ಬೆಂಗಳೂರು: ವಿಧಾನಸೌಧದ ಕೆಂಗಲ್ ಹನುಮಂತಯ್ಯ ಪ್ರವೇಶ ದ್ವಾರದಲ್ಲಿ ಗುರುವಾರ ಬೆಳಿಗ್ಗೆ ಜೇನು ನೊಣಗಳು ಹಲವರನ್ನು ಕಚ್ಚಿ ಗಾಯಗೊಳಿಸಿದವು. ಅಲ್ಲಿದ್ದ ಪೊಲೀಸರು, ವಿಧಾನಸೌಧ ಉದ್ಯಾನ ನಿರ್ವಹಣೆ ಸಿಬ್ಬಂದಿ ಜೇನುನೊಣಗಳಿಂದ ತಪ್ಪಿಸಿಕೊಳ್ಳಲು ಹರಸಾಹಸಪಟ್ಟರು.
ವಿಧಾನಸೌಧದ ಚಾವಣಿಯಲ್ಲಿ ಗೂಡು ಕಟ್ಟಿಕೊಂಡಿರುವ ಹೆಜ್ಜೇನು ನೊಣಗಳು ದಿಢೀರನೆ ಅಲ್ಲಿದ್ದ ಜನರ ಮೇಲೆ ದಾಳಿ ನಡೆಸಿದವು. ಸಂಪುಟ ಸಭೆಗೆ ಬರುವ ಮುಖ್ಯಮಂತ್ರಿ, ಸಚಿವರನ್ನು ಸ್ವಾಗತಿಸಲು ಕಾದಿದ್ದ ಪೊಲೀಸರು ಜೇನು ನೊಣಗಳ ದಾಳಿಗೆ ಹೆದರಿ ದಿಕ್ಕಾಪಾಲಾಗಿ ಓಡುವಂತಾಯಿತು. ಉದ್ಯಾನದಲ್ಲಿದ್ದ ಸಿಬ್ಬಂದಿಯೂ ದಾಳಿಗೆ ತುತ್ತಾದರು.
ಪ್ರವೇಶ ದ್ವಾರದಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನಾಗರಾಜು, ಕಾನ್‌ಸ್ಟೆಬಲ್ ಅಂಜನಪ್ಪ, ಗೃಹ ರಕ್ಷಕ ದಳದ ಸುಧಾ, ವಿಧಾನಸೌಧದ ಸಿಬ್ಬಂದಿ ಲೋಕೇಶ್, ಉದ್ಯಾನ ನಿರ್ವಹಣಾ ಸಿಬ್ಬಂದಿ ಪದ್ಮಮ್ಮ ಮತ್ತಿತರರನ್ನು ಜೇನು ನೊಣಗಳು ಕಚ್ಚಿ ಗಾಯಗೊಳಿಸಿದವು. ವಿಧಾನಸೌಧದಲ್ಲಿನ ಆಸ್ಪತ್ರೆಗೆ ತೆರಳಿ ಅವರೆಲ್ಲರೂ ಚಿಕಿತ್ಸೆ ಪಡೆದರು.
ಗೂಡಿನಿಂದ ಹಾರಿದ ಜೇನು ನೊಣಗಳು ಕೆಲ ನಿಮಿಷಗಳ ಕಾಲ ಅಲ್ಲಿದ್ದವರನ್ನು ಅಟ್ಟಿಸಿಕೊಂಡು ಬಂದವು. ನಂತರ ಗೂಡಿಗೆ ಮರಳಿದವು. ಮುಖ್ಯಮಂತ್ರಿ ಮತ್ತು ಸಚಿವರು ಬರುವ ವೇಳೆಗೆ ಪರಿಸ್ಥಿತಿ ತಿಳಿಯಾಗಿತ್ತು. ‘ಒಂದು ವಾರದ ಹಿಂದೆ ಎಲ್ಲಿಂದಲೋ ಹಾರಿಬಂದ ಜೇನು ನೊಣಗಳು ವಿಧಾನಸೌಧದ ಚಾವಣಿಯಲ್ಲಿ ಬೀಡುಬಿಟ್ಟಿವೆ. ಜೇನು ನೊಣಗಳನ್ನು ಇಲ್ಲಿಂದ ಓಡಿಸಲು ಕ್ರಮ ಕೈಗೊಳ್ಳುವಂತೆ ಲೋಕೋಪಯೋಗಿ ಇಲಾಖೆಗೆ ಮನವಿ ಮಾಡಲಾಗಿದೆ’ ಎಂದು ಅಲ್ಲಿ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.