ADVERTISEMENT

ಲೋಕಾಯುಕ್ತಕ್ಕೆ ದೂರು: ಈಶ್ವರಪ್ಪ ಸ್ವಾಗತ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2012, 19:59 IST
Last Updated 14 ಡಿಸೆಂಬರ್ 2012, 19:59 IST

ಶಿವಮೊಗ್ಗ: `ಅಕ್ರಮ ಆಸ್ತಿ ಗಳಿಸಿರುವುದಾಗಿ ಆರೋಪಿಸಿ ನನ್ನ ವಿರುದ್ಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿರುವುದನ್ನು ಸ್ವಾಗತಿಸುತ್ತೇನೆ' ಎಂದು ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಶುಕ್ರವಾರ ಇಲ್ಲಿ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಮೂರು ವರ್ಷಗಳ ಹಿಂದೆಯೇ ಈ ಬೆಳವಣಿಗೆ ನಿರೀಕ್ಷಿಸಲಾಗಿತ್ತು. ಆಗಲೇ ದಾಖಲೆಗಳನ್ನು ಸಂಗ್ರಹಿಸುವ ಪ್ರಯತ್ನ ನಡೆಯುತ್ತಿದ್ದುದು ನನ್ನ ಗಮನಕ್ಕೆ ಬಂದಿತ್ತು. ಇದೀಗ ನಿರೀಕ್ಷೆಯಂತೆ ಪ್ರಕರಣ ದಾಖಲಿಸಲಾಗಿದೆ ಅಷ್ಟೇ' ಎಂದರು.

`ಈ ಆರೋಪಗಳು ಸುಳ್ಳು ಅಥವಾ ನಿಜ ಎನ್ನುವುದನ್ನು ನ್ಯಾಯಾಲಯ ತೀರ್ಮಾನ ಮಾಡಲಿದೆ. ಈ ಕುರಿತು ಈಗಲೇ ನಾನು ಏನೂ ಹೇಳುವುದಿಲ್ಲ' ಎಂದು ಪ್ರತಿಕ್ರಿಯಿಸಿದರು. ಈ ಹಿನ್ನೆಲೆಯಲ್ಲಿ ತಮ್ಮ ರಾಜೀನಾಮೆಗೆ ಒತ್ತಾಯಿಸುವ ಹಕ್ಕು `ಬಿಜೆಪಿ ಬಿಟ್ಟು ಕೆಜೆಪಿ ಸೇರಿದವರಿಗೆ' ಇಲ್ಲ ಎಂದು ಖಾರವಾಗಿ ನುಡಿದರು.

ಹೈಕಮಾಂಡ್‌ಗೆ ವರದಿ: ಕೆಜೆಪಿ ಸಮಾವೇಶದಲ್ಲಿ ಭಾಗಿಯಾದ ಬಿಜೆಪಿ ಶಾಸಕರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳುವ ಕುರಿತು ಹೈಕಮಾಂಡ್‌ಗೆ ವರದಿ ಸಲ್ಲಿಸಲಾಗಿದೆ. ಹೈಕಮಾಂಡ್ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಲ್ಲದೇ, ಬೈಂದೂರು ಶಾಸಕ ಕೆ. ಲಕ್ಷ್ಮೀನಾರಾಯಣ, ಚನ್ನಗಿರಿ ಶಾಸಕ ವಿರೂಪಾಕ್ಷಪ್ಪ, ಜಗಳೂರು ಶಾಸಕ ಎಸ್.ವಿ. ರಾಮಚಂದ್ರ ಸೇರಿದಂತೆ ಅನೇಕರು ತಾವು ಬಿಜೆಪಿ ತೊರೆಯುವುದಿಲ್ಲ. ಒತ್ತಡಕ್ಕೆ ಮಣಿದು ಕೆಜೆಪಿ ಸಮಾವೇಶದಲ್ಲಿ ಪಾಲ್ಗೊಂಡಿರುವುದಾಗಿ ತಿಳಿಸಿದ್ದಾರೆ. ಇವೆಲ್ಲವನ್ನೂ ಹೈಕಮಾಂಡ್‌ಗೆ ಮನವರಿಕೆ ಮಾಡಿಕೊಡಲಾಗಿದೆ ಎಂದರು.

ಜೆಪಿ ಜತೆ ಗುರುತಿಸಿಕೊಳ್ಳುವ ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ ಸದಸ್ಯರ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಜಿಲ್ಲಾ ಸಮಿತಿಯ ವರದಿ ಪಡೆದು, ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.