ಬೆಂಗಳೂರು: ‘ಕುಟುಕು ಕಾರ್ಯಾಚರಣೆ ನೆಪದಲ್ಲಿ ಲಂಚ ನೀಡಲು ಬಂದಿದ್ದ ಟಿ.ವಿ.9 ವಾಹಿನಿಯ ವರದಿಗಾರರ ಮೇಲೆ ನಮ್ಮ ಬೆಂಬಲಿಗರು ದೌರ್ಜನ್ಯ ನಡೆಸಿಲ್ಲ. ಈ ಬಗ್ಗೆ ಉದ್ದೇಶಪೂರ್ವಕವಾಗಿ ಸುಳ್ಳು ಮಾಹಿತಿ ಪ್ರಸಾರ ಮಾಡಿ ನನ್ನ ಗೌರವಕ್ಕೆ ಧಕ್ಕೆ ತರುವ ಯತ್ನ ನಡೆಯುತ್ತಿದೆ’ ಎಂದು ಸಚಿವ ಡಿ.ಕೆ.ಶಿವಕುಮಾರ್ ಆರೋಪಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ವರದಿಗಾರರ ಬಂಧನದ ನಂತರ ಟಿ.ವಿ.9 ಸುದ್ದಿ ವಾಹಿನಿ ನನ್ನ ವಿರುದ್ಧ ದಿನಕ್ಕೊಂದು ಬಣ್ಣ ಕಟ್ಟಿ ವರದಿ ಪ್ರಸಾರ ಮಾಡುತ್ತಿದೆ. ಮೊದಲ ದಿನ ಕುಟುಕು ಕಾರ್ಯಾಚರಣೆಗೆ ಸೀಮಿತವಾಗಿದ್ದ ಕಾರ್ಯಕ್ರಮ, ಎರಡನೇ ದಿನ ಮಹಿಳೆ ಮೇಲೆ ಡಿಕೆಶಿ ಬೆಂಬಲಿಗರಿಂದ ಹಲ್ಲೆ ಎಂದು ಪ್ರಸಾರವಾಯಿತು. ಇದೀಗ ಪತ್ರಿಕಾ ಸ್ವಾತಂತ್ರ್ಯದ ಹರಣ ಎಂದು ಬಿಂಬಿಸಲಾಗುತ್ತಿದೆ. ಮಫ್ತಿಯಲ್ಲಿದ್ದ 10 ಮಂದಿಯ ಪೊಲೀಸ್ ತಂಡವೇ ಆ ವರದಿಗಾರರಿಬ್ಬರನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದೆ. ಪೊಲೀಸರ ಸಮ್ಮುಖದಲ್ಲಿ ಅವರ ಮೇಲೆ ಹಲ್ಲೆ ನಡೆಸುವುದು ಸಾಧ್ಯವೇ’ ಎಂದು ಪ್ರಶ್ನಿಸಿದರು.
‘ವಿರೋಧ ಪಕ್ಷಗಳ ಜತೆ ಸೇರಿಕೊಂಡ ಒಂದು ಮಾಧ್ಯಮ ಸಂಸ್ಥೆ, ನನ್ನ ರಾಜಕೀಯ ಜೀವನವನ್ನು ಮುಗಿಸಲು ಪ್ರಯತ್ನ ನಡೆಸುತ್ತಿದೆ. ಇಂತಹ ವರದಿಗಳನ್ನು ಪ್ರಸಾರ ಮಾಡದಂತೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದೇನೆ’ ಎಂದರು.
‘ವರದಿಗಾರರ ವಿರುದ್ಧ ನೀಡಿರುವ ದೂರನ್ನು ಹಿಂದೆ ಪಡೆಯಲು ಹಲವು ಬೆದರಿಕೆ ಕರೆಗಳು ಬಂದಿವೆ. ತನ್ನ ತಪ್ಪನ್ನು ತಿದ್ದಿಕೊಳ್ಳಬೇಕಿದ್ದ ಸಂಸ್ಥೆ, ರಾಜ್ಯದಾದ್ಯಂತ ಜನಕಟ್ಟಿಕೊಂಡು ನನ್ನ ವಿರುದ್ಧ ಪ್ರತಿಭಟನೆ ಮಾಡಿಸುತ್ತಿದೆ’ ಎಂದರು.
ಶ್ರೇಯಸ್ ಮತ್ತು ಶ್ವೇತಾ ಎಂಬ ವರದಿಗಾರರು ಎನರ್ಗೊ ಪವರ್ ಕಂಪೆನಿ ನೌಕರರ ಸೋಗಿನಲ್ಲಿ ಮಾ.10ರಂದು ಮನೆಗೆ ಬಂದು ಕಡತವೊಂದಕ್ಕೆ ಒಪ್ಪಿಗೆ ನೀಡುವಂತೆ ಲಂಚದ ಆಮಿಷ ಒಡ್ಡಿದ್ದರು ಎಂದು ಆರೋಪಿಸಿ ಶಿವಕುಮಾರ್ ಸದಾಶಿವನಗರ ಠಾಣೆಗೆ ದೂರು ಕೊಟ್ಟಿದ್ದರು. ದೂರಿನ ಅನ್ವಯ ಪೊಲೀಸರು ಆ ವರದಿಗಾರರನ್ನು ಬಂಧಿಸಿದ್ದರು.
ಆ ವರದಿಗಾರರು ನಿಮ್ಮ ವಿರುದ್ಧ ಪ್ರತಿದೂರು ಕೊಡಲು ಹೋದಾಗ ಪ್ರಕರಣ ದಾಖಲಿಸಲು ಪೊಲೀಸರು ವಿಳಂಬ ಮಾಡಿದ್ದೇಕೆ ಎಂಬ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ‘ಆ ವಿಚಾರ ನನಗೆ ಗೊತ್ತಿಲ್ಲ. ಪೊಲೀಸರನ್ನು ವಿಚಾರಿಸಿ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.