಯಲ್ಲ. ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಭಿಪ್ರಾಯ ಇಡೀ ಸಮಾಜದ ಅಭಿಪ್ರಾಯವೇನಲ್ಲ ಎಂದರು.

‘ನಮ್ಮನ್ನು ರಾಜಕೀಯ ದಾಳವಾಗಿ ಮಾಡಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ. ಧರ್ಮದ ವಿಷಯದಲ್ಲಿ ಬಿ.ಎಸ್. ಯಡಿಯೂರಪ್ಪ ದೊಡ್ಡ ತಪ್ಪು ಮಾಡಿದರು. ಇದರಲ್ಲಿ ರಾಜಕೀಯ ಲಾಭ ಹುಡುಕುವುದು ಸಣ್ಣತನ’ ಎಂದು ಅಭಿಪ್ರಾಯಪಟ್ಟರು.

‘ಸ್ವತಂತ್ರ ಧರ್ಮದ ಮಾನ್ಯತೆ ದೊರೆತರೆ ವಿರಶೈವರಿಗೆ ಯಾವುದೇ ಧಕ್ಕೆ ಆಗುವುದಿಲ್ಲ. ರಂಭಾಪುರಿ ಶ್ರೀಗಳು, ಈಶ್ವರ ಖಂಡ್ರೆ ಅವರ ಶಾಲಾ ದಾಖಲಾತಿಗಳಲ್ಲಿ ಲಿಂಗಾಯತ ಎಂದೇ ಇದೆ. ಬಸವಣ್ಣನೇ ಧರ್ಮಗುರು, ವಚನಗಳೇ ಧರ್ಮ ಗ್ರಂಥ ಎಂಬುದನ್ನು ಒಪ್ಪಿಕೊಂಡು ಅವರು ನಮ್ಮ ಜೊತೆ ಬರುವುದಷ್ಟೇ ಬಾಕಿ ಇದೆ’ ಎಂದು ಹೇಳಿದರು.

ತಪ್ಪು ಕಲ್ಪನೆ:
‘ಅಲ್ಪಸಂಖ್ಯಾತರ ಹಕ್ಕನ್ನು ಲಿಂಗಾಯತರು ಕಸಿದುಕೊಳ್ಳಲು ಹೊರಟಿದ್ದಾರೆ ಎಂಬುದು ತಪ್ಪು ಕಲ್ಪನೆ. ಪ್ರತಿ ವರ್ಷ ಕೇಂದ್ರ ಸರ್ಕಾರ ನೀಡುತ್ತಿರುವ ₹ 1,600 ಕೋಟಿ ಖರ್ಚಾಗದೆ ವಾಪಸು ಹೋಗುತ್ತಿದೆ. ಧಾರ್ಮಿಕ ಅಲ್ಪಸಂಖ್ಯಾತರ ಸಂಖ್ಯೆ ಹೆಚ್ಚಾದರೆ, ಅನುದಾನದ ಪ್ರಮಾಣವೂ ಹೆಚ್ಚಾಗಲಿದೆ’ ಎಂದು ಅವರು ಸ್ಪಷ್ಟಪಡಿಸಿದರು.

14ರಂದು ಸಭೆ: 
ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮ ಕುರಿತು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವ ಸಂಬಂಧ ಇದೇ14ರಂದು ಸಂಪುಟ ಸಭೆಯಲ್ಲಿ ಚರ್ಚಿಸಿ, ಒಮ್ಮತದ ನಿರ್ಣಯಕ್ಕೆ ಬರಲಾಗುವುದು ಎಂದು ಕಾನೂನು ಸಚಿವ ಬಿ.ಟಿ ಜಯಚಂದ್ರ ಹೇಳಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.