ADVERTISEMENT

ಲೋಕಾಯುಕ್ತ ಕಾನ್‌ಸ್ಟೆಬಲ್ ಮನೆ ಮೇಲೂ ದಾಳಿ

8 ಅಧಿಕಾರಿಗಳ ಅಕ್ರಮ ಆಸ್ತಿ ಪತ್ತೆ

​ಪ್ರಜಾವಾಣಿ ವಾರ್ತೆ
Published 19 ಡಿಸೆಂಬರ್ 2012, 19:59 IST
Last Updated 19 ಡಿಸೆಂಬರ್ 2012, 19:59 IST
ಲೋಕಾಯುಕ್ತ ದಾಳಿಗೆ ಒಳಗಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಾಂತ್ರಿಕ ನಿರ್ದೇಶಕ ಎಸ್.ಕೆ.ಪರಮೇಶ್ ಅವರ ಬೆಂಗಳೂರಿನ ಆರ್‌ಎಂವಿ ಬಡಾವಣೆ ನಿವಾಸದ ಎದುರು ಬುಧವಾರ ರಾತ್ರಿ ಪೊಲೀಸರು ಕಾವಲು ಕಾಯುತ್ತಿದ್ದ ದೃಶ್ಯ 	- ಪ್ರಜಾವಾಣಿ ಚಿತ್ರ
ಲೋಕಾಯುಕ್ತ ದಾಳಿಗೆ ಒಳಗಾಗಿರುವ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ತಾಂತ್ರಿಕ ನಿರ್ದೇಶಕ ಎಸ್.ಕೆ.ಪರಮೇಶ್ ಅವರ ಬೆಂಗಳೂರಿನ ಆರ್‌ಎಂವಿ ಬಡಾವಣೆ ನಿವಾಸದ ಎದುರು ಬುಧವಾರ ರಾತ್ರಿ ಪೊಲೀಸರು ಕಾವಲು ಕಾಯುತ್ತಿದ್ದ ದೃಶ್ಯ - ಪ್ರಜಾವಾಣಿ ಚಿತ್ರ   

ಬೆಂಗಳೂರು: ಲೋಕಾಯುಕ್ತ ಪೊಲೀಸರು ಬುಧವಾರ ತಮ್ಮದೇ ಸಂಸ್ಥೆಯ ಹೆಡ್ ಕಾನ್‌ಸ್ಟೆಬಲ್ ಸೇರಿದಂತೆ ಎಂಟು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ 7.5 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ ಅಕ್ರಮ ಆಸ್ತಿ ಪತ್ತೆ ಮಾಡಿದ್ದಾರೆ.

ಇವರುಗಳೆಂದರೆ, ಲೋಕಾಯುಕ್ತದ ಹೆಡ್ ಕಾನ್‌ಸ್ಟೆಬಲ್ ಚನ್ನಬಸವಯ್ಯ, ಕರ್ನಾಟಕ ಗೃಹ ಮಂಡಳಿಯ ಮುಖ್ಯ ಎಂಜಿನಿಯರ್ ಬಿ.ಗುರುಪ್ರಸಾದ್, ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ತಾಂತ್ರಿಕ ನಿರ್ದೇಶಕ ಎಸ್.ಕೆ.ಪರಮೇಶ್, ಪುರಾತತ್ವ ಇಲಾಖೆ (ಮೈಸೂರು) ನಿರ್ದೇಶಕ ಆರ್.ಗೋಪಾಲ್, ಚಿಕ್ಕಬಳ್ಳಾಪುರ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಎಂಜಿನಿಯರ್ ಎನ್.ನಾಗರಾಜು, ಕಡೂರು ತಾಲ್ಲೂಕು ಕಚೇರಿ ಶಿರಸ್ತೇದಾರ್ ವಿನ್ಸೆಂಟ್ ರೊಸಾರಿಯೊ, ತುಮಕೂರು ತಾಲ್ಲೂಕು ಕಚೇರಿ  ಆಹಾರ ಶಿರಸ್ತೇದಾರ್ ಟಿ.ಕೆ.ಲಕ್ಷ್ಮೀನಾರಾಯಣ ರೆಡ್ಡಿ ಮತ್ತು ಹಾಸನ ವ್ಯವಸಾಯ ಸೇವಾ ಸಹಕಾರ ಸಂಘದ ಕಾರ್ಯದರ್ಶಿ ಕೀರ್ತಿಕುಮಾರ್.


`ಎಂಟು ಆರೋಪಿಗಳ ವಿರುದ್ಧವೂ ಮಂಗಳವಾರವೇ ಮೊಕದ್ದಮೆ ದಾಖಲಿಸಲಾಗಿತ್ತು. ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ, ಮೈಸೂರು, ಕಡೂರು, ಹಾಸನ ಮತ್ತು ತುಮಕೂರಿನ 25 ಸ್ಥಳಗಳ ಮೇಲೆ ಬುಧವಾರ ಏಕಕಾಲಕ್ಕೆ ದಾಳಿ ನಡೆಸಲಾಯಿತು. ಪರಮೇಶ್ ಚೆನ್ನೈಗೆ ತೆರಳಿದ್ದು, ಅವರ ಮನೆ ಮತ್ತು ಕಚೇರಿ ಬಾಗಿಲನ್ನು ಮೊಹರು ಮಾಡಲಾಗಿದೆ. ಅವರು ನಗರಕ್ಕೆ ಮರಳಿದ ತಕ್ಷಣ ಶೋಧ ಆರಂಭವಾಗಲಿದೆ. ಉಳಿದೆಲ್ಲ ಆರೋಪಿಗಳ ಮನೆ, ಕಚೇರಿ ಮತ್ತು ಸಂಬಂಧಿಗಳ ಮನೆಗಳಲ್ಲಿ ಶೋಧ ನಡೆಸಲಾಗಿದೆ' ಎಂದು ಲೋಕಾಯುಕ್ತದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಎಚ್. ಎನ್.ಸತ್ಯನಾರಾಯಣ ರಾವ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಇದೇ ಮೊದಲ ಬಾರಿಗೆ ಲೋಕಾಯುಕ್ತದ ಸಿಬ್ಬಂದಿಯೊಬ್ಬರ ಮೇಲೆ ಲೋಕಾಯುಕ್ತ ಪೊಲೀಸ್ ದಾಳಿ ನಡೆದಿದೆ. ಚನ್ನಬಸವಯ್ಯ ಮೂಲತಃ ಸಶಸ್ತ್ರ ಪೊಲೀಸ್ ಪಡೆಯವರು. 2006ರಿಂದ ನಿಯೋಜನೆ ಮೇರೆಗೆ ಲೋಕಾಯುಕ್ತದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ನಿವೃತ್ತ ಲೋಕಾಯುಕ್ತ ಎನ್.ಸಂತೋಷ್ ಹೆಗ್ಡೆ ಅವರ ಅಂಗರಕ್ಷಕ ಪಡೆಯಲ್ಲಿ ಸೇವೆಯಲ್ಲಿದ್ದ ಚನ್ನಬಸವಯ್ಯ, ಲೋಕಾಯುಕ್ತರ ನಿವೃತ್ತಿಯ ನಂತರವೂ ಅದೇ ಹುದ್ದೆಯಲ್ಲಿ ಮುಂದುವರಿದಿದ್ದರು.

ದೂರು ಪರಿಶೀಲಿಸಿ ದಾಳಿ: `ಚನ್ನಬಸವಯ್ಯ ಆದಾಯಕ್ಕಿಂತಲೂ ಹೆಚ್ಚು ಆಸ್ತಿ ಹೊಂದಿದ್ದಾರೆ ಎಂಬ ಆರೋಪವುಳ್ಳ ದೂರು ಕೆಲವು ತಿಂಗಳ ಹಿಂದೆ ನಮಗೆ ಬಂದಿತ್ತು. ಗೋಪ್ಯವಾಗಿ ಪರಿಶೀಲನೆ ನಡೆಸಿದಾಗ ದೂರಿನಲ್ಲಿರುವ ಅಂಶಗಳು ಸತ್ಯ ಎಂಬುದು ತಿಳಿದಿತ್ತು. ನಂತರ ಅವರ ಆಸ್ತಿ ಕುರಿತು ಮತ್ತಷ್ಟು ಮಾಹಿತಿ ಸಂಗ್ರಹಿಸಲಾಯಿತು. ರಾಮೋಹಳ್ಳಿಯ ಅವರ ಮನೆ ಮೇಲೆ ದಾಳಿ ನಡೆಸಿ ತಪಾಸಣೆ ಮಾಡಿದಾಗ 55.25 ಲಕ್ಷ ರೂಪಾಯಿ ಮೊತ್ತದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂಬುದನ್ನು ಖಚಿತಪಡಿಸುವ ದಾಖಲೆಗಳು ಲಭ್ಯವಾಗಿವೆ' ಎಂದು ರಾವ್ ವಿವರ ನೀಡಿದರು.

ಇವರ ಮನೆಯಲ್ಲಿ 1.25 ಲಕ್ಷ ರೂಪಾಯಿ ನಗದು, 171 ಗ್ರಾಂ ಚಿನ್ನ, ಎರಡು ಕೆ.ಜಿ. ಬೆಳ್ಳಿ ಪತ್ತೆಯಾಗಿದೆ. ರಾಮೋಹಳ್ಳಿಯಲ್ಲಿ ಎರಡು ಮನೆ ಮತ್ತು ಐದು ನಿವೇಶನಗಳನ್ನು ಹೊಂದಿದ್ದಾರೆ. ಮೈಸೂರು ಮತ್ತು ತುಮಕೂರಿನಲ್ಲಿ ತಲಾ ಒಂದು ನಿವೇಶನ ಖರೀದಿಸಿರುವ ದಾಖಲೆಗಳು ದೊರೆತಿವೆ. ಒಂದು ಕ್ವಾಲಿಸ್ ಮತ್ತು ಎರಡು ದ್ವಿಚಕ್ರ ವಾಹನ ಪತ್ತೆಯಾಗಿವೆ ಎಂದು ತಿಳಿಸಿದರು.

ಕೋಟಿಗಟ್ಟಲೆ ಆಸ್ತಿ: ಬುಧವಾರ ದಾಳಿಗೆ ಒಳಗಾದವರ ಪೈಕಿ ಗುರುಪ್ರಸಾದ್ ಬಳಿ ಅತ್ಯಧಿಕ ಆಸ್ತಿ ಪತ್ತೆಯಾಗಿದೆ. ಸಹಕಾರ ನಗರದಲ್ಲಿರುವ ಅವರ ನಿವಾಸದ ಮೇಲೆ ಬೆಂಗಳೂರು ನಗರ ಲೋಕಾಯುಕ್ತ ಎಸ್‌ಪಿ ಯು.ಪಿ.ಶಿವರಾಮ ರೆಡ್ಡಿ ನೇತೃತ್ವದಲ್ಲಿ ನಡೆದ ದಾಳಿಯಲ್ಲಿ ಡಿವೈಎಸ್‌ಪಿ ಎಚ್.ಎಸ್.ಮಂಜುನಾಥ್, ಇನ್‌ಸ್ಪೆಕ್ಟರ್‌ಗಳಾದ ಯೋಗೇಶ್, ಬಿ.ವೈ.ರೇಣುಕಾಪ್ರಸಾದ್ ಅಂಜನ್‌ಕುಮಾರ್ ಮತ್ತು ತಂಡ ಪಾಲ್ಗೊಂಡಿತ್ತು.

ADVERTISEMENT

ಮನೆಯಲ್ಲಿ ಒಂದು ಕೆ.ಜಿ. ಚಿನ್ನ ಮತ್ತು 13 ಕೆ.ಜಿ. ಬೆಳ್ಳಿ ಪತ್ತೆಯಾಗಿದೆ. ಇವರು ಒಂದು ಮನೆ, ದೊಡ್ಡಬಳ್ಳಾಪುರದಲ್ಲಿ ಮೂರು ನಿವೇಶನ, ಕನಕಪುರ ರಸ್ತೆಯ ಅಂಜನಾಪುರ ಬಡಾವಣೆಯಲ್ಲಿ ಎರಡು ನಿವೇಶನಗಳನ್ನು ಹೊಂದಿದ್ದಾರೆ. ಬೆಂಗಳೂರು ಪೂರ್ವ ತಾಲ್ಲೂಕಿನ ಕ್ಯಾಲಸನಹಳ್ಳಿಯಲ್ಲಿ ಒಂದು ಎಕರೆ ಜಮೀನು ಖರೀದಿಸಿದ್ದಾರೆ. ವಿವಿಧ ಬ್ಯಾಂಕ್‌ಗಳಲ್ಲಿ ತೆರೆದಿರುವ ಆರು ಖಾತೆಗಳಲ್ಲಿ 35 ಲಕ್ಷ ರೂಪಾಯಿ ಇರಿಸಿದ್ದು, ಈ ಖಾತೆಗಳನ್ನು ಸ್ಥಗಿತಗೊಳಿಸಲಾಗಿದೆ. ಅವರ ಸ್ವಗ್ರಾಮ ಕಡೂರು ತಾಲ್ಲೂಕಿನ ಬಳ್ಳೆಕೆರೆಯಲ್ಲೂ ಶೋಧ ನಡೆಸಿದ್ದು, 22 ಎಕರೆ ಜಮೀನು ಪತ್ತೆಯಾಗಿದೆ ಎಂದು ರಾವ್ ಹೇಳಿದರು.

ಎನ್.ನಾಗರಾಜು, 2004ರಲ್ಲಿ ಮಹದೇವಪುರದಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಆಗಿದ್ದರು. ಆಗ ಲಂಚ ಪ್ರಕರಣವೊಂದರಲ್ಲಿ ಲೋಕಾಯುಕ್ತ ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. 2012ರ ಏಪ್ರಿಲ್‌ನಲ್ಲಿ ಈ ಪ್ರಕರಣದಲ್ಲಿ ಅವರನ್ನು ಆರೋಪಮುಕ್ತಗೊಳಿಸಿ ವಿಚಾರಣಾ ನ್ಯಾಯಾಲಯ ಆದೇಶ ಹೊರಡಿಸಿತ್ತು ಎಂದು ಅವರು ತಿಳಿಸಿದರು. ಈಗ ಅವರ ಮೇಲೆ ದಾಳಿ ನಡೆದಿದ್ದು, 1.02 ಕೋಟಿ ರೂಪಾಯಿ ಮೊತ್ತದ ಅಕ್ರಮ ಆಸ್ತಿ ಪತ್ತೆಯಾಗಿದೆ ಎಂದು ಅವರು ತಿಳಿಸಿದರು.

ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ
`ಈಗ ದಾಳಿಗೆ ಒಳಗಾಗಿರುವ ಅಧಿಕಾರಿಗಳು ಅಕ್ರಮ ಆಸ್ತಿ ಹೊಂದಿರುವ ಕುರಿತು ಶೀಘ್ರದಲ್ಲಿ ಜಾರಿ ನಿರ್ದೇಶನಾಲಯಕ್ಕೆ ಮಾಹಿತಿ ನೀಡಲಾಗುವುದು' ಎಂದು ಲೋಕಾಯುಕ್ತ ಎಡಿಜಿಪಿ ಎಚ್.ಎನ್.ಸತ್ಯನಾರಾಯಣ ರಾವ್ ತಿಳಿಸಿದರು.

`ಈ ಪ್ರಕರಣಗಳ ತನಿಖೆ ವೇಳೆ ಆದಾಯ ತೆರಿಗೆ ಇಲಾಖೆಯೊಂದಿಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗುತ್ತದೆ. ದೊಡ್ಡ ಮೊತ್ತದ ಅಕ್ರಮ ಆಸ್ತಿ ಪತ್ತೆಯಾದ ಪ್ರಕರಣಗಳ ಕುರಿತು ಮಾಹಿತಿ ನೀಡುವಂತೆ ಜಾರಿ ನಿರ್ದೇಶನಾಲಯ ಸೂಚನೆ ನೀಡಿದೆ. ಹಲವು ದಿನಗಳಿಂದ ಅದನ್ನು ಪಾಲಿಸಲಾಗುತ್ತಿದೆ. ಈ ಬಾರಿ ದಾಳಿಗೆ ಒಳಗಾದವರಲ್ಲೂ ಜಾರಿ ನಿರ್ದೇಶನಾಲಯದ ವ್ಯಾಪ್ತಿಗೆ ಬರುವ ಪ್ರಕರಣಗಳ ಮಾಹಿತಿಯನ್ನು ಶೀಘ್ರದಲ್ಲಿ ಒದಗಿಸಲಾಗುವುದು' ಎಂದರು.

`ಲೋಕಾಯುಕ್ತದ ಅಧಿಕಾರಿಗಳು, ಸಿಬ್ಬಂದಿ ವಿರುದ್ಧ ಕೇಳಿಬರುವ ಆಪಾದನೆಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಪ್ರಕರಣದ ತನಿಖಾಧಿಕಾರಿ ಮಾತ್ರ ತನಿಖೆಗೆ ಸಂಬಂಧಿಸಿದ ಕಡತಗಳು ಮತ್ತು ದಾಖಲೆಗಳನ್ನು ಇರಿಸಿಕೊಳ್ಳಬೇಕು ಎಂಬ ಸೂಚನೆ ನೀಡಲಾಗಿದೆ. ಸಂಶಯಾಸ್ಪದ ನಡವಳಿಕೆಯುಳ್ಳ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ತಕ್ಷಣವೇ ವಾಪಸ್ ಕಳಿಸಲಾಗುತ್ತಿದೆ' ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.