ADVERTISEMENT

ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಎಸ್‌.ಆರ್.ಹಿರೇಮಠ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 9:29 IST
Last Updated 5 ಅಕ್ಟೋಬರ್ 2017, 9:29 IST
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಎಸ್‌.ಆರ್.ಹಿರೇಮಠ
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ ಎಸ್‌.ಆರ್.ಹಿರೇಮಠ   

ಧಾರವಾಡ: ಜನಸಂಗ್ರಾಮ ಪರಿಷತ್‌ ಸೇರಿದಂತೆ ವಿವಿಧ ಸಂಘಟನೆ ಹಾಗೂ ಪಕ್ಷಗಳ ಮಹಾಮೈತ್ರಿಯ ನೇತೃತ್ವದಲ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದು, ಲೋಕಸಭಾ ಚುನಾವಣೆಯಲ್ಲಿ ಸ್ವತಃ ನಾನು ಕಣಕ್ಕಿಳಿಯುವ ಕುರಿತು ಗಂಭೀರ ಚಿಂತನೆ ನಡೆಸಿದ್ದೇನೆ’ ಎಂದು ಜನಸಂಗ್ರಾಮ ಪರಿಷತ್ತಿನ ಮುಖ್ಯಸ್ಥ ಎಸ್‌.ಆರ್‌.ಹಿರೇಮಠ ತಿಳಿಸಿದರು.

2018ರಲ್ಲಿ ಜರುಗುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವುದು ಸಾಧ್ಯವಾಗದಿರಬಹುದು. ಆದರೆ ನಮ್ಮಂಥ ಸಮಾನ ಮನಸ್ಕ ಹಾಗೂ ಸಮಾನ ವಿಚಾರಧಾರೆ ಹೊಂದಿರುವ ಸಂಘಟನೆಗಳ ಜತೆಗೂಡಿ ಬರುವ ಚುನಾವಣೆಯಿಂದಲೇ ಸ್ಪರ್ಧೆ ಶತಸಿದ್ಧ. ಆದರೆ ನಾನು ಮಾತ್ರ ಲೋಕಸಭಾ ಚುನಾವಣೆಗೆ ಸ್ಪರ್ಧಿಸಬೇಕೆಂದಿದ್ದೇನೆ’ ಎಂದು ಗುರುವಾರ ಸುದ್ದಿಗಾರರಿಗೆ ತಿಳಿಸಿದರು.

‘ಗಣಿ ಹಗರಣವನ್ನು ತಾತ್ವಿಕ ಅಂತ್ಯ ಕಾಣಲು ಹೇಗೆ ಕ್ರಮಬದ್ಧ ಹೋರಾಟ ನಡೆಸಿದೆವೋ, ಅದೇ ಮಾದರಿಯಲ್ಲಿ ಚುನಾವಣಾ ತಂತ್ರಗಳು ಇರಲಿವೆ. ಇಲ್ಲಿ ಗೆಲುವು ಮುಖ್ಯವಲ್ಲ. ಆದರೆ ಜನರಲ್ಲಿ ಜಾಗೃತಿ ಮೂಡಿಸುವುದು ನಮ್ಮ ಉದ್ದೇಶ. ಒಂದೆರೆಡು ಹೋರಾಟಗಳಲ್ಲಿ ಜಯ ಸಿಗದಿರುಬಹುದು. ಆದರೆ ನಮ್ಮ ಹೋರಾಟ ಮುಂದಿನ ಹಲವು ಶತಮಾನಗಳವರೆಗೆ ನಡೆಯಬೇಕು. ಈ ನಿಟ್ಟಿನಲ್ಲಿ ಇಂದಿನಿಂದಲೇ ನಾಂದಿಹಾಡಲಾಗುವುದು’ ಎಂದರು.

ADVERTISEMENT

ನಮ್ಮೊಂದಿಗೆ ಸ್ವರಾಜ್ ಇಂಡಿಯಾ, ಕರ್ನಾಟಕ ಶಕ್ತಿ ಸಂಘಟನೆ, ಆಮ್ ಆದ್ಮಿ ಪಾರ್ಟಿ, ಸಿಪಿಐ, ಸಿಪಿಎಂ ಪಕ್ಷಗಳು ಸೇರಿದಂತೆ ಹಲವು ಪಕ್ಷಗಳು ಹಾಗೂ ಸಂಘಟನೆಗಳು ಒಂದಾಗಿ ಬರಲು ಮುಂದಾಗಿದ್ದಾರೆ’ ಎಂದು ತಿಳಿಸಿದರು.

‘ಮುಂಬರುವ ಚುನಾವಣೆಗೆ ಸಂಬಂಧಿಸಿದಂತೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜನ ಸಂಗ್ರಾಮ ಪರಿಷತ್ತು ಮತದಾರರ ಜಾಗೃತಿ ಸಮಾವೇಶವನ್ನು ನ. 1ರಿಂದ ರಾಜ್ಯದಾದ್ಯಂತ ನಡೆಸಲಿದೆ. ಸಂವಿಧಾನದ ಮಹತ್ವಗಳಾದ ಸ್ವಾತಂತ್ರ್ಯ, ನ್ಯಾಯ, ಸಮಾನತೆ ಹಾಗೂ ಭ್ರಾತೃತ್ವವನ್ನು ಈ ಜಾಥಾ ಮೂಲಕ ಜನರಿಗೆ ತಿಳಿಸಲಾಗುವುದು’ ಎಂದು ತಿಳಿಸಿದರು.

ನ್ಯಾಯಮೂರ್ತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಜಯಂತ ಪಟೇಲ್‌ ಅವರನ್ನು ಬೆಂಬಲಿಸಿ ಹಾಗೂ ಕರ್ನಾಟಕ ಹೈಕೋರ್ಟ್‌ನ ಮುಖ್ಯನ್ಯಾಮೂರ್ತಿ ಕಲಾಪ ಭಹಿಷ್ಕರಿಸಿ ಪ್ರತಿಭಟನೆಗೆ ಮುಂದಾಗಿರುವ ಕರ್ನಾಟಕ ರಾಜ್ಯ ವಕೀಲರ ಸಂಘದ ಹೋರಾಟಕ್ಕೆ ಜನಸಂಗ್ರಾಮ ಪರಿಷತ್‌ ಬೆಂಬಲ ಸೂಚಿಸಲಿದೆ’ ಎಂದು ಎಸ್‌.ಆರ್‌.ಹಿರೇಮಠ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.