ADVERTISEMENT

ಲೋಕಾಯುಕ್ತ ವರದಿ: ಕ್ರಮಕ್ಕೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 12 ಸೆಪ್ಟೆಂಬರ್ 2011, 19:00 IST
Last Updated 12 ಸೆಪ್ಟೆಂಬರ್ 2011, 19:00 IST

ಕೂಡಲಸಂಗಮ (ಬಾಗಲಕೋಟೆ): `ಅಕ್ರಮ ಗಣಿಗಾರಿಕೆ ಕುರಿತು ಲೋಕಾಯುಕ್ತ ವರದಿಯಲ್ಲಿ ಮಾಡಿರುವ ಶಿಫಾರಸುಗಳನ್ನು ತಕ್ಷಣದಿಂದ ಜಾರಿಗೆ ತರಬೇಕು. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ರಾಜ್ಯದಾದ್ಯಂತ ಹೋರಾಟ ನಡೆಸಲಾಗುವುದು~ ಎಂದು ಕಾಂಗ್ರೆಸ್ ಮುಖಂಡರು ರಾಜ್ಯ ಸರ್ಕಾರಕ್ಕೆ ಸೋಮವಾರ ಎಚ್ಚರಿಕೆ ನೀಡಿದರು.

ಕೂಡಲಸಂಗಮದಲ್ಲಿ ಸೋಮವಾರ ಸಮಾರೋಪಗೊಂಡ ~ಕಾಂಗ್ರೆಸ್ ನಡಿಗೆ -ಜನರ ಬಳಿಗೆ~ ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡರು, ಲೋಕಾಯುಕ್ತ ವರದಿಯ ಶಿಫಾರಸುಗಳನ್ನು ಮತ್ತು ಕೈಗೊಳ್ಳಬೇಕಾದ ಕ್ರಮಗಳನ್ನು ಸರ್ಕಾರ ಯಥಾವತ್ತಾಗಿ ಜಾರಿಗೊಳಿಸಬೇಕು; ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಅಕ್ರಮ ಗಣಿಗಾರಿಕೆ ಬಗ್ಗೆ ಲೋಕಾಯುಕ್ತ ವರದಿ ನೀಡಿ ಒಂದೂವರೆ ತಿಂಗಳು ಕಳೆದರೂ ವರದಿಯಲ್ಲಿ ಪ್ರಸ್ತಾಪವಾಗಿರುವ 787 ಸರ್ಕಾರಿ ಅಧಿಕಾರಿಗಳಿಗೆ ಕನಿಷ್ಠ ನೋಟಿಸ್ ಕೂಡ ನೀಡಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

~ಮುಖ್ಯಮಂತ್ರಿ ಸದಾನಂದಗೌಡ ಅವರು ದೂರವಾಣಿ ಮೂಲಕ ಯಡಿಯೂರಪ್ಪ ಅವರ ಸಲಹೆ ಪಡೆದು ಅಧಿಕಾರ ನಡೆಸುವುದು ಬೇಡ. ಯಡಿಯೂರಪ್ಪ ಅವರು ತೆರೆಮರೆಯಲ್ಲಿ ನಿಂತು ರಾಜಕೀಯ ಮಾಡುವುದನ್ನು ನಿಲ್ಲಿಸಲಿ~ ಎಂದು ಅವರು ವ್ಯಂಗ್ಯವಾಡಿದರು.

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ,  ಬಿಜೆಪಿಗೆ ಸಂವಿಧಾನದ ಬಗ್ಗೆ ಗೌರವವಿಲ್ಲ ಎಂದು ಟೀಕಿಸಿದರು. ಬಸವಣ್ಣ ಪ್ರತಿಪಾದಿಸಿದಂತಹ ಸಮಾನತೆ, ವರ್ಗ, ಜಾತಿರಹಿತ ಸಮಾಜ ನಿರ್ಮಾಣದ ಬಗ್ಗೆ ಬಿಜೆಪಿ ಮುಖಂಡರಿಗೆ ಅರಿವಿಲ್ಲ ಎಂದು ಕಿಡಿಕಾರಿದರು.

ಆಲಮಟ್ಟಿ ಜಲಾಶಯದ 50 ಟಿಎಂಸಿ ನೀರನ್ನು ಕೈಗಾರಿಕೆಗಳಿಗೆ ನೀಡುತ್ತಿರುವ ರಾಜ್ಯ ಸರ್ಕಾರ ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ನಿರ್ಲಕ್ಷಿಸಿದೆ ಎಂದು ದೂರಿದರು. ಅಕ್ರಮ ಗಣಿಗಾರಿಕೆಯಿಂದ ರಾಜ್ಯದ ಬೊಕ್ಕಸಕ್ಕೆ ರೂ. 20 ಸಾವಿರ ಕೋಟಿ ನಷ್ಠವಾಗಿದೆ, ಲೋಕಾಯುಕ್ತ ವರದಿಯಂತೆ ನಷ್ಠವಾಗಿರುವ ಹಣದ ಐದು ಪಟ್ಟು ತಪ್ಪಿತಸ್ಥರಿಂದ ವಸೂಲಿ ಮಾಡಬೇಕು ಎಂದು ಒತ್ತಾಯಿಸಿದರು.

ವಿಧಾನ ಪರಿಷತ್ ವಿರೋಧಪಕ್ಷದ ನಾಯಕಿ ಮೋಟಮ್ಮ ಮಾತನಾಡಿ, ಪ್ರಸ್ತುತ ರಾಜಕೀಯದಲ್ಲಿ  ಕಾಂಗ್ರೆಸ್ ರಾಜ್ಯಕ್ಕೆ ಅನಿವಾರ್ಯ ಎಂದರು. ರಾಜ್ಯದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿರುವ ಭ್ರಷ್ಟ ಬಿಜೆಪಿ ಸರ್ಕಾರದ ವಿರುದ್ಧ ಧರ್ಮಯುದ್ಧ ನಡೆಯಬೇಕಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.