ADVERTISEMENT

ವಿಧವೆಯರಿಂದ ಗೃಹ ಪ್ರವೇಶಕ್ಕೆ ಚಾಲನೆ

ಮೌಢ್ಯಾಚರಣೆ ವಿರುದ್ಧ ಜನಜಾಗೃತಿಗೆ ಮುನ್ನುಡಿ

​ಪ್ರಜಾವಾಣಿ ವಾರ್ತೆ
Published 2 ಆಗಸ್ಟ್ 2016, 19:30 IST
Last Updated 2 ಆಗಸ್ಟ್ 2016, 19:30 IST
ಐವರು ವಿಧವೆಯರಿಂದ ದೀಪ ಬೆಳಗಿಸುವ ಮೂಲಕ ಗೃಹಪ್ರವೇಶ ನೆರವೇರಿಸಲಾಯಿತು.
ಐವರು ವಿಧವೆಯರಿಂದ ದೀಪ ಬೆಳಗಿಸುವ ಮೂಲಕ ಗೃಹಪ್ರವೇಶ ನೆರವೇರಿಸಲಾಯಿತು.   

ಮಳವಳ್ಳಿ: ಮಂಗಳವಾರ, ಭೀಮನ ಅಮಾವಸ್ಯೆಯ ಈ ದಿನ ಸಂಪ್ರದಾಯಸ್ಥರು ಸಾಮಾನ್ಯವಾಗಿ ಯಾವುದೇ ಶುಭ ಕಾರ್ಯಗಳನ್ನು ನಡೆಸುವುದಿಲ್ಲ. ಆದರೆ, ತಾಲ್ಲೂಕಿನ ನೆಲಮಾಕನಹಳ್ಳಿಯಲ್ಲಿ ನಿಮಿರ್ಸಿರುವ ‘ಸಂಗಾತಿ ನಿಲಯ’ದ ಗೃಹಪ್ರವೇಶವನ್ನು ನೆರವೇರಿಸಲಾಯಿತು. ಅದರಲ್ಲೂ ಐವರು ವಿಧವೆಯರಿಂದ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದ್ದು ವಿಶೇಷವಾಗಿತ್ತು.

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಘಟಕದ ಅಧ್ಯಕ್ಷೆ ದೇವಿ ಹಾಗೂ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಮುಖಂಡ ಎನ್‌.ಎಲ್‌.ಭರತ್‌ರಾಜ್ ದಂಪತಿ ಅವರ ಮನೆಯ ಗೃಹಪ್ರವೇಶವನ್ನು ವಿನೂತನವಾಗಿ ಆಚರಿಸುವ ಮೂಲಕ ಎಲ್ಲರ ಗಮನ ಸೆಳೆದರು.

ಕಾರ್ಯಕ್ರಮವನ್ನು ನಿಡುಮಾಮಿಡಿ ಮಠದ ವೀರಭದ್ರ ಚನ್ನಮಲ್ಲ ಸ್ವಾಮೀಜಿ ಉದ್ಘಾಟಿಸಿ ಮಾತನಾಡಿ, ಜನಸಾಮಾನ್ಯರಿಗಿಂತ ಸುಶಿಕ್ಷಿತರೆ ಹೆಚ್ಚು ಮೌಢ್ಯ ಆಚರಣೆ ಮಾಡುತ್ತಿದ್ದಾರೆ. ಗೃಹಪ್ರವೇಶವನ್ನು ಅಮಾವಾಸ್ಯೆ ದಿನ ಐವರು ವಿಧವೆಯರಿಂದ ದೀಪ ಬೆಳಗಿಸಿ ನೆರವೇರಿಸಿರುವುದು ಶ್ಲಾಘನೀಯ.

ಇದು ಕೆಲವರಲ್ಲಿ ಆತಂಕ, ಕುತೂಹಲ ಮೂಡಿಸಿದೆ ಎಂದರು. ಹೆಣ್ಣಿಗೆ ಮದುವೆಯಾಗುವ ಮೊದಲು ಹೂವು, ಬಳೆ, ಕುಂಕುಮ ಅಲಂಕಾರಿಕ ವಸ್ತುಗಳಾಗಿರುತ್ತವೆ. ಆದರೆ, ಮದುವೆಯಾಗಿ ಗಂಡ ಸತ್ತರೆ ಎಲ್ಲವನ್ನು ತ್ಯಜಿಸಬೇಕು. ವಿಧವೆಯನ್ನು ಅಪವಿತ್ರಳೆಂದು ಭಾವಿಸಲಾಗುತ್ತದೆ. 

ಇದು ಸರಿಯಲ್ಲ. ಇಂತಹ ವಿಷಯಗಳ ಬಗ್ಗೆ ಹೆಚ್ಚಿನ ಚರ್ಚೆ ನಡೆಯಬೇಕಿದೆ. ಪತಿ ಮರಣದ ಬಳಿಕ ಪತ್ನಿ ತಾಳಿ ತೆಗೆಯಬಾರದು ಎಂದು ಅವರು ಹೇಳಿದರು. ವಿಜ್ಞಾನಿ ಜಿ.ಎನ್.ನಾಗರಾಜು ‘ಮೌಢ್ಯಾಚರಣೆ ಮತ್ತು ಜನಸಾಮಾನ್ಯರು’ ಕುರಿತು ವಿಷಯ ಮಂಡನೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.