ADVERTISEMENT

ಲೋಕಾಯುಕ್ತ ಕಚೇರಿಗೆ ಚಾಕು ತಂದಿದ್ದ ಮಹಿಳೆ ಪೊಲೀಸ್‌ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 3 ಮೇ 2018, 19:30 IST
Last Updated 3 ಮೇ 2018, 19:30 IST
ಲೋಕಾಯುಕ್ತ ಕಚೇರಿಗೆ ಚಾಕು ತಂದಿದ್ದ ಮಹಿಳೆ ಪೊಲೀಸ್‌ ವಶಕ್ಕೆ
ಲೋಕಾಯುಕ್ತ ಕಚೇರಿಗೆ ಚಾಕು ತಂದಿದ್ದ ಮಹಿಳೆ ಪೊಲೀಸ್‌ ವಶಕ್ಕೆ   

ಬೆಂಗಳೂರು: ಚಾಕು ಬಚ್ಚಿಟ್ಟುಕೊಂಡು ಲೋಕಾಯುಕ್ತ ಕಚೇರಿಗೆ ಬಂದಿದ್ದ ಮಹಿಳೆಯನ್ನು ಪೊಲೀಸರು ಗುರುವಾರ ಮಧ್ಯಾಹ್ನ ವಶಕ್ಕೆ ಪಡೆದಿದ್ದಾರೆ.

ಮಾರ್ಚ್ 7ರಂದು ತೇಜಸ್‌ ಶರ್ಮ ಎಂಬಾತ ಲೋಕಾಯುಕ್ತ ಕಚೇರಿಗೆ ಏಕಾಏಕಿ ನುಗ್ಗಿ ವಿಶ್ವನಾಥ ಶೆಟ್ಟಿ ಅವರನ್ನು ಮೂರು ಸಲ ಚಾಕುವಿನಿಂದ ಇರಿದಿದ್ದ. ಇದರಿಂದ ಚೇತರಿಸಿಕೊಂಡ ವಿಶ್ವನಾಥ ಶೆಟ್ಟಿ ಕಳೆದ ವಾರವಷ್ಟೇ ಕಚೇರಿಗೆ ಮರಳಿದ್ದರು.

ಲೋಕಾಯುಕ್ತ ಕಚೇರಿ ಸ್ವಾಗತಕಾರರ ಮುಂದಿರುವ ಸಂದರ್ಶಕರ ಪುಸ್ತಕದಲ್ಲಿ ಮಹಿಳೆ ತನ್ನ ಹೆಸರನ್ನು ಸೋನಿಯಾ ರಾಣಿ,  ಎಂದು ಬರೆದು ಮೊಬೈಲ್‌ ಸಂಖ್ಯೆಯನ್ನು ಉಲ್ಲೇಖಿಸಿದ್ದಾರೆ. ದಾಖಲೆ ನಡುವೆ ಇಟ್ಟುಕೊಂಡು ಬಂದಿದ್ದ ಚಾಕುವನ್ನು ಲೋಹ ಶೋಧಕವು ಪತ್ತೆ ಮಾಡಿದ್ದು, ಕೂಡಲೇ ಮಹಿಳೆಯನ್ನು ವಿಧಾನಸೌಧ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ. ಪೊಲೀಸರ ಪ್ರಶ್ನೆಗಳಿಗೆ ಅಸಂಬದ್ಧವಾಗಿ ಉತ್ತರ ಕೊಡುತ್ತಿರುವ ಮಹಿಳೆ ಮಾನಸಿಕ ಅಸ್ವಸ್ಥೆ ಇರಬಹುದು ಎಂದು ಶಂಕಿಸಲಾಗಿದೆ. ‘ನಾನು ವಿಜಯನಗರದ ನಿವಾಸಿ, ರಾಜೀವ್‌ ಗಾಂಧಿ ನನ್ನ ಪತಿ’ ಎಂದೂ ಪೊಲೀಸರ ಬಳಿ ಹೇಳಿದ್ದಾಳೆ. ಈ ಹಿಂದೆ ಎರಡು ಸಲ  ಲೋಕಾಯುಕ್ತ ಕಚೇರಿಗೆ ಬಂದು ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಹೋಗಿದ್ದಾಳೆ ಎನ್ನಲಾಗಿದೆ.

ADVERTISEMENT

ಮಹಿಳೆ ಲೋಕಾಯುಕ್ತ ಕಚೇರಿಗೆ ಬಂದಾಗ ನ್ಯಾ. ಶೆಟ್ಟಿ ಕಚೇರಿಯಲ್ಲಿದ್ದರು. ಈಕೆಗೆ ಸಂಬಂಧಿಸಿದ ಪ್ರಕರಣಗಳೇನಾದರೂ ವಿಚಾರಣೆಗೆ ಬಾಕಿ ಇವೆಯೇ ಎಂದು ಪರಿಶೀಲಿಸಲಾಗುತ್ತಿದೆ. ಮಹಿಳೆಯ ವಿಚಾರಣೆ ಮುಗಿದ ಬಳಿಕ ಎಫ್‌ಐಆರ್‌ ದಾಖಲಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.