ADVERTISEMENT

ವಿದ್ಯುತ್ ಖರೀದಿಗೆ ತರಾತುರಿ

ಎಂಟು ತಿಂಗಳ ಮೊದಲೇ ಸರ್ಕಾರದಿಂದ ಟೆಂಡರ್ ಆಹ್ವಾನ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2012, 19:59 IST
Last Updated 29 ಡಿಸೆಂಬರ್ 2012, 19:59 IST
ವಿದ್ಯುತ್ ಖರೀದಿಗೆ ತರಾತುರಿ
ವಿದ್ಯುತ್ ಖರೀದಿಗೆ ತರಾತುರಿ   

ಬೆಂಗಳೂರು: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವಾಗಲೇ, 2013ರ ಆಗಸ್ಟ್‌ನಿಂದ ಅನ್ವಯವಾಗುವಂತೆ ಎರಡು ವರ್ಷ ಕಾಲ ನಿತ್ಯ 1,500 ಮೆಗಾವಾಟ್ ವಿದ್ಯುತ್ ಖರೀದಿಸಲು ರಾಜ್ಯ ಸರ್ಕಾರ ಈಗಲೇ ಟೆಂಡರ್ ಕರೆದಿರುವುದು ಇಂಧನ ಇಲಾಖೆಯಲ್ಲೇ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.

2013 ಆಗಸ್ಟ್ 1ರಿಂದ 2015ರ ಜೂನ್ 30ರವರೆಗೆ ವಿದ್ಯುತ್ ಖರೀದಿಸಲು ಸರ್ಕಾರ ಡಿ. 5ರಂದೇ ಟೆಂಡರ್ ಕರೆದಿದೆ. ಜನವರಿ 2ರವರೆಗೂ ಟೆಂಡರ್‌ನಲ್ಲಿ ಭಾಗವಹಿಸಲು ಅವಕಾಶವಿದೆ. ಹೊಸ ವರ್ಷದ ಮೊದಲ ವಾರದಲ್ಲೇ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಳ್ಳುವ ಸಾಧ್ಯತೆ ಇದೆ.

`ಬಿಜೆಪಿ ಸರ್ಕಾರದ ಅವಧಿ ಮೇ ಅಂತ್ಯದವರೆಗೆ ಇದೆ. ಆದರೆ, ರಾಜಕೀಯ ವಿದ್ಯಮಾನಗಳು ತೀವ್ರಗತಿಯಲ್ಲಿ ಬದಲಾಗುತ್ತಿವೆ. ಹೀಗಿರುವಾಗ ಮುಂಬರುವ ಆಗಸ್ಟ್‌ನಿಂದ ಎರಡು ವರ್ಷಗಳ ಅವಧಿಗೆ ವಿದ್ಯುತ್ ಖರೀದಿಸಲು ಈಗಲೇ ಟೆಂಡರ್ ಕರೆಯುವ ಅಗತ್ಯವಿತ್ತೇ' ಎಂದು ಇಂಧನ ಇಲಾಖೆ ಅಧಿಕಾರಿಗಳೇ ಪ್ರಶ್ನಿಸುತ್ತಿದ್ದಾರೆ.

`ಮುಂದಿನ ವರ್ಷ ವಿದ್ಯುತ್ ಖರೀದಿ ಮಾಡುವ ಅಗತ್ಯ ಇದೆಯೇ? ಇದ್ದರೆ ಎಷ್ಟು ಪ್ರಮಾಣದಲ್ಲಿ ಖರೀದಿಸಬೇಕು ಎಂಬುದನ್ನು ಈಗಲೇ ನಿಖರವಾಗಿ ಹೇಳುವುದು ಕಷ್ಟ. ಬರುವ ವರ್ಷ ಉತ್ತಮ ಮಳೆಯಾಗಿ ಜಲಾಶಯಗಳು ಭರ್ತಿಯಾದರೆ, ನಿರಂತರವಾಗಿ ಎರಡು ವರ್ಷ ವಿದ್ಯುತ್ ಖರೀದಿಸಬೇಕಾದ ಸಂದರ್ಭ ಬಾರದೆ ಇರಬಹುದು' ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ'ಗೆ ತಿಳಿಸಿದರು.

ರಾಜ್ಯದಲ್ಲಿ ವಿದ್ಯುತ್ ಕೊರತೆ ಇರುವ ಹಿನ್ನೆಲೆಯಲ್ಲಿ ನಾಲ್ಕೂವರೆ ವರ್ಷಗಳಿಂದ ಬಹುತೇಕ ನಿರಂತರವಾಗಿ ವಿದ್ಯುತ್  ಖರೀದಿ ಮಾಡಿದ್ದು, ಇದಕ್ಕಾಗಿ 10 ಸಾವಿರ ಕೋಟಿ ರೂಪಾಯಿಗೂ ಅಧಿಕ ವೆಚ್ಚವಾಗಿದೆ. ಈಗಲೂ ನಿತ್ಯ 1,280 ಮೆಗಾವಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ.

`ಆದರೆ, ಬಳ್ಳಾರಿ ಶಾಖೋತ್ಪನ್ನ ಸ್ಥಾವರದ ಎರಡನೇ ಘಟಕ ಮತ್ತು ಯುಪಿಸಿಎಲ್‌ನ ಎರಡನೇ ಘಟಕ ಈ ವರ್ಷ ಉತ್ಪಾದನೆ ಆರಂಭವಾಗಿರುವುದರಿಂದ ಮುಂದಿನ ವರ್ಷ ವಿದ್ಯುತ್ ಕೊರತೆ ಪ್ರಮಾಣ ಕಡಿಮೆಯಾಗುವ ನಿರೀಕ್ಷೆ ಇದೆ. ಇದರ ಜೊತೆಗೆ ತಮಿಳುನಾಡಿನ ಕೂಡುಂಕುಳಂ ಸ್ಥಾವರದಿಂದ 221 ಮೆಗಾವಾಟ್ ವಿದ್ಯುತ್ ಜನವರಿಯಿಂದ ರಾಜ್ಯಕ್ಕೆ ಲಭ್ಯವಾಗಲಿದೆ. ಅಲ್ಲದೆ ಕೇಂದ್ರದಿಂದ ರಾಜ್ಯಕ್ಕೆ ದೊರೆಯುವ ಪಾಲಿನ ವಿದ್ಯುತ್ ಪ್ರಮಾಣ 1,530 ಮೆಗಾವಾಟ್‌ನಿಂದ 1,836 ಮೆಗಾವಾಟ್‌ಗೆ ಏರಿದೆ. ಒಟ್ಟಾರೆ ಸುಮಾರು 1,700 ಮೆಗಾವಾಟ್ ವಿದ್ಯುತ್ ಹೆಚ್ಚಿಗೆ ಲಭ್ಯವಾಗಲಿದೆ' ಎಂದು ಅವರು ಹೇಳಿದರು.

`ಇದರ ಜೊತೆಗೆ ಜಲಾಶಯಗಳು ಭರ್ತಿಯಾದರೆ ಜಲ ವಿದ್ಯುತ್ ಉತ್ಪಾದನೆ ಜಾಸ್ತಿ ಮಾಡಬಹುದು. ಹೀಗಾಗಿ ಮುಂದಿನ ವರ್ಷದಿಂದ ನಿರಂತರವಾಗಿ ವಿದ್ಯುತ್ ಖರೀದಿ ಮಾಡಬೇಕಾದಂತಹ ಪರಿಸ್ಥಿತಿ ನಿರ್ಮಾಣವಾಗುವುದಿಲ್ಲ. 2013ರ ಮುಂಗಾರು ಹಂಗಾಮಿನಲ್ಲಿ ಬೀಳುವ ಮಳೆಯನ್ನು ಆಧರಿಸಿ, ಅಗತ್ಯಬಿದ್ದರೆ ವಿದ್ಯುತ್ ಖರೀದಿ ಮಾಡುವ ಸಂಬಂಧ ಮುಂದಿನ ಜುಲೈ, ಆಗಸ್ಟ್‌ನಲ್ಲಿ ತೀರ್ಮಾನ ತೆಗೆದುಕೊಳ್ಳಬಹುದಿತ್ತು' ಎನ್ನುವುದು ಅವರ ವಿಶ್ಲೇಷಣೆ.

`ಚುನಾವಣೆ ನಂತರ ಅಧಿಕಾರಕ್ಕೆ ಬರುವ ಸರ್ಕಾರ ಆಗಿನ ಪರಿಸ್ಥಿತಿ ಆಧರಿಸಿ ತೆಗೆದುಕೊಳ್ಳಬೇಕಾದ ತೀರ್ಮಾನವನ್ನು ಈಗಿನ ಸರ್ಕಾರ ತರಾತುರಿಯಲ್ಲಿ ತೆಗೆದುಕೊಂಡಿರುವುದು ಸರಿಯಲ್ಲ. ಈಗ ಟೆಂಡರ್ ಕರೆದಿರುವುದು ಅವೈಜ್ಞಾನಿಕ' ಎಂಬುದು ಕೆಲ ವಿದ್ಯುತ್ ತಜ್ಞರ ಅಭಿಪ್ರಾಯ.

ಸಿದ್ಧತೆ ಅಗತ್ಯ: ಆಗಸ್ಟ್‌ವರೆಗೂ ಸಿದ್ಧತೆ ಮಾಡಿಕೊಳ್ಳಬೇಕಾಗುತ್ತದೆ. ಹೀಗಾಗಿ ಈಗಲೇ ಟೆಂಡರ್ ಕರೆಯಲಾಗಿದೆ. ಬೇಗನೆ ಕರೆಯಲಾಗಿದೆ ಎಂಬುದು ಸರಿಯಲ್ಲ. ಮುಂದಿನ ವರ್ಷ ಮಳೆಯಾದರೂ ವಿದ್ಯುತ್ ಖರೀದಿಯ ಅಗತ್ಯವಿದೆ. ಇದೆಲ್ಲವನ್ನು ಲೆಕ್ಕಾಚಾರ ಮಾಡಿಯೇ ವಿದ್ಯುತ್ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಪವರ್ ಕಾರ್ಪೋರೇಷನ್ ಆಫ್ ಕರ್ನಾಟಕ ಲಿಮಿಟೆಡ್‌ನ (ಪಿಸಿಕೆಎಲ್) ಹಿರಿಯ ಅಧಿಕಾರಿ ಎನ್.ಲಕ್ಷ್ಮಣ್ ಸಮರ್ಥಿಸಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT