ಮೈಸೂರು: ವಿವಿಧ ವಾದಗಳಿಗೆ ಕಟ್ಟುಬಿದ್ದಿರುವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಮುಕ್ತ ಮನಸ್ಸಿನಿಂದ ಬೋಧನೆ ಮಾಡುತ್ತಿಲ್ಲ ಎಂದು ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಬೇಸರ ವ್ಯಕ್ತಪಡಿಸಿದರು.
‘ಅರವಿಂದ ಇಂಡಿಯಾ ಪಬ್ಲಿಷಿಂಗ್ ಹೌಸ್’ ಹೊರತಂದಿರುವ ಕರ್ಣಂ ಪವನ್ ಪ್ರಸಾದ್ ಅವರ ‘ಕರ್ಮ’ ಕೃತಿಯನ್ನು ಕುವೆಂಪುನಗರದ ಉದಯರವಿ ರಸ್ತೆಯಲ್ಲಿರುವ ತಮ್ಮ ನಿವಾಸದಲ್ಲಿ ಗುರುವಾರ ಬಿಡುಗಡೆ ಮಾಡಿ ಅವರು ಮಾತನಾಡಿದರು.
ಚಿಕ್ಕ ವಯಸ್ಸಿಗೆ ವಿದೇಶಕ್ಕೆ ತೆರಳುವ ಐಟಿ ಮತ್ತು ಬಿಟಿ ಸಿಬ್ಬಂದಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಿಗಿಂತ ಹೆಚ್ಚು ಅನುಭವ ಹೊಂದಿರುತ್ತಾರೆ. ಹೊಸದನ್ನು ಅರಿಯಬೇಕು ಎಂಬ ಮುಕ್ತ ಮನಸು ಯುವಕರ ಕೈಹಿಡಿಯುತ್ತಿದೆ. ಸಾಹಿತ್ಯದ ಕುರಿತು ಅಷ್ಟೇ ಪ್ರಬುದ್ಧವಾದ ವಿಮರ್ಶೆ ಮಂಡಿಸುವ ಸಾಮರ್ಥ್ಯ ಅವರಿಗೆ ಇದೆ. ಆದರೆ, ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ಜಾತಿ ಸೇರಿದಂತೆ ಇತರ ವಾದಗಳಲ್ಲಿ ಮುಳುಗಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡದ ಕೃತಿ ರಚನಾಕಾರರಲ್ಲಿ ಅಧ್ಯಯನಶೀಲತೆಯ ಕೊರತೆ ಇದೆ. ಮೌಲ್ಯ ಶೋಧಿಸಿ ಕೃತಿ ರಚನೆಗೆ ಮುಂದಾಗುವವರ ಸಂಖ್ಯೆ ವಿರಳ. ಆದರೆ, ಸ್ತ್ರೀವಾದ, ಮಾರ್ಕ್ಸ್‌ವಾದಗಳಿಗೆ ಯುವ ಲೇಖಕರು ಸೀಮಿತವಾಗುತ್ತಿದ್ದಾರೆ. ಕೆಲ ಪ್ರಾಧ್ಯಾಪಕರು ಎಲ್ಲ ವಾದಗಳನ್ನು ಅಧ್ಯಯನ ಮಾಡಲು ವಿದ್ಯಾರ್ಥಿಗಳಿಗೆ ಅವಕಾಶ ನೀಡುತ್ತಿಲ್ಲ. ಎಲ್ಲ ವಾದಗಳನ್ನು ತಿಳಿದು ಕೃತಿ ರಚನೆ ಆರಂಭಿಸಿದರೆ ಒಳಿತು ಎಂದು ಸಲಹೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.