ADVERTISEMENT

ವಕೀಲರ ಪರಿಷತ್‌ ಚುನಾವಣೆ ರದ್ದು: ಪ್ರತಿವಾದಿಗಳಿಗೆ ನೋಟಿಸ್‌

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2018, 19:52 IST
Last Updated 23 ಏಪ್ರಿಲ್ 2018, 19:52 IST

ಬೆಂಗಳೂರು: ರಾಜ್ಯ ವಕೀಲರ ಪರಿಷತ್ ಚುನಾವಣೆಯನ್ನು ರದ್ದುಗೊಳಿಸಿ ಭಾರತೀಯ ವಕೀಲರ ಪರಿಷತ್‌ ಚುನಾವಣಾ ನ್ಯಾಯಮಂಡಳಿ ಹೊರಡಿಸಿರುವ ಆದೇಶ ಪ್ರಶ್ನಿಸಿದ ಅರ್ಜಿಗೆ ಸಂಬಂಧಿಸಿದಂತೆ ಪ್ರತಿವಾದಿಗಳಾದ ರಾಜ್ಯ ವಕೀಲರ ಪರಿಷತ್ ಮತ್ತು ದುರ್ಗಾಪ್ರಸಾದ್ ಅವರಿಗೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.

ಈ ಕುರಿತಂತೆ ಹಿರಿಯ ವಕೀಲ ವೈ.ಆರ್.ಸದಾಶಿವ ರೆಡ್ಡಿ ಸಲ್ಲಿಸಿರುವ ಅರ್ಜಿಯನ್ನು ನ್ಯಾಯಮೂರ್ತಿ ಎಚ್‌.ಜಿ.ರಮೇಶ್ ಮತ್ತು ಬಿ.ಶ್ರೀನಿವಾಸೇಗೌಡ ಅವರಿದ್ದ ವಿಭಾಗೀಯ ನ್ಯಾಯಪೀಠ ಸೋಮವಾರ ವಿಚಾರಣೆ ನಡೆಸಿತು.

ವಿಚಾರಣೆ ವೇಳೆ ಪರಿಷತ್‌ ಪರ ವಾದ ಮಂಡಿಸಿದ ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಎ.ಎಸ್‌.ಪೊನ್ನಣ್ಣ, ‘ಪರಿಷತ್ ಚುನಾವಣೆ ರದ್ದುಗೊಳಿಸುವ ಅಧಿಕಾರ ನ್ಯಾಯಮಂಡಳಿಗೆ ಇಲ್ಲ’ ಎಂದರು.

ADVERTISEMENT

‘ಮತಪೆಟ್ಟಿಗೆಗಳನ್ನು ಇರಿಸಿರುವ ಜಾಗಕ್ಕೆ ದಿನವೊಂದಕ್ಕೆ ಸಹಸ್ರಾರು ರೂಪಾಯಿ ಬಾಡಿಗೆ ನೀಡಲಾಗುತ್ತಿದೆ. ಈ ಪೆಟ್ಟಿಗೆಗಳನ್ನು ರಕ್ಷಣೆ ಮಾಡುವುದೇ ದೊಡ್ಡ ತೊಂದರೆಯಾಗುತ್ತಿದೆ. ಆದ್ದರಿಂದ ತಕ್ಷಣವೇ ಮತ ಎಣಿಕೆ ನಡೆಸಲು ಆದೇಶಿಸಬೇಕು’ ಎಂದು ಕೋರಿದರು.

ಭಾರತೀಯ ವಕೀಲರ ಪರಿಷತ್‌ ಕಾರ್ಯದರ್ಶಿ, ಚುನಾವಣಾ ನ್ಯಾಯಮಂಡಳಿ ಅಧ್ಯಕ್ಷ ಎಸ್.ಕೆ.ಮುಖರ್ಜಿ ಅವರನ್ನೂ ಪ್ರತಿವಾದಿಗಳನ್ನಾಗಿ ಮಾಡಲಾಗಿದೆ.

ಪ್ರಕರಣವೇನು?: ರಾಜ್ಯ ವಕೀಲರ ಪರಿಷತ್‌ನ 25 ಪದಾಧಿಕಾರಿಗಳ ಆಯ್ಕೆಗೆ 2018ರ ಮಾರ್ಚ್ 27ರಂದು ಚುನಾವಣೆ ನಡೆದಿತ್ತು. ‘ಚುನಾವಣೆಯಲ್ಲಿ ಅಕ್ರಮ ನಡೆದಿದೆ’ ಎಂದು ಆರೋಪಿಸಿ ಸ್ಪರ್ಧಿಯಾಗಿದ್ದ ವಕೀಲ ಎಚ್.ಆರ್. ದುರ್ಗಾಪ್ರಸಾದ್ ಭಾರತೀಯ ವಕೀಲರ ಪರಿಷತ್‌ಗೆ ದೂರು ನೀಡಿದ್ದರು. ಇದರನ್ವಯ ಚುನಾವಣಾ ನ್ಯಾಯಮಂಡಳಿ ಚುನಾವಣೆ ರದ್ದುಪಡಿಸಿ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.