ADVERTISEMENT

ವಕೀಲರ ಮುಷ್ಕರ: ಕಕ್ಷಿದಾರರಿಗೆ ಬರೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 19:30 IST
Last Updated 19 ಜನವರಿ 2012, 19:30 IST

ಬೆಂಗಳೂರು: ಪೊಲೀಸರು ತಮ್ಮ ಮೇಲೆ ದೌರ್ಜನ್ಯ ನಡೆಸಿದ್ದಾರೆ ಎಂದು ವಕೀಲರು ಪ್ರತಿಭಟನೆ ಮುಂದುವರಿಸಿದ ಹಿನ್ನೆಲೆಯಲ್ಲಿ ಗುರುವಾರವೂ ವಾಹನ ಸಂಚಾರಕ್ಕೆ ಅಡ್ಡಿಯುಂಟಾಗಿ ಸಾರ್ವಜನಿಕರು ತೀವ್ರ ತೊಂದರೆ ಅನುಭವಿಸಿದರು. ಇನ್ನೊಂದೆಡೆ, ವಕೀಲರು ಬಾರದೇ ಕಕ್ಷಿದಾರರು ಪರದಾಡಬೇಕಾಯಿತು.

ಹಲವು ಕಿರಿಯ ವಕೀಲರು ಮುಷ್ಕರದಲ್ಲಿ ಪಾಲ್ಗೊಂಡು ಕಲಾಪ ಬಹಿಷ್ಕರಿಸಿದ್ದರೆ, ಇವರ ಸಹವಾಸವೇ ಬೇಡ ಎಂದು ವೃತ್ತಿಯಲ್ಲಿ ಹಿರಿಯರಾದ ಬಹುತೇಕ ವಕೀಲರು ಕೋರ್ಟ್‌ಗೆ ಬರುವ ಗೋಜಿಗೇ ಹೋಗಲಿಲ್ಲ. ವಕೀಲರು ಈ ಪರಿಯಾಗಿ ಕೋರ್ಟ್ ಕಲಾಪ ಬಹಿಷ್ಕಾರ ಮಾಡುತ್ತಾರೆ ಎಂಬ ಅರಿವೇ ಇರದ ದೂರದ ಊರುಗಳ ಕಕ್ಷಿದಾರರು ಹಿಡಿಶಾಪ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಬೆಳಿಗ್ಗೆ 10.30ರ ನಂತರ ನಗರ ಸಿವಿಲ್ ನ್ಯಾಯಾಲಯ ಸಂಕೀರ್ಣದ ಮುಂದೆ ಸೇರಿದ ಸಾವಿರಾರು ವಕೀಲರು ಸರ್ಕಾರ, ಪೊಲೀಸರು ಹಾಗೂ ಮಾಧ್ಯಮಗಳ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ನ್ಯಾಯಾಂಗ ಕಲಾಪದಲ್ಲಿ ಭಾಗವಹಿಸಲು ತಯಾರಾಗಿ ಬಂದಿದ್ದ ಯಾವೊಬ್ಬ ವಕೀಲರನ್ನೂ ನ್ಯಾಯಾಲಯದ ಆವರಣದೊಳಗೆ ಹೋಗಲು ಮುಷ್ಕರ ನಿರತ ವಕೀಲರು ಬಿಡುತ್ತಿರಲಿಲ್ಲ. ಒಳಕ್ಕೆ ಹೋಗಲು ಪ್ರಯತ್ನಪಟ್ಟವರನ್ನು ಮುಖ್ಯ ದ್ವಾರದಲ್ಲಿಯೇ ತಡೆಯಲಾಗಿತ್ತು. ಇಲ್ಲಿಂದ ಹೈಕೋರ್ಟ್ ಒಳಕ್ಕೂ `ನುಗ್ಗಿದ~ ವಕೀಲರ ಗುಂಪೊಂದು ಕಲಾಪಕ್ಕೆ ಸಜ್ಜಾಗುತ್ತಿದ್ದ ವಕೀಲರನ್ನು ಹೊರಕ್ಕೆ ಕರೆ ತಂದಿತು.

ಗುಂಪಿನ ಕೆಲವರು ಸೌಜನ್ಯದಿಂದ ವಕೀಲರನ್ನು ಹೊರಕ್ಕೆ ಕರೆದರೆ, ಇನ್ನು ಕೆಲವರ ಮಾತು ಬಿರುಸಿನಿಂದ ಕೂಡಿತ್ತು.
 `ನೀವು ಕೆಲಸ ಮಾಡಿದ್ದು ಸಾಕ್ರೋ. ಹೊರಕ್ಕೆ ಬರ‌್ರೋ. ನಿಮ್ಮನ್ನು ಬೇಕಾದ್ರೆ ನಾನೇ ಅಡ್ವೊಕೇಟ್ ಜನರಲ್ ಮಾಡಿಸ್ತೀನಿ. ಇವತ್ತು ಕಲಾಪದಲ್ಲಿ ಭಾಗವಹಿಸಿದ್ರೆ ಅಷ್ಟೇ~ ಎಂದು ಕಿರಿಯ ವಕೀಲನೊಬ್ಬ ಜೋರು ದನಿಯಲ್ಲಿ ಕೂಗಾಡುತ್ತ ವಕೀಲರನ್ನು ಬೆದರಿಸುತ್ತ್ದ್ದಿದುದು ಕಂಡುಬಂತು. ಇದರಿಂದ ಹೆದರಿದ ವಕೀಲರು ಇವರ ಉಸಾಬರಿಯೇ ಬೇಡ ಎಂದು ಕಲಾಪ ಬಿಟ್ಟು ಮನೆಗೆ ತೆರಳಿದರು.

ಹೈಕೋರ್ಟ್ ವಕೀಲರಾಗಿ ಕಲಾಪಕ್ಕೆ ಹಾಜರಾಗಲು ಹೆದರುವುದು ಏಕೆ ಎಂದು `ಪ್ರಜಾವಾಣಿ~ ವಕೀಲರೊಬ್ಬರನ್ನು ಪ್ರಶ್ನಿಸಿದಾಗ ಅವರು, `ಅಯ್ಯೋ ಮ್ಯಾಜಿಸ್ಟ್ರೇಟ್ ಕೋರ್ಟ್ ವಕೀಲರ `ಬಲ~ ನಿಮಗೆ ಗೊತ್ತಿಲ್ಲ. ಅವರ ಮುಂದೆ ಹೈಕೋರ್ಟ್ ವಕೀಲರು ಹೆದರಲೇಬೇಕು. ಹೈಕೋರ್ಟ್ ವಕೀಲರದೇನಿದ್ದರೂ ವಾದ ಮಂಡನೆ ಮಾಡುವುದು ಅಷ್ಟೇ~ ಎಂದರು.

ವಕೀಲರ ಗೈರುಹಾಜರಿಯಿಂದ       ಹೈಕೋರ್ಟ್‌ನ ಬಹುತೇಕ ಕಲಾಪ ಮಧ್ಯಾಹ್ನ ಒಂದು ಗಂಟೆಯ ಒಳಗೇ ಮುಕ್ತಾಯಗೊಂಡಿತು. ಕೆಲ ವಕೀಲರು ವಾದ ಮಂಡಿಸಿದ ಕಾರಣದಿಂದ ನ್ಯಾಯಮೂರ್ತಿಗಳ ಐದು ಪೀಠಗಳು ಮಾತ್ರ ಕಲಾಪ ಮಧ್ಯಾಹ್ನವೂ ಮುಂದುವರಿಸಿತು. ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ನೇತೃತ್ವದ ವಿಭಾಗೀಯ ಪೀಠದ ಮುಂದೆ ಒಬ್ಬರೇ ಒಬ್ಬರು ವಕೀಲರು ವಾದ ಮಂಡಿಸಲು ತಯಾರಾದಾಗ ಸಂತಸಗೊಂಡ ನ್ಯಾ. ಸೇನ್ `ನೀವು ನಿಜವಾಗಿಯೂ ಗ್ರೇಟ್~ ಎಂದು ಚಟಾಕಿ ಹಾರಿಸಿದರು.

ಮೆರವಣಿಗೆ ಆರಂಭ: ಬೇರೆ ಬೇರೆ ನ್ಯಾಯಾಲಯಗಳ ವಕೀಲರು ಒಟ್ಟುಗೂಡಿದ ನಂತರ ಸಿಟಿ ಸಿವಿಲ್ ಕೋರ್ಟ್‌ನಿಂದ ಮೆರವಣಿಗೆ ಆರಂಭವಾಯಿತು. ಪ್ರಾರಂಭದಿಂದಲೇ ಭದ್ರತೆಗಾಗಿ ನಿಯೋಜಿಸಿದ್ದ ಪೊಲೀಸರನ್ನು ಪ್ರತಿಭಟನಾ ನಿರತ ವಕೀಲರು ಕೆಣಕುತ್ತಲೇ ಇದ್ದರು. ಈ ನಡುವೆ ಪೊಲೀಸರು ಹಾಗೂ ವಕೀಲರ ನಡುವೆ     ನೂಕಾಟ -ತಳ್ಳಾಟವೂ ನಡೆಯಿತು.
 

 ಇದರಿಂದ ದ್ವೇಷಮಯ ಪರಿಸ್ಥಿತಿ ನಿರ್ಮಾಣವಾದರೂ ಪೊಲೀಸರು ಸಹನೆ ಕಳೆದುಕೊಳ್ಳಲಿಲ್ಲ. ತಾಳ್ಮೆಯಿಂದ ಕರ್ತವ್ಯ ನಿರ್ವಹಿಸಿದರು.

ಆನಂತರ ಮೈಸೂರು ಬ್ಯಾಂಕ್ ವೃತ್ತದ ಮೂಲಕ ಅರಮನೆ ರಸ್ತೆಯಲ್ಲಿ ಮೆರವಣಿಗೆಯಲ್ಲಿ ಸಾಗಿದ ವಕೀಲರು, ಗೃಹ ವಿಜ್ಞಾನ ಕಾಲೇಜು ಬಳಿಯ ಅಂಡರ್‌ಪಾಸ್ ಬಳಿ ಬರುತ್ತಿದ್ದಂತೆಯೇ ಮತ್ತೆ ಪೊಲೀಸರನ್ನು ಕೆಣಕಿದರು. ಈ ಸಂದರ್ಭದಲ್ಲಿ ಅಂಡರ್‌ಪಾಸ್‌ನಲ್ಲಿ ಸಾಗುತ್ತಿದ್ದ ಕೆಲ ವಕೀಲರು ಪೊಲೀಸರ ಮೇಲೆ ಕಸ ಎಸೆದು ಅಸಭ್ಯ ರೀತಿಯಲ್ಲಿ ವರ್ತಿಸಿದರು. ಛಾಯಾಚಿತ್ರ ತೆಗೆಯಲು ಮುಂದಾದ ಪತ್ರಿಕಾ ಛಾಯಾಗ್ರಾಹಕರತ್ತಲೂ ಕಲ್ಲು ತೂರಿ ದುಂಡಾವರ್ತನೆ ಪ್ರದರ್ಶಿಸಿದರು.

ಪೊಲೀಸರು ಥಳಿಸಿದ್ದರಿಂದ ಗಾಯಗೊಂಡರು ಎನ್ನಲಾದ ವಕೀಲ ಬಾಲಕೃಷ್ಣ ಅವರ ಪೋಸ್ಟರ್‌ಗಳನ್ನು ಪ್ರದರ್ಶಿಸುವ ಮೂಲಕ ಶಿಳ್ಳೆ, ಘೋಷಣೆ, ಧಿಕ್ಕಾರಗಳನ್ನು ಕೂಗುತ್ತ ಸಿಐಡಿ ವೃತ್ತದ ಮೂಲಕ ಅಂಚೆ ವಿನಿಮಯ ಕಚೇರಿವರೆಗೆ ಸಾಗಿ ಬಂದ ವಕೀಲರನ್ನು ಪೊಲೀಸರು ಮುಂದೆ ಬಿಡದೆ ಅಲ್ಲೇ ತಡೆದರು. ಈ ಸಂದರ್ಭದಲ್ಲಿ ಗೃಹ ಸಚಿವರು, ರಾಜ್ಯ ಪೊಲೀಸ್ ಮಹಾನಿರ್ದೇಶಕರು, ನಗರ ಪೊಲೀಸ್ ಕಮಿಷನರ್ ಹಾಗೂ ಮಾಧ್ಯಮಗಳ ವಿರುದ್ಧ ವಕೀಲರು ಹರಿಹಾಯ್ದರು.
 
ಆರ್.ಸಿ. ಕಾಲೇಜಿನ ಕಾಂಪೌಂಡ್‌ನ ಮೇಲೆ ನಿಂತು ಛಾಯಾಚಿತ್ರ ತೆಗೆಯಲು ಮುಂದಾದ ಪತ್ರಿಕಾ ಛಾಯಾಗ್ರಾಹಕರೊಬ್ಬರನ್ನು ವಕೀಲರು ಬೆದರಿಸಿ ಕೆಳಗಿಳಿಸಿದರು. ವಕೀಲರು ಮಾಧ್ಯಮಗಳ ವಿರುದ್ಧ ತಿರುಗಿ ಬಿದ್ದಿದ್ದರಿಂದ ಯಾವುದೇ ಖಾಸಗಿ ಚಾನೆಲ್‌ಗಳು ವಕೀಲರ ಪ್ರತಿಭಟನೆಯನ್ನು ನೇರ ಪ್ರಸಾರ ಮಾಡುವ ಗೋಜಿಗೆ ಹೋಗಲಿಲ್ಲ.

ಜನ ಸಾಮಾನ್ಯರ ವಿರುದ್ಧ ಹೋರಾಟವಲ್ಲ:  ಪ್ರತಿಭಟನಾನಿರತ ವಕೀಲರನ್ನು ಉದ್ದೇಶಿಸಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ಹಾಗೂ ಪ್ರಧಾನ ಕಾರ್ಯದರ್ಶಿ ಎ.ಪಿ. ರಂಗನಾಥ್, `ನಮ್ಮ ಹೋರಾಟ ಪೊಲೀಸ್ ದೌರ್ಜನ್ಯದ ವಿರುದ್ಧವೇ ಹೊರತು ಜನಸಾಮಾನ್ಯರ ವಿರುದ್ಧ ಅಲ್ಲ. ರಾಜ್ಯದಲ್ಲಿ ಪೊಲೀಸ್ ಇಲಾಖೆ ಸತ್ತಿದೆ. ಗೃಹ ಸಚಿವರಿಗೆ ಒಬ್ಬ ಕಾನ್ಸ್‌ಟೆಬಲ್ ಮೇಲೆ ಹಿಡಿತ ಸಾಧಿಸಲು ಸಾಧ್ಯವಾಗುತ್ತಿಲ್ಲ. ಇದೊಂದು ಗೂಂಡಾ ರಾಜ್ಯ~ ಎಂದು ಟೀಕಿಸಿದರು.

`ಮಾಧ್ಯಮಗಳು ಕೇವಲ ಪೊಲೀಸರ ಹೇಳಿಕೆಯನ್ನಾಧರಿಸಿ ಉತ್ಪ್ರೇಕ್ಷೆ ಮಾಡುವ ರೀತಿಯಲ್ಲಿ ವರದಿಗಳನ್ನು ಪ್ರಕಟಿಸಿವೆ. ಒಂದು ರೀತಿಯಲ್ಲಿ ಪೊಲೀಸರು ಹಾಗೂ ಮಾಧ್ಯಮಗಳು ನಮ್ಮ ಆತ್ಮಸಾಕ್ಷಿಯನ್ನು ಕೆಣಕಿವೆ. ನಾವು ಶಾಂತ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಒಂದು ವೇಳೆ ಪೊಲೀಸರು ನಮ್ಮ ಮೇಲೆ ಲಾಠಿ ಪ್ರಹಾರ ನಡೆಸಿದರೆ ರಾಜ್ಯದಾದ್ಯಂತ ದೊಡ್ಡ ಆಂದೋಲನವೇ ನಡೆಯಲಿದೆ~ ಎಂದು ಎಚ್ಚರಿಕೆ ನೀಡಿದರು.

`ನಮ್ಮ ಜತೆ ಸರ್ಕಾರ ಮಾತುಕತೆ ನಡೆಸಿದ್ದರೆ ಪ್ರತಿಭಟನೆ ಮಾಡುವ ಅಗತ್ಯವೇ ಇರಲಿಲ್ಲ. ಆದರೆ, ಸರ್ಕಾರ ಉದ್ಧಟತನ ಪ್ರದರ್ಶಿಸಿದೆ. ಇದರಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾದರೆ ಅದಕ್ಕೆ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ~ ಎಂದರು.

ರಾಜ್ಯಪಾಲರ ಬಳಿ ನಿಯೋಗ: ಆನಂತರ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಕೆ.ಎನ್. ಸುಬ್ಬಾರೆಡ್ಡಿ ನೇತೃತ್ವದಲ್ಲಿ ವಕೀಲರ ನಿಯೋಗ ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ತೆರಳಿತು. ಪೊಲೀಸರ ಬಿಗಿ ಭದ್ರತೆಯಲ್ಲಿ 15 ಮಂದಿ ವಕೀಲರಿಗೆ ಮಾತ್ರ ಒಳಗೆ ಹೋಗಲು ಅನುಮತಿ ನೀಡಲಾಗಿತ್ತು. ಸುಮಾರು ಅರ್ಧ ಗಂಟೆ ಕಾಲ ವಕೀಲರು ರಾಜ್ಯಪಾಲರ ಜೊತೆ ಮಾತುಕತೆ ನಡೆಸಿದರು. ಈ ಪ್ರಕರಣದಲ್ಲಿ ರಾಜ್ಯಪಾಲರು ಮಧ್ಯೆ ಪ್ರವೇಶಿಸಿ ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಲು ಅಧಿಕಾರಿಗಳಿಗೆ ಆದೇಶಿಸುವಂತೆ ಕೋರಿದ್ದ ಮನವಿಪತ್ರ ನೀಡಲಾಯಿತು.

ಅಲ್ಲಿಂದ ವಾಪಸಾದ ನಂತರ ಮಾತನಾಡಿದ ಸುಬ್ಬಾರೆಡ್ಡಿ, `ರಾಜ್ಯಪಾಲರು ಘಟನೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದರು. ಸರ್ಕಾರದಿಂದ ಕೂಡಲೇ ವರದಿ ತರಿಸಿಕೊಂಡು ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಹೀಗಾಗಿ, ತಾತ್ಕಾಲಿಕವಾಗಿ ಪ್ರತಿಭಟನೆ ನಿಲ್ಲಿಸೋಣ. ಸರ್ಕಾರದ ಮುಂದಿನ ಕ್ರಮ ಆಧರಿಸಿ ಹೋರಾಟ ನಡೆಸುವ ಕುರಿತು ನಿರ್ಧಾರ ಕೈಗೊಳ್ಳೋಣ~ ಎಂದು ಹೇಳಿದರು.

`ಬೆಂಗಳೂರಿನಲ್ಲಿ ನಮ್ಮ ಶಕ್ತಿ ಪ್ರದರ್ಶನ ಮಾಡಿದ್ದೇವೆ. ಹೀಗಾಗಿ, ನಮ್ಮ ಸ್ವಾಭಿಮಾನದ ಸಂಕೇತವಾಗಿ ನಡೆಸಿದ ಹೋರಾಟ ಯಶಸ್ವಿಯಾಗಿದೆ ಎಂದು ಭಾವಿಸೋಣ~ ಎಂದು ಸಂಘದ ಪ್ರಧಾನ ಕಾರ್ಯದರ್ಶಿ ಎ.ಪಿ.ರಂಗನಾಥ್ ಹೇಳಿದರು. ಕೊನೆಗೆ, ಮಧ್ಯಾಹ್ನ 1.50ರ ವೇಳೆಗೆ ವಕೀಲರು ಪ್ರತಿಭಟನೆ ಹಿಂತೆಗೆದುಕೊಂಡರು.

ಇಷ್ಟಾದರೂ ಸರ್ಕಾರದ ಪರವಾಗಿ ಯಾವುದೇ ಸಚಿವರು ಅಥವಾ ಹಿರಿಯ ಪೊಲೀಸ್ ಅಧಿಕಾರಿಗಳು ವಕೀಲರಿಂದ ಮನವಿ ಸ್ವೀಕರಿಸಲು ಸ್ಥಳಕ್ಕೆ ಧಾವಿಸಲಿಲ್ಲ ಎಂದು  ಆಕ್ರೋಶ ವ್ಯಕ್ತಪಡಿಸಿದ ವಕೀಲರು, ರಾಜಕಾರಣಿಗಳ ಪರವಾಗಿ ವಾದ ಮಂಡಿಸುವ ವಕೀಲರು, ತಮ್ಮ ವಕಾಲತ್ತನ್ನು ಹಿಂದಕ್ಕೆ ಪಡೆದುಕೊಳ್ಳಬೇಕು ಎಂದು ಘೋಷಣೆ ಮಾಡತೊಡಗಿದರು.

ಬಿಗಿ ಪೊಲೀಸ್ ಬಂದೋಬಸ್ತ್: ಮಂಗಳವಾರದ ಘಟನೆಯಿಂದ ಪಾಠ ಕಲಿತಂತಿದ್ದ ಪೊಲೀಸ್ ಇಲಾಖೆಯು ಗುರುವಾರ ಇನ್ನಷ್ಟು ಹೆಚ್ಚಿನ ಭದ್ರತೆ ಒದಗಿಸಿತ್ತು. ಸುಮಾರು 1,500 ಮಂದಿ ಪೊಲೀಸ್ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಹದಿನೈದಕ್ಕೂ ಅಧಿಕ ಕೆಎಸ್‌ಆರ್‌ಪಿ ತುಕಡಿಗಳನ್ನೂ ಬಳಸಿಕೊಳ್ಳಲಾಗಿತ್ತು. ಸಿಟಿ ಸಿವಿಲ್ ಕೋರ್ಟ್, ಮೈಸೂರು ಬ್ಯಾಂಕ್ ವೃತ್ತ, ಮಹಾರಾಣಿ ಕಾಲೇಜು ವೃತ್ತ, ಸಿಐಡಿ ವೃತ್ತದ ಬಳಿ ಭದ್ರತೆಗಾಗಿ ಹೆಚ್ಚಿನ ಸಿಬ್ಬಂದಿಯನ್ನು ನಿಯೋಜಿಸುವ ಮೂಲಕ ಎಂತಹುದೇ ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಸಜ್ಜಾಗಿತ್ತು.

ನಟ ವಿಷ್ಣುವರ್ಧನ್ ನಿಧನದ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಲು ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ಬಳಸಿಕೊಳ್ಳಲಾಗಿತ್ತು. ಬಹುಶಃ ಆನಂತರ ಭದ್ರತೆಗಾಗಿ ಅಧಿಕ ಸಂಖ್ಯೆಯ ಪೊಲೀಸ್ ಸಿಬ್ಬಂದಿಯನ್ನು ಬಳಸಿಕೊಂಡಿದ್ದು ಇದೇ ಮೊದಲು. ಪ್ರತಿಭಟನೆಯಿಂದ ಅಂಬೇಡ್ಕರ್ ರಸ್ತೆ, ಅರಮನೆ ರಸ್ತೆ, ಶೇಷಾದ್ರಿ ರಸ್ತೆ ಹಾಗೂ ಬಸವೇಶ್ವರ ವೃತ್ತದಲ್ಲಿ ವಾಹನ ಸಂಚಾರ ಅಸ್ತವ್ಯಸ್ತಗೊಂಡಿತು.
 

ಉನ್ನತ ಮಟ್ಟದ ತನಿಖೆ- ಸುರೇಶ್ ಕುಮಾರ್
ವಕೀಲ ಬಾಲಕೃಷ್ಣ ಅವರ ಮೇಲೆ `ಪೊಲೀಸ್ ದೌರ್ಜನ್ಯ~ ನಡೆದಿದೆ ಎನ್ನಲಾದ ಪ್ರಕರಣದ ಬಗ್ಗೆ ಉನ್ನತ ಮಟ್ಟದ ತನಿಖೆಗೆ ಆದೇಶಿಸಲಾಗುವುದು ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದ್ದಾರೆ.

ಬಾಲಕೃಷ್ಣ ಅವರ ಮನೆಗೆ ಗುರುವಾರ ಭೇಟಿ ನೀಡಿ ಸಾಂತ್ವನ ಹೇಳಿದ ಅವರು, ಶನಿವಾರ ತ್ಯಾಗರಾಜನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಘಟನೆಯ ವಿವರಗಳನ್ನು ಪಡೆದುಕೊಂಡರು.

`ಒಂದು ಸಣ್ಣ ಘಟನೆ ಇಷ್ಟು ದೊಡ್ಡದಾಗಿ ಬೆಳೆದದ್ದು ವಿಷಾದನೀಯ. ಈ ಘಟನೆ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವುದು ಅಗತ್ಯ ಎಂಬುದನ್ನು ಮನಗಂಡಿದ್ದೇನೆ. ಈ ಸಂಬಂಧ ಸೂಕ್ತ ಆದೇಶ ಹೊರಡಿಸಲಾಗುವುದು. ಎರಡೂ ಕಡೆಯವರ ಅಭಿಪ್ರಾಯವನ್ನು ಸಂಗ್ರಹಿಸಿ ಗೊಂದಲಕ್ಕೆ ತೆರೆ ಎಳೆಯಲಾಗುವುದು~ ಎಂದು ಸಚಿವರು ಹೇಳಿದರು.

`ಪ್ರತಿಭಟನೆ ಮಾಡುವ ಹಕ್ಕು ಪ್ರತಿಯೊಬ್ಬರಿಗೂ ಇದೆ. ಆದರೆ ಸಾರ್ವಜನಿಕರಿಗೆ ತೊಂದರೆ ಆಗದಂತೆ ಇಂತಹ ಪ್ರತಿಭಟನೆಗಳನ್ನು ಹಮ್ಮಿಕೊಳ್ಳಬೇಕು. ಇಂತಹ ಪ್ರಕರಣಗಳು ವೈಯಕ್ತಿಕ ಪ್ರತಿಷ್ಠೆಯ ವಿಷಯಗಳಾಗಿ ಪರಿವರ್ತನೆಯಾಗಬಾರದು. ಬಹಳ ಮುಖ್ಯವಾಗಿ ಸಾರ್ವಜನಿಕರಿಗೆ ತೊಂದರೆಯಾಗುವಂತಹ ಯಾವುದೇ ಹೆಜ್ಜೆಯನ್ನು ಇಡುವುದು ಸೂಕ್ತವಲ್ಲ. ಇದು ಗುಂಪುಗಳ ನಡುವಿನ ಸಂಘರ್ಷವಾಗಿ ಪರಿವರ್ತನೆಯಾಗಿ ಶಾಂತಿ ಮತ್ತು ಸುವ್ಯವಸ್ಥೆಗೆ ಭಂಗ ತರುವುದು ಆರೋಗ್ಯಕರವಾದ ಬೆಳವಣಿಗೆಯಲ್ಲ~ ಎಂದರು.

`ಈ ಸಮಸ್ಯೆಗೆ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರ ಜೊತೆ ಚರ್ಚೆ ಮಾಡುತ್ತೇನೆ. ಆನಂತರ ಸೂಕ್ತ ನಿರ್ಧಾರ ಕೈಗೊಳ್ಳುತ್ತೇನೆ~ ಎಂದು ಸಚಿವರು ತಿಳಿಸಿದ್ದಾರೆ. ವಕೀಲರಿಂದ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪೊಲೀಸ್ ಪೇದೆ ಅರುಣ್ ಅವರನ್ನೂ ಸಚಿವರು ಬುಧವಾರ ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
 

ADVERTISEMENT

`ಜೀವ ಹೋದರೆ ಗತಿ...?~

`ಈ ಕೇಸು ಸಿಗದಿದ್ರೆ ಬೇರೆ ಕೇಸು ಸಿಗುತ್ತೆ. ಆದ್ರೆ ಇರೋ ಒಂದು ಜೀವ ಹೋದ್ರೆ ಮತ್ತೆ ಬರುತ್ತಾ ಹೇಳಿ..?~
- ಇದು ಮುಷ್ಕರ ವಿರೋಧಿ ವಕೀಲರೊಬ್ಬರು ಹೇಳಿದ ಮಾತು. ಮುಷ್ಕರದಲ್ಲಿ ಭಾಗವಹಿಸದಿದ್ದರೂ ಕೋರ್ಟ್ ಕಲಾಪಕ್ಕೂ ಹಾಜರಾಗದ ಔಚಿತ್ಯ ಪ್ರಶ್ನಿಸಿದಾಗ ಆ ವಕೀಲರಿಂದ ಬಂದ ಉತ್ತರ ಇದು.

`ಈ ರೀತಿ ಮುಷ್ಕರ ಮಾಡುತ್ತಿರುವುದು ಸರಿಯಲ್ಲ ಅನ್ನೋದು ನನ್ನ ಹಾಗೂ ನನ್ನ ಹಿರಿಯ ವಕೀಲರ ಅಭಿಪ್ರಾಯ. ಆದರೆ ಕಲಾಪದಲ್ಲಿ ಭಾಗವಹಿಸಿರುವುದು ಮುಷ್ಕರ ನಿರತ ವಕೀಲರಿಗೆ ತಿಳಿದು ಬಿಟ್ಟರೆ ನಮ್ಮ ಗತಿ ಅಷ್ಟೇ. ಅದಕ್ಕೇ ವಿಚಾರಣೆ ಮುಂದೂಡಿ ಎಂದು ನ್ಯಾಯಮೂರ್ತಿಗಳನ್ನು ಕೋರಿಕೊಳ್ಳಲು ಹಿರಿಯ ವಕೀಲರು ಹೇಳಿ ಕಳಿಸಿದ್ದಾರೆ. ಅದಕ್ಕೆ ಬಂದಿದ್ದೇನೆ ಅಷ್ಟೇ~ ಎಂದು ಹೆಸರನ್ನು ಹೇಳಲು ಕೂಡ ಬೆದರಿದ ಆ ವಕೀಲರು ಅಭಿಪ್ರಾಯಪಟ್ಟರು.
 

ಮುಷ್ಕರದಿಂದಲೂ `ಕಾಸು~!
ವಕೀಲರು ನ್ಯಾಯಾಂಗ ಕಲಾಪಕ್ಕೆ ಹಾಜರು ಆಗದ ಸಂದರ್ಭಗಳಲ್ಲಿ ಕೆಲವು ನ್ಯಾಯಮೂರ್ತಿಗಳು, `ವಕೀಲರು ಗೈರಾಗಿದ್ದರಿಂದ ಅರ್ಜಿ ವಜಾ ಮಾಡಲಾಗಿದೆ~ ಎಂದು ಆದೇಶ ಹೊರಡಿಸುತ್ತಾರೆ. ಅಂತಹ ಸಂದರ್ಭದಲ್ಲಿ ಕಕ್ಷಿದಾರರು ಪುನಃ ಅರ್ಜಿಯ ವಿಚಾರಣೆ ನಡೆಸುವಂತೆ ಕೋರಿ ಮನವಿ (ರೀ-ಕಾಲಿಂಗ್ ಅಪ್ಲಿಕೇಷನ್) ಹಾಕುವುದು ರೂಢಿ. ಗುರುವಾರದ ಪ್ರತಿಭಟನೆಯಿಂದ ಹೈಕೋರ್ಟ್, ಕೆಲವು ಅರ್ಜಿ ವಜಾಗೊಳಿಸಿದೆ. ಆದರೆ ವಕೀಲರು ಮಾಡಿದ ತಪ್ಪಿನಿಂದಾಗಿ ಕಕ್ಷಿದಾರರು `ರೀ-ಕಾಲಿಂಗ್ ಅಪ್ಲಿಕೇಷನ್~ ಹಾಕಬೇಕಾಗುತ್ತದೆ. ಇದಕ್ಕಾಗಿ ವಕೀಲರು ಪಡೆದುಕೊಳ್ಳುವ ಶುಲ್ಕ ಕನಿಷ್ಠ ಐದು ಸಾವಿರ ರೂಪಾಯಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.