ADVERTISEMENT

ಲಿಂಗಾಯತ ಧರ್ಮ ಸೇರ್ಪಡೆಗೆ ಗಾಣಿಗರ ವಿರೋಧ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 9:15 IST
Last Updated 9 ಏಪ್ರಿಲ್ 2018, 9:15 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಾಗಲಕೋಟೆ: ಗಾಣಿಗ ಸಮುದಾಯವನ್ನು ಲಿಂಗಾಯತ ಧರ್ಮಕ್ಕೆ ಸೇರ್ಪಡೆ ಮಾಡುವುದಕ್ಕೆ ಅಖಿಲ ಕರ್ನಾಟಕ ರಾಜ್ಯ ಯುವ ಗಾಣಿಗ ಕ್ಷೇಮಾಭಿವೃದ್ಧಿ ಸಂಘದ ವಿರೋಧವಿದೆ ಎಂದು ಮುಖಂಡ ಹಾಗೂ ಮಾಹಿತಿ ಹಕ್ಕು ಆಯೋಗದ ನಿವೃತ್ತ ಆಯುಕ್ತ ಡಾ.ಶೇಖರ ಸಜ್ಜನ್ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾವು ಹಿಂದೂ ಗಾಣಿಗರಾಗಿದ್ದು, ಆಚರಣೆಯಲ್ಲಿ ಮಾತ್ರ ಲಿಂಗಾಯತರಾಗಿದ್ದೇವೆ. ಯಾವುದೇ ಕಾರಣಕ್ಕೂ ನಾವು ಲಿಂಗಾಯತ ಗಾಣಿಗರಲ್ಲ. ವೀರಶೈವ ಮತ್ತು ಲಿಂಗಾಯತ ಧರ್ಮದ ಹೋರಾಟಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ’ ಎಂದು ಸ್ಪಷ್ಟಪಡಿಸಿದರು.

ಸಮುದಾಯದ ಪ್ರಮುಖರ ಬಳಿ ಮಾಹಿತಿ ಹಾಗೂ ಅನುಮತಿ ಪಡೆಯದೇ ಗಾಣಿಗರು ಹಿಂದೂಗಳಲ್ಲ ಅವರು ಲಿಂಗಾಯತರು ಎಂದು ಅಫಿಡವಿಟ್ ಸಲ್ಲಿಸಿರುವುದು ಕಾನೂನು ಬಾಹಿರವಾಗಿದೆ. ಈ ಬಗ್ಗೆ ಅಡ್ವೋಕೇಟ್ ಜನರಲ್ ಅವರಿಗೆ ನೋಟಿಸ್ ನೀಡಲಾಗುವುದು ಎಂದರು.

ADVERTISEMENT

ಹಾವನೂರು ಆಯೋಗದ ವರದಿಯ ಶಿಫಾರಸಿನಂತೆ ಸಮುದಾಯ 2ಎ ಮತ್ತು ಅ–ವರ್ಗದಲ್ಲಿ ಗುರುತಿಸಿಕೊಂಡಿದೆ. ಇದರಲ್ಲಿ ಮೀಸಲಾತಿ ಕಲ್ಪಿಸಲಾಗಿದೆ. ಹೀಗಾಗಿ, ಅದರಲ್ಲಿಯೇ ಮುಂದುವರೆಯುತ್ತೇವೆ. ಲಿಂಗಾಯತ ಧರ್ಮಕ್ಕೆ ಹೋಗುವುದರಿಂದ ಮೀಸಲಾತಿಯಿಂದ ವಂಚಿತರಾಗಲಿದ್ದೇವೆ ಎಂದರು.

ಈಗ ಲಿಂಗಾಯತರಿಗೆ (ಬಸವ ತತ್ವದಲ್ಲಿ ನಂಬಿಕೆ ಹೊಂದಿದವರು) ಅಲ್ಪಸಂಖ್ಯಾತ ಸ್ಥಾನಮಾನ ನೀಡಲು ರಾಜ್ಯ ಸರ್ಕಾರ ಕೇಂದ್ರಕ್ಕೆ ಶಿಫಾರಸು ಮಾಡಿದೆ. ಇದಕ್ಕೆ ನಮ್ಮ ವಿರೋಧವಿದ್ದು, ಈ ಪಟ್ಟಿಯಿಂದ ಲಿಂಗಾಯತ ಸಜ್ಜನ, ಸಜ್ಜನ ಗಾಣಿಗೇರ ಹಾಗೂ ಲಿಂಗಾಯತ ಕರಿಗಾಣಿಗ ಈ ಮೂರು ಉಪಪಂಗಡಗಳನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಸಂಘದ ವತಿಯಿಂದ ಈಗಾಗಲೇ ಕೋರ್ಟ್‌ನಲ್ಲಿ ದಾವೆ ಸಂಖ್ಯೆ 557/18ರ ಅಡಿಯಲ್ಲಿ ಏ.2ರಂದು ಮನವಿ ಸಲ್ಲಿಸಿ ತಕರಾರು ವ್ಯಕ್ತಪಡಿಸಲಾಗಿದೆ. ಸರ್ಕಾರಿ ವಕೀಲರು ಸಲ್ಲಿಸಿದ ಅಫಿಡವಿಟ್‌ನಲ್ಲಿ 94 ಒಳಪಂಗಡಗಳು ಹಿಂದೂಗಳಲ್ಲ ಎಂದು ಹೇಳಿರುವುದನ್ನು ಒಪ್ಪಲು ಸಾಧ್ಯವಿಲ್ಲ. ನಾವು ಎಂದಿಗೂ ಕೂಡ ಹಿಂದೂ ಗಾಣಿಗರಾಗಿದ್ದು, ಹಿಂದುಳಿದ ವರ್ಗಕ್ಕೆ ಸೇರಿದವರೆಂದು ನ್ಯಾಯಾಲಯಕ್ಕೆ ತಿಳಿಸಲಾಗಿದೆ ಎಂದರು.

ರಾಜ್ಯ ಸರ್ಕಾರಿ ವಕೀಲರು ಮತ್ತೊಂದು ಅಫಿಡವಿಟ್ ಸಲ್ಲಿಸಿ, ಸಮುದಾಯವನ್ನು ಲಿಂಗಾಯತ ಧರ್ಮ ಸೇರ್ಪಡೆ ಪಟ್ಟಿಯಿಂದ ಕೈಬಿಡಬೇಕು ಎಂದು ಮನವಿ ಮಾಡಿದ ಸಜ್ಜನ್, ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಮನವಿ ಸಲ್ಲಿಸಲಾಗಿದೆ. ಗಾಣಿಗ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು ಎಂದು ಒತ್ತಾಯಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ನಾಗರಾಜ ಸಜ್ಜನ್, ಬಾಬಣ್ಣ ನಿಡಗುಂದಿ, ಭರಮಪ್ಪ ನಾಯಕ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.