ADVERTISEMENT

ಲಿಂಗಾಯತ ಪ್ರತ್ಯೇಕ ಧರ್ಮ

ಸರ್ಕಾರಕ್ಕೆ ನಿವೃತ್ತ ನ್ಯಾಯಮೂರ್ತಿ ನಾಗಮೋಹನ್‌ ದಾಸ್‌ ಸಮಿತಿ ಶಿಫಾರಸು

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2018, 19:37 IST
Last Updated 2 ಮಾರ್ಚ್ 2018, 19:37 IST
ಲಿಂಗಾಯತ ಪ್ರತ್ಯೇಕ ಧರ್ಮ
ಲಿಂಗಾಯತ ಪ್ರತ್ಯೇಕ ಧರ್ಮ   

ಬೆಂಗಳೂರು: ಲಿಂಗಾಯತಕ್ಕೆ ಪ್ರತ್ಯೇಕ ಧರ್ಮ ಸ್ಥಾನಮಾನ ನೀಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ನಿವೃತ್ತ ನ್ಯಾಯಮೂರ್ತಿ ಎಚ್.ಎನ್. ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಶುಕ್ರವಾರ ಸಂಜೆ ಭೇಟಿಯಾದ ನಾಗಮೋಹನದಾಸ್‌ ನೇತೃತ್ವದ ತಜ್ಞರ ಸಮಿತಿ 150 ಪುಟಗಳ ವರದಿ ಹಾಗೂ ಐತಿಹಾಸಿಕ ದಾಖಲೆಗಳನ್ನು ಸಲ್ಲಿಸಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಕಾಯಕ ಜೀವಿಗಳ ಚಳವಳಿಯ ನೇತಾರ ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮ ಹಿಂದೂ ಧರ್ಮಕ್ಕಿಂತ ವಿಭಿನ್ನ ಸಂಸ್ಕೃತಿ, ಪರಂಪರೆ ಹಾಗೂ ಆಚರಣೆಗಳನ್ನು ಹೊಂದಿದೆ. ಜೈನ, ಬೌದ್ಧ, ಮುಸ್ಲಿಂ, ಸಿಖ್‌ ಧರ್ಮಗಳಂತೆ ಪ್ರತ್ಯೇಕ ಧರ್ಮವಾಗುವ ಎಲ್ಲ ಅರ್ಹತೆಗಳೂ ಲಿಂಗಾಯತ ಪರಂಪರೆಗೆ ಇದೆ ಎಂಬುದಾಗಿ ವರದಿ ಪ್ರತಿಪಾದಿಸಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

ವೀರಶೈವ ಪರಂಪರೆಯಡಿ ಗುರುತಿಸಿಕೊಂಡಿರುವ ಸಮುದಾಯದವರು ಈ ಧರ್ಮದ ಪರಿಧಿಯೊಳಗೆ ಸೇರಿಕೊಳ್ಳಬಹುದು. ಅದಕ್ಕೆ ಯಾವುದೇ ಅಭ್ಯಂತರ ಇರಬಾರದು.
ಅವರಿಗೆ ಮುಕ್ತ ಅವಕಾಶ ನೀಡಬಹುದು ಎಂದು ಶಿಫಾರಸು ಮಾಡಲಾಗಿದೆ.

‘ವೀರಶೈವ–ಲಿಂಗಾಯತ ಧರ್ಮ’ಕ್ಕೆ ಮಾನ್ಯತೆ ನೀಡಬೇಕು ಎಂದು ಅಖಿಲ ಭಾರತ ವೀರಶೈವಮಹಾಸಭಾ ಒತ್ತಾಯಿಸಿತ್ತು. ಆದರೆ, ಎಸ್‌.ಎಂ. ಜಾಮದಾರ ನೇತೃತ್ವದ ಜಾಗತಿಕ ಲಿಂಗಾಯತ ಮಹಾಸಭಾ, ಮಾತೆ ಮಹಾದೇವಿ ನೇತೃತ್ವದ ರಾಷ್ಟ್ರೀಯ ಬಸವದಳ, ಸಚಿವ ವಿನಯ ಕುಲಕರ್ಣಿ ನೇತೃತ್ವದ ರಾಷ್ಟ್ರೀಯ ಬಸವ ಸೇನೆ ಮತ್ತಿತರ ಸಂಘಟನೆಗಳು ವೀರಶೈವರನ್ನು ಹೊರಗಿಟ್ಟು ಲಿಂಗಾಯತಕ್ಕೆ ಸೀಮಿತಗೊಳಿಸಿ ಸ್ವತಂತ್ರ ಧರ್ಮಕ್ಕೆ ಮಾನ್ಯತೆ ನೀಡಲು ಶಿಫಾರಸು ಮಾಡಬೇಕು ಎಂದು ಮನವಿ ಮಾಡಿದ್ದವು.

ಸಿದ್ದರಾಮಯ್ಯ ಸರ್ಕಾರದ ಸಚಿವರಾದ ಎಂ.ಬಿ. ಪಾಟೀಲ, ಬಸವರಾಜ ರಾಯರಡ್ಡಿ, ಶರಣ ಪ್ರಕಾಶ ಪಾಟೀಲ, ವಿನಯ ಕುಲಕರ್ಣಿ ಅವರು ಲಿಂಗಾಯತ ಧರ್ಮದ ಪರ ನಿಂತಿದ್ದರು. ಆದರೆ, ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷ ಶ್ಯಾಮನೂರು ಶಿವಶಂಕರಪ್ಪ ಹಾಗೂ ಪೌರಾಡಳಿತ ಸಚಿವ ಈಶ್ವರ ಖಂಡ್ರೆ, ವೀರಶೈವ–ಲಿಂಗಾಯತ ಧರ್ಮಕ್ಕೆ ಮಾನ್ಯತೆ ನೀಡಬೇಕು ಎಂದು ಆಗ್ರಹಿಸಿದ್ದರು. ‌

ಬಿಜೆಪಿ ನಾಯಕರು ಸಿದ್ಧಗಂಗಾ ಶ್ರೀ ಹಾಗೂ ವೀರಶೈವ ಮಹಾಸಭಾದ ನಿಲುವಿಗೆ ಬದ್ಧ ಎಂದು ಘೋಷಿಸಿದ್ದರು. ಈ ವಿಷಯ ರಾಜಕೀಯ ಕಲಹಕ್ಕೂ ಕಾರಣವಾಗಿತ್ತು.

ಎರಡೇ ತಿಂಗಳಲ್ಲಿ ತಜ್ಞರ ವರದಿ

ವೀರಶೈವ–ಲಿಂಗಾಯತ ಧರ್ಮ ಜಿಜ್ಞಾಸೆ ಹಾಗೂ ಬೇಡಿಕೆಯನ್ನು ಪರಿಶೀಲಿಸಲು 2017ರ ಡಿಸೆಂಬರ್ 22ರಂದು ತಜ್ಞರ ಸಮಿತಿ ರಚಿಸಿ ಸರ್ಕಾರ ಆದೇಶ ಹೊರಡಿಸಿತ್ತು.

ಸಮಿತಿಯಲ್ಲಿ ಮುಜಾಫ್ಪರ್ ಅಸ್ಸಾದಿ, ಪುರುಷೋತ್ತಮ ಬಿಳಿಮಲೆ, ಸಿ.ಎಸ್. ದ್ವಾರಕನಾಥ್, ರಾಮಕೃಷ್ಣ ಮರಾಠೆ, ಎಸ್.ಜಿ. ಸಿದ್ದರಾಮಯ್ಯ, ಹನುಮಾಕ್ಷಿ ಗೋಗಿ, ಸರಜೂ ಕಾಟ್ಕರ್ ಇದ್ದರು. ಸಮಿತಿಯು ಧಾರ್ಮಿಕ ಮುಖಂಡರು ಹಾಗೂ ವಿವಿಧ ಸಂಘಟನೆಗಳಿಂದ ಅಹವಾಲು ಹಾಗೂ ದಾಖಲೆಗಳನ್ನು ಸ್ವೀಕರಿಸಿತ್ತು. ತಜ್ಞರ ಸಮಿತಿ ರಚನೆ ಪ್ರಶ್ನಿಸಿ ಕೆಲವು ಸಂಘಟನೆಗಳು ಹೈಕೋರ್ಟ್ ಮೊರೆ ಹೋಗಿದ್ದವು. ಈ ಬಗ್ಗೆ ವಿಚಾರಣೆ ನಡೆಸಿರುವ ನ್ಯಾಯಪೀಠ, ವರದಿಯ ಶಿಫಾರಸು ಹಾಗೂ ಸರ್ಕಾರದ ನಿರ್ಣಯ ತಾನು ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರಬೇಕು ಎಂದು  ಸೂಚಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.