ADVERTISEMENT

ಲೋಕಾಯುಕ್ತರ ಹುಡುಕಾಟ: ಹೊರ ರಾಜ್ಯದವರತ್ತ ಸರ್ಕಾರದ ಚಿತ್ತ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಬೆಂಗಳೂರು: ಎರಡನೇ ಉಪ ಲೋಕಾಯುಕ್ತರ ನೇಮಕಾತಿ ಕುರಿತ ವಿವಾದ ಕಗ್ಗಂಟಾಗಿರುವ ಬೆನ್ನಲ್ಲೇ, ಲೋಕಾಯುಕ್ತ ಹುದ್ದೆ ಭರ್ತಿಯ ಕಸರತ್ತಿಗೆ ಕೈಹಾಕಲು ಸರ್ಕಾರ ಮುಂದಾಗಿದೆ. ಲೋಕಾಯುಕ್ತರಾಗುವವರು ಕನ್ನಡಿಗರಲ್ಲದಿದ್ದರೂ, ಕಳಂಕರಹಿತ ವ್ಯಕ್ತಿಯಾಗಿರಬೇಕು ಎಂಬ ನಿಲುವನ್ನು ಈ ಪ್ರಕ್ರಿಯೆಯಲ್ಲಿ ಅನುಸರಿಸುವ ಸಾಧ್ಯತೆ ಕಾಣುತ್ತಿದೆ.

ಈ ಹಿಂದೆ ಲೋಕಾಯುಕ್ತರಾಗಿದ್ದ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಮತ್ತು ಉಪ ಲೋಕಾಯುಕ್ತರಾಗಿದ್ದ ನ್ಯಾ.ಆರ್.ಗುರುರಾಜನ್ ಅವರು ಅಧಿಕಾರ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ರಾಜೀನಾಮೆ ನೀಡಿದ್ದರು. ನಂತರ ನ್ಯಾ.ಎಸ್.ಆರ್.ಬನ್ನೂರಮಠ ಅವರ ಹೆಸರನ್ನು ಲೋಕಾಯುಕ್ತ ಹುದ್ದೆಗೆ ರಾಜ್ಯಪಾಲರು ಒಪ್ಪಿಕೊಳ್ಳದೇ ಇದ್ದುದರಿಂದ ಲೋಕಾಯುಕ್ತ ಸಂಸ್ಥೆ ಚರ್ಚೆಯ ಕೇಂದ್ರ ಬಿಂದುವಾಗಿತ್ತು.

ಈಗ ನ್ಯಾಯಮೂರ್ತಿ ಚಂದ್ರಶೇಖರಯ್ಯ ಅವರನ್ನು ಉಪ ಲೋಕಾಯುಕ್ತರನ್ನಾಗಿ ನೇಮಕ ಮಾಡಿರುವ ಕ್ರಮಕ್ಕೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೇ ವಿರೋಧ ವ್ಯಕ್ತಪಡಿಸಿದ್ದಾರೆ. ಮತ್ತೆ ಇಂತಹ ವಿವಾದ ಸೃಷ್ಟಿಯಾಗುವುದನ್ನು ತಪ್ಪಿಸಲು, ಲೋಕಾಯುಕ್ತರ ಹುದ್ದೆಗೆ ವಿವಾದರಹಿತ ವ್ಯಕ್ತಿತ್ವವುಳ್ಳ ನ್ಯಾಯಮೂರ್ತಿಯೊಬ್ಬರ ಹೆಸರನ್ನು ಆಯ್ಕೆ ಮಾಡಬೇಕೆಂಬ ಇಂಗಿತ ಸರ್ಕಾರದ ಒಳಗಿನಿಂದಲೇ ವ್ಯಕ್ತವಾಗಿದೆ.
ರಾಜ್ಯದವರೇ ಆಗಿದ್ದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಗಳಾಗಿ ಸೇವೆ ಸಲ್ಲಿಸಿದವರು ಮತ್ತು ವಿವಿಧ ರಾಜ್ಯಗಳ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವವರ ಕುರಿತು ಸರ್ಕಾರ ಪರಿಶೀಲನೆ ನಡೆಸುತ್ತಿದೆ. ಆದರೆ, ಹಲವರ ಹೆಸರುಗಳು ಪ್ರಸ್ತಾಪವಾದಾಗಲೆಲ್ಲ ವಿವಾದಗಳೂ ತಳಕು ಹಾಕಿಕೊಳ್ಳುತ್ತಿರುವುದು ಸರ್ಕಾರಕ್ಕೆ ಚಿಂತೆ ಉಂಟುಮಾಡಿದೆ.

ಮತ್ತೊಮ್ಮೆ ಈ ಹುದ್ದೆ ವಿವಾದಕ್ಕೆ ಸಿಲುಕುವುದನ್ನು ತಪ್ಪಿಸಲು ಹೊರರಾಜ್ಯಗಳವರಾಗಿದ್ದು, ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳು, ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳ ಹುದ್ದೆಯಲ್ಲಿ ಕಾರ್ಯನಿರ್ವಹಿಸಿರುವ ಕಳಂಕರಹಿತ ವ್ಯಕ್ತಿಗಳ ವಿವರವನ್ನು ಕಲೆಹಾಕಲಾಗುತ್ತಿದೆ. ಈ ಬಾರಿ ಹೊರರಾಜ್ಯದ ವ್ಯಕ್ತಿಗಳತ್ತ ಸರ್ಕಾರ ಹೆಚ್ಚು ಆಸಕ್ತಿ ತಳೆದಂತಿದೆ. ಕನ್ನಡಿಗರಲ್ಲದಿದ್ದರೂ, ಕಳಂಕರಹಿತರು ಲೋಕಾಯುಕ್ತರಾಗಬೇಕು ಎಂಬ ನಿಲುವನ್ನು ತಾಳಲು ಸರ್ಕಾರ ಮುಂದಾಗಿದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ಕಣದಲ್ಲಿ ಯಾರು ಯಾರು?
ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆ ಆರಂಭ ಕುರಿತ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ಈ ಹುದ್ದೆ ಅಲಂಕರಿಸುವ ಸಂಭಾವ್ಯರ ಹೆಸರುಗಳ ಪಟ್ಟಿಯೂ ಬಿಚ್ಚಿಕೊಳ್ಳತೊಡಗಿದೆ. ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಾದ ಬಿ.ಎನ್.ಶ್ರೀಕೃಷ್ಣ, ಸಿರಿಯಾಕ್ ಜೋಸೆಫ್, ರಾಜ್ಯ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎನ್.ಕೆ.ಸೋಧಿ, ಛತ್ತೀಸ್‌ಗಡ ಹೈಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಕೆ.ಎಚ್.ಎನ್.ಕುರಂಗ ಮೊದಲಾದವರ ಹೆಸರುಗಳು ಲೋಕಾಯುಕ್ತರ ಹುದ್ದೆಯ ನೇಮಕಾತಿಗೆ ಸಂಬಂಧಿಸಿದಂತೆ ಪರಿಶೀಲನೆಗೆ ಬರಲಿವೆ.

ರಾಜ್ಯದವರೇ ಆದ  ಬಿ.ಎನ್.ಶ್ರೀಕೃಷ್ಣ ಅವರನ್ನು ಲೋಕಾಯುಕ್ತರನ್ನಾಗಿ ನೇಮಕ ಮಾಡುವ ಬಗ್ಗೆ ಸರ್ಕಾರ ಯೋಚಿಸಿತ್ತು. ಈವರೆಗೆ ಯಾವುದೇ ವಿವಾದಗಳಲ್ಲಿ ಅವರ ಹೆಸರು ಕೇಳಿಬರದೇ ಇರುವುದು ಇದಕ್ಕೆ ಕಾರಣ. ಆದರೆ, ಲೋಕಾಯುಕ್ತ ಹುದ್ದೆಗೆ ಬರಲು ತಮಗೆ ಆಸಕ್ತಿ ಇಲ್ಲ ಎಂಬ ಸಂದೇಶವನ್ನು ಶ್ರೀಕೃಷ್ಣ ಅವರೇ ಸರ್ಕಾರಕ್ಕೆ ರವಾನಿಸಿದ್ದಾರೆ. ಆದರೂ, ಅವರ ಮನವೊಲಿಕೆಗೆ ಸರ್ಕಾರ ಪ್ರಯತ್ನಿಸಬಹುದು ಎಂದು ಮೂಲಗಳು ತಿಳಿಸಿವೆ.

ರಾಷ್ಟ್ರದ ಕಾನೂನು ಕ್ಷೇತ್ರದಲ್ಲಿ ಪ್ರಭಾವಿಗಳಾಗಿರುವ ಕೆಲ ಹಿರಿಯ ವಕೀಲರ ಮೂಲಕ ಸೋಧಿ ಅವರ ಮನವೊಲಿಸುವ ಬಗ್ಗೆಯೂ ಸರ್ಕಾರದಲ್ಲಿ ಚರ್ಚೆ ನಡೆದಿದೆ. ಎರಡನೇ ಉಪ ಲೋಕಾಯುಕ್ತರ ನೇಮಕಾತಿ ಪ್ರಕ್ರಿಯೆಯಲ್ಲಿ ಮುಜುಗರಕ್ಕೆ ಒಳಗಾಗಿರುವ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು, ಲೋಕಾಯುಕ್ತರ ನೇಮಕಾತಿ ಸಂಬಂಧ ಪ್ರಸ್ತಾವ ಸಿದ್ಧಪಡಿಸುವಾಗ ಯಾವುದೇ ರೀತಿಯ ಲೋಪವೂ ಆಗದಂತೆ ಎಚ್ಚರ ವಹಿಸಲು ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎನ್ನಲಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.