ADVERTISEMENT

ಲೋಕೋಪಯೋಗಿ ಇಲಾಖೆ ಇಂಗ್ಲಿಷ್ ವ್ಯಾಮೋಹ

ಸುಭಾಸ.ಎಸ್.ಮಂಗಳೂರ
Published 30 ಅಕ್ಟೋಬರ್ 2011, 19:30 IST
Last Updated 30 ಅಕ್ಟೋಬರ್ 2011, 19:30 IST

ಮೈಸೂರು: ಆಡಳಿತದಲ್ಲಿ ಕನ್ನಡ ಅನುಷ್ಠಾನಗೊಳಿಸಬೇಕೆಂಬ ಸರ್ಕಾರಿ ಆದೇಶವನ್ನು ಕಡೆಗಣಿಸಿರುವ ಲೋಕೋಪಯೋಗಿ ಇಲಾಖೆಯು 2005 ರಿಂದ ಇಲ್ಲಿಯವರೆಗೆ ಇಲಾಖೆ ದರಪಟ್ಟಿಯನ್ನು ಇಂಗ್ಲಿಷ್‌ನಲ್ಲಿ ಪ್ರಕಟಿಸುತ್ತಿದೆ.

 ಲೋಕೋಪಯೋಗಿ ಇಲಾಖೆ ರಚನೆಯಾದ ದಿನದಿಂದ 2002-03ರವರೆಗೆ ಇಲಾಖೆ ಕಾಮಗಾರಿಗಳ ದರ ಪಟ್ಟಿಯನ್ನು ಕನ್ನಡ ಭಾಷೆಯಲ್ಲಿ ಮುದ್ರಿಸಿ, ಎಂಜಿನಿಯರುಗಳು ಮತ್ತು ಗುತ್ತಿಗೆದಾರರಿಗೆ ವಿತರಿಸುತ್ತಿತ್ತು. ಇದರಿಂದ ಎಂಜಿನಿಯರುಗಳಿಗೆ ಕನ್ನಡದಲ್ಲಿ ಅಂದಾಜು ವೆಚ್ಚ ತಯಾರಿಸಲು ಅನುಕೂಲವಾಗಿತ್ತು. ಕನ್ನಡಿಗ ಗುತ್ತಿಗೆದಾರರಿಗೆ ಗುತ್ತಿಗೆ ನಿರ್ಮಾಣ ಕೆಲಸದಲ್ಲಿ ಸಹಾಯಕವಾಗಿತ್ತು. ಆದರೆ, 2005ರಿಂದ ಲೋಕೋಪಯೋಗಿ ಇಲಾಖೆ ಇಂಗ್ಲಿಷ್‌ನಲ್ಲಿ ದರ ಪಟ್ಟಿ ಮುದ್ರಿಸುವ ಮೂಲಕ ಕನ್ನಡವನ್ನು ಕಡೆಗಣಿಸಿದೆ.

ಈ ನಡುವೆ ದರ ಪಟ್ಟಿಯನ್ನು ಕನ್ನಡದಲ್ಲೇ ಮುದ್ರಿಸಬೇಕು ಎಂಬ ಕನ್ನಡಿಗರ ಹೋರಾಟಕ್ಕೆ ಮಣಿದ ಸರ್ಕಾರ 2005ರಲ್ಲಿ ನಿವೃತ್ತ ಎಂಜಿನಿಯರ್ ಟಿ.ಜಿ.ರಾಧಾಕಷ್ಣ ಅಧ್ಯಕ್ಷತೆಯಲ್ಲಿ ಸಮಿತಿ ನೇಮಕ ಮಾಡಿತು. ಅದರಂತೆ ಸಮಿತಿಯು ಕನ್ನಡದಲ್ಲಿ ದರ ಪಟ್ಟಿಯನ್ನು ಪ್ರಕಟಿಸುವಂತೆ ಸರ್ಕಾರಕ್ಕೆ ಶಿಫಾರಸು ಮಾಡಿತು. ಆದರೆ ಶಿಫಾರಸು ಮಾಡಿ 6 ವರ್ಷ ಕಳೆದರೂ ಲೋಕೋಪಯೋಗಿ ಇಲಾಖೆ ಇಂಗ್ಲಿಷ್‌ನಲ್ಲೇ ದರ ಪಟ್ಟಿಯನ್ನು  ಮುದ್ರಿಸಿ, ವಿತರಣೆ ಮಾಡುತ್ತಿದೆ.

ಈ ಕುರಿತು ಕೆಲವು ಎಂಜಿನಿಯರುಗಳು ಆಕ್ಷೇಪ ವ್ಯಕ್ತಪಡಿಸಿ ಇಲಾಖೆಯ ಅಧೀಕ್ಷಕ ಎಂಜಿನಿಯರ್‌ಗೆ ಪತ್ರ ಬರೆದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಇಲಾಖೆ 2005ರ ಜುಲೈ 5ರಂದು ಸಭೆ ನಡೆಸಿತು. ಅಂತಿಮವಾಗಿ `ದರ ಪಟ್ಟಿಯನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕೆಲಸವನ್ನು ಕೇಂದ್ರ ಕಚೇರಿಯಿಂದ ಸಂಬಂಧಿಸಿದ ಇಲಾಖೆಗೆ ವಹಿಸಲಾಗಿದ್ದು, ಈ ಕಾರ್ಯ ವಿಳಂಬವಾಗುವ ಸಂಭವ ಇರುವುದರಿಂದ ದರ ಪಟ್ಟಿಯನ್ನು ಸದ್ಯಕ್ಕೆ ಆಂಗ್ಲ ಭಾಷೆಯಲ್ಲಿ ಮುದ್ರಿಸಿ, ತದನಂತರ ಕನ್ನಡ ಭಾಷೆಗೆ ತರ್ಜುಮೆಗೊಳಿಸುವುದು ಸೂಕ್ತ~ ಎಂಬ ನಿರ್ಧಾರಕ್ಕೆ ಬಂದಿತು.

ಸರ್ಕಾರದ ನಿರ್ಧಾರದಿಂದ ಕೆರಳಿದ ಎಂಜಿನಿಯರುಗಳು ಮತ್ತೆ ಆಕ್ಷೇಪ ವ್ಯಕ್ತಪಡಿಸಿದಾಗ, ಲೋಕೋಪಯೋಗಿ ಇಲಾಖೆಯು ಭಾಷಾಂತರ ನಿರ್ದೇಶಕರಿಗೆ 2004-05 ಪತ್ರ ಬರೆದು 2005-06ನೇ ಸಾಲಿನ ದರ ಪಟ್ಟಿಯನ್ನು ಕನ್ನಡಕ್ಕೆ ತರ್ಜುಮೆ ಮಾಡಿಕೊಡುವಂತೆ ಸೂಚಿಸಿತು.

ಇದಕ್ಕೆ ಉತ್ತರಿಸಿದ ಭಾಷಾಂತರ ನಿರ್ದೇಶನಾಲಯ `ಪ್ರತಿದಿನ ಇಲಾಖೆಗೆ ಸರ್ಕಾರ ಹಾಗೂ ಬೇರೆ ಬೇರೆ ಇಲಾಖೆಗಳಿಂದ ಭಾಷಾಂತರಕ್ಕೆ ಹಲವಾರು ತುರ್ತು ವಿಷಯಗಳು ಬರುವುದರಿಂದ  ಆದ್ಯತೆ ಮೇಲೆ ಕೆಲಸ ಮಾಡಲಾಗುವುದು. ಅಲ್ಲದೆ, ನುರಿತ ಭಾಷಾಂತಕಾರರ ಕೊರತೆ ಇರುವುದರಿಂದ 2-3 ತಿಂಗಳು ಸಮಯಬೇಕು~ ಎಂದು ಹೇಳಿ ಜಾರಿಕೊಂಡಿತು.

ಈ ಬಗ್ಗೆ 2011ರಲ್ಲಿ ಮಾಹಿತಿ ಹಕ್ಕು ಕಾಯಿದೆ ಅಡಿ ಮಾಹಿತಿ ಕೇಳಿದ ಎಂಜಿನಿಯರ್‌ಗೆ 36 ಅಧ್ಯಾಯಗಳ ಪೈಕಿ 6 ಅಧ್ಯಾಯಗಳ ತರ್ಜುಮೆ ಕೆಲಸ  ಪೂರ್ಣಗೊಂಡಿದೆ ಎಂಬ ಉತ್ತರ ಲಭ್ಯವಾಗಿದೆ. 2005 ರಿಂದ ಇದುವರೆಗೂ ತರ್ಜುಮೆಯನ್ನು ಗಂಭೀರವಾಗಿ ಪರಿಗಣಿಸದ ಇಲಾಖೆ, 2011-12ನೇ  ಸಾಲಿನ ದರ ಪಟ್ಟಿಯನ್ನೂ ಇಂಗ್ಲಿಷ್‌ನಲ್ಲೇ ಮುದ್ರಿಸಿ, ವಿತರಿಸಿದೆ.

ಇಲಾಖೆಯ ಈ ನಡವಳಿಕೆಯಿಂದ ಕಾಮಗಾರಿಗಳು ನೆರೆ ರಾಜ್ಯಗಳ ಗುತ್ತಿಗೆದಾರರ  ಪಾಲಾಗುತ್ತಿದ್ದು, ಕನ್ನಡಿಗ ಗುತ್ತಿಗೆದಾರರಿಗೆ ಅನ್ಯಾಯವಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.