ADVERTISEMENT

ಲೋಪ ಸರಿಪಡಿಸುವ ದಾರಿ?

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 20:10 IST
Last Updated 11 ಫೆಬ್ರುವರಿ 2012, 20:10 IST

ಬೆಂಗಳೂರು: ಲೋಕಾಯುಕ್ತರು ಅಥವಾ ಉಪ ಲೋಕಾಯುಕ್ತರಾಗಿ ಯಾವುದೇ ವ್ಯಕ್ತಿ ಅಧಿಕಾರ ವಹಿಸಿಕೊಂಡ ಬಳಿಕ ನೇಮಕಾತಿಯನ್ನು ರದ್ದು ಮಾಡಲು ಅಥವಾ ಹುದ್ದೆಯಿಂದ ವಜಾ ಮಾಡಲು ನೇರವಾಗಿ ಸರ್ಕಾರಕ್ಕೆ ಅಧಿಕಾರವಿಲ್ಲ. ಕರ್ನಾಟಕ ಲೋಕಾಯುಕ್ತ ಕಾಯ್ದೆಯ ಕಲಂ 6ರ ಪ್ರಕಾರ, ಹೈಕೋರ್ಟ್ ಅಥವಾ ಸುಪ್ರೀಂಕೋರ್ಟ್ ನ್ಯಾಯಮೂರ್ತಿಯೊಬ್ಬರನ್ನು ಹುದ್ದೆಯಿಂದ ಕೆಳಗಿಳಿಸಲು ನಡೆಸುವ `ಮಹಾಭಿಯೋಗ~ ಪ್ರಕ್ರಿಯೆಯ ವಿಧಾನವನ್ನೇ ಲೋಕಾಯುಕ್ತರ ಅಥವಾ ಉಪ ಲೋಕಾಯುಕ್ತರ ಪದಚ್ಯುತಿಗೆ ಅನುಸರಿಸಬೇಕು.

ಲೋಕಾಯುಕ್ತ ಅಥವಾ ಉಪ ಲೋಕಾಯುಕ್ತರ ವಿರುದ್ಧ ದುರ್ನಡತೆ, ಅಸಮರ್ಥತೆಯ ಆರೋಪಗಳು ಇದ್ದರೆ ಅವರನ್ನು ಹುದ್ದೆಯಿಂದ ತೆರವುಗೊಳಿಸಲು `ನ್ಯಾಯಾಧೀಶರ ವಿಚಾರಣಾ ಕಾಯ್ದೆ~ ಅಡಿಯಲ್ಲಿ ವಿಚಾರಣೆ ನಡೆಸಬೇಕಾಗುತ್ತದೆ. ಆರೋಪಗಳು ಸಾಬೀತಾದರೆ ಸಂಬಂಧಿಸಿದ ವರದಿಯನ್ನು ಸಮಿತಿಯು ಸರ್ಕಾರಕ್ಕೆ ಸಲ್ಲಿಸಬೇಕು. ಈ ವರದಿಯನ್ನು ವಿಧಾನಮಂಡಲದ ಮುಂದಿಡಲಾಗುತ್ತದೆ.
 
ಅಲ್ಲಿ ಉಭಯ ಸದನಗಳಲ್ಲಿ ಮೂರನೇ ಎರಡರಷ್ಟು ಬಹುಮತದೊಂದಿಗೆ ವರದಿ ಒಪ್ಪಿಕೊಳ್ಳಬೇಕು. ನಂತರ ಹುದ್ದೆಯಿಂದ ತೆರವುಗೊಳಿಸುವ ಸಂಬಂಧ ಆದೇಶ ಹೊರಡಿಸುವಂತೆ ರಾಜ್ಯಪಾಲರಿಗೆ ಪ್ರಸ್ತಾವ ಕಳುಹಿಸಬಹುದು. `ನಿರ್ಣಯ ಕಳುಹಿಸಲಿ~ ಎನ್ನುವ ಮೂಲಕ ಇದನ್ನೇ ರಾಜ್ಯಪಾಲರು ಗೂಡಾರ್ಥದಲ್ಲಿ ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.