
ಧಾರವಾಡ: ವಾಟ್ಸ್‌ಆ್ಯಪ್ ಮಾಯೆ ಧಾರವಾಡ ಸಾಹಿತ್ಯ ಸಂಭ್ರಮವನ್ನೂ ಬಿಟ್ಟಿಲ್ಲ. ಸಂಭ್ರಮದಲ್ಲಿ ಭಾಗವಹಿಸಿದ್ದ ಪ್ರತಿನಿಧಿಗಳು ವಿವಿಧ ಗೋಷ್ಠಿಗಳ ಚಿತ್ರ, ವಿಡಿಯೊಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ವಾಟ್ಸ್‌ಆ್ಯಪ್ ಮೂಲಕ ಕಳಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.
ಮೂರು ದಿನಗಳೂ ತಮಗೆ ಇಷ್ಟವಾದ ಕಾರ್ಯಕ್ರಮಗಳಲ್ಲಿ ತಮ್ಮ ಮುಂದಿನ ಆಸನದ ಮೇಲೆ ಕೈಯಿಟ್ಟುಕೊಂಡು ಮೊಬೈಲ್ ಮೂಲಕ ವೇದಿಕೆಯ ದೃಶ್ಯವನ್ನು ಸೆರೆಹಿಡಿಯುತ್ತಿದ್ದದ್ದು ನಡೆದೇ ಇತ್ತು. ನಂತರ ಅದನ್ನು ವಾಟ್ಸ್‌ಆ್ಯಪ್ ಮೂಲಕ ತಮ್ಮ ಸ್ನೇಹಿತರಿಗೆ ಕಳುಹಿಸುತ್ತಿದ್ದರು. ಗಂಭೀರ ವಿಚಾರ ಗೋಷ್ಠಿಗಳಿಗಿಂತ, ಸಂಜೆಯ ಸಂಗೀತ ಕಾರ್ಯಕ್ರಮ, ಮಧ್ಯಾಹ್ನದ ಲಾವಣಿ ಕಾರ್ಯಕ್ರಮ, ಕವಿಗೋಷ್ಠಿಗಳೇ ಹೆಚ್ಚಾಗಿ ವಾಟ್ಸ್‌ಆ್ಯಪ್ ಪ್ರಿಯರ ಆಹಾರವಾಗಿತ್ತು.
ಹಾಗೆಯೇ ತಮ್ಮ ಇಷ್ಟದ ಸಾಹಿತಿಗಳು, ಕಲಾವಿದರು ವೇದಿಕೆಯ ಮೇಲೆ ಬಂದಾಗ ಅವರ ಮಾತನ್ನು ರೆಕಾರ್ಡ್ ಮಾಡಿಕೊಂಡು ಕಳುಹಿಸುತ್ತಿದ್ದರು ಹಲವರು. ಊಟದ ವಿರಾಮ, ಚಹಾ ವಿರಾಮ ಸಂದರ್ಧಗಳಲ್ಲಿ ಲೇಖಕರ ಜತೆ ಸೆಲ್ಫಿ ತೆಗೆದುಕೊಂಡು ಅದನ್ನು ವಾಟ್ಸ್‌ಆ್ಯಪ್‌ನಲ್ಲಿ ಬೇರೆಯವರಿಗೆ ಕಳಿಸಿಕೊಡುವ ದೃಶ್ಯವೂ ಸಾಮಾನ್ಯವಾಗಿತ್ತು.
ಮೂರನೇ ದಿನ ನಟ ಅನಂತನಾಗ್, ಎಂ.ಎಸ್.ಸತ್ಯು ಮತ್ತು ಜಯಂತ ಕಾಯ್ಕಿಣಿ ಭಾಗವಹಿಸಿದ್ದ ‘ಚಲನಚಿತ್ರ ಮಾಧ್ಯಮದ ಚಲನಶೀಲತೆ’ ಎಂಬ ಗೋಷ್ಠಿಯಲ್ಲಿಯಂತೂ ಸಭಾಂಗಣದ ಹಲವಾರು ಆಸನದ ಮುಂದೆ ಕಣ್ತೆರೆದುಕೊಂಡಿದ್ದ ಮೊಬೈಲು ಫೋನ್‌ಗಳು ವೇದಿಕೆಯತ್ತ ದೃಷ್ಟಿ ನೆಟ್ಟಿದ್ದವು.
ಒಟ್ಟಾರೆ ಹೊಸ ಮಾಧ್ಯಮ ವಾಟ್ಸ್‌ಆ್ಯಪ್ ಸಾಹಿತ್ಯ ಪ್ರೀತಿಯನ್ನು ಹರಡುವಲ್ಲಿಯೂ ತನ್ನ ಪಾತ್ರವನ್ನು ನಿರ್ವಹಿಸುತ್ತದೆ ಎನ್ನುವುದಕ್ಕೆ ಸಾಹಿತ್ಯ ಸಂಭ್ರಮವೂ ಒಂದು ನಿದರ್ಶನವಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.