ADVERTISEMENT

ವಿಧಾನಸೌಧದ ಮುಂದೆ ಉಪವಾಸ - ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 30 ಜೂನ್ 2011, 19:30 IST
Last Updated 30 ಜೂನ್ 2011, 19:30 IST
ವಿಧಾನಸೌಧದ ಮುಂದೆ ಉಪವಾಸ -  ಕುಮಾರಸ್ವಾಮಿ
ವಿಧಾನಸೌಧದ ಮುಂದೆ ಉಪವಾಸ - ಕುಮಾರಸ್ವಾಮಿ   

ಬೆಂಗಳೂರು: ಅಕ್ರಮ ಆಸ್ತಿ ಗಳಿಕೆಗೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಮಾಡಿರುವ ಆರೋಪಗಳ ಕುರಿತಾದ ತನಿಖೆಯನ್ನು ಒಂದು ವಾರದ ಒಳಗೆ ಆರಂಭಿಸದಿದ್ದರೆ ಬರುವ ಶುಕ್ರವಾರದಿಂದ ವಿಧಾನಸೌಧದ ಮುಂದೆ ಆಮರಣಾಂತ ಉಪವಾಸ ಹಮ್ಮಿಕೊಳ್ಳುವುದಾಗಿ ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಸವಾಲು ಹಾಕಿದ್ದಾರೆ.

`ಒಂದೂವರೆ ಸಾವಿರ ಕೋಟಿ ರೂಪಾಯಿಗಳ ಅಕ್ರಮ ಆಸ್ತಿ ಗಳಿಸಿದ್ದೇವೆ ಎಂದು ಬಿಜೆಪಿ ಬಿಡುಗಡೆ ಮಾಡಿರುವ  ಆರೋಪಪಟ್ಟಿ ಕುರಿತು ಸಿಬಿಐ ಸೇರಿದಂತೆ ಯಾವುದೇ ತನಿಖೆಗೆ ವಹಿಸಿಕೊಡಲಿ. ತನಿಖೆಯನ್ನು ಯಾರಿಗೆ ವಹಿಸಿ ಕೊಡುತ್ತೇವೆ ಎಂದು ಬರುವ ಶುಕ್ರವಾರದ ಒಳಗೆ ಹೇಳಿ, ತನಿಖೆ ಆರಂಭಿಸದೇ ಹೋದರೆ ಉಪವಾಸ ಕೈಗೊಳ್ಳಲಾಗುವುದು~ ಎಂದು ಅವರು ಎಚ್ಚರಿಕೆ ನೀಡಿದರು.

`ನನಗೆ ಮಧುಮೇಹ ಹಾಗೂ ಇತರ ತೊಂದರೆಗಳು ಇವೆ. ಆದರೆ ಅದ್ಯಾವುದನ್ನೂ ಲೆಕ್ಕಿಸದೇ ಉಪವಾಸ ಮಾಡುತ್ತೇನೆ. ಹಾಗೆಯೇ  ಬಿಜೆಪಿ, ಮೂರು ತಿಂಗಳ ಒಳಗೆ  ಈ ಕುರಿತು ಸತ್ಯಾಸತ್ಯತೆಯನ್ನು ಬಯಲಿಗೆ ಎಳೆಯಬೇಕು. ತಮ್ಮ ವಿರುದ್ಧವೂ ತನಿಖೆ ನಡೆದರೆ ಎಲ್ಲಿ ಗುಟ್ಟು ರಟ್ಟಾಗುವುದೋ ಎಂದು ಕೋರ್ಟ್‌ಗಳಿಂದ ತಡೆಯಾಜ್ಞೆ ತಂದು ಯಡಿಯೂರಪ್ಪ ಬೇಕಾದರೆ ಬಚಾವಾಗಲಿ. ಆದರೆ ನನಗೆ ಅದಾವುದೇ ಹೆದರಿಕೆ ಇಲ್ಲ~ ಎಂದು ಹೇಳಿದರು.

ನಗರದ ಜೆಡಿಎಸ್ ಕಚೇರಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.

ರಾಜಕೀಯ ನಿವೃತ್ತಿ: `ನಮ್ಮ ಕುಟುಂಬದ ವಿರುದ್ಧ ದಿನಂಪ್ರತಿ ಬರಿಯ ಟೀಕೆ ಮಾಡುವುದರಲ್ಲಿಯೇ ಯಡಿಯೂರಪ್ಪನವರು ಕಾಲಹರಣ ಮಾಡುತ್ತಿದ್ದಾರೆ. ಇದರಿಂದ ನಾವು  ಬೇಸತ್ತು ಹೋಗಿದ್ದೇವೆ. ಅವರು ಮಾಡುತ್ತಿರುವ ಆಪಾದನೆಗಳನ್ನು ಜನರು ನಂಬುವುದೇ ಆದಲ್ಲಿ, ಜನರು ಇಚ್ಛಿಸಿದಲ್ಲಿ ರಾಜಕೀಯ ನಿವೃತ್ತಿ ಪಡೆಯಲು ನಾನು ಸಿದ್ಧ~ ಎಂದು ಕುಮಾರಸ್ವಾಮಿ ಹೇಳಿದರು.

`ನೂರು ಸುಳ್ಳು ಹೇಳಿದರೆ ಅದು ನಿಜವಾಗುತ್ತದೆ ಎಂದು ಯಡಿಯೂರಪ್ಪ ಅಂದುಕೊಂಡಿದ್ದರೆ ಅದು ಶುದ್ಧ ಸುಳ್ಳು. ಜನರ ದೃಷ್ಟಿಯಲ್ಲಿ ನನ್ನ ಹಾಗೂ ನನ್ನ ಕುಟುಂಬ ವರ್ಗದವರನ್ನು ಆರೋಪಿ ಸ್ಥಾನದಲ್ಲಿ ಇಡಲು ನೋಡುತ್ತಿದ್ದಾರೆ. ಅದಕ್ಕೆ ನಾವು ಜಗ್ಗುವುದಿಲ್ಲ. ಆರೋಪ ಮಾಡಿ ಪಲಾಯನ ಮಾಡುವ ಬದಲು ತನಿಖೆ ನಡೆಸಿ ಆರೋಪ ಸಾಬೀತು ಮಾಡಲಿ~ ಎಂದು ಸವಾಲೆಸೆದರು.

`ನಮ್ಮ ಕುಟುಂಬದ ಎಲ್ಲ ಸದಸ್ಯರು ಬಿಡಿಎ ಸೇರಿದಂತೆ ವಿವಿಧ ಸಂಸ್ಥೆಗಳಿಂದ ನಿಯಮಾನುಸಾರವೇ ಜಮೀನು ಖರೀದಿಸಿದ್ದೇವೆ. ಖಾಸಗಿಯವರಿಂದ ಖರೀದಿ ಮಾಡಿರುವ ಜಮೀನುಗಳಿಗೆ ತೆರಿಗೆಯನ್ನೂ ಕಟ್ಟುತ್ತಿದ್ದೇವೆ~ ಎಂದ ಅವರು ಕಾನೂನುಬದ್ಧವಾಗಿಯೇ ಆಸ್ತಿ ಮಾಡಿರುವ ಕುರಿತು ಕೆಲವು ದಾಖಲೆಗಳನ್ನು ತೋರಿಸಿದರು.

`ನಾನು ಮುಖ್ಯಮಂತ್ರಿಯಾಗಿದ್ದಾಗ 47 ಗಣಿ ಕಂಪೆನಿಗಳಿಗೆ ಅನುಮೋದನೆ ನೀಡಿರುವುದಾಗಿ ಯಡಿಯೂರಪ್ಪನವರು ಮಾಡಿರುವ ಆರೋಪದಲ್ಲಿ  ಹುರುಳಿಲ್ಲ.  ಅನುಮೋದನೆ ಕುರಿತ ಪ್ರಸ್ತಾವಗಳಿಗೆ ಸಂಬಂಧಿಸಿದಂತೆ ಕೇಂದ್ರಕ್ಕೆ ಶಿಫಾರಸು ಮಾಡಿದ್ದೇನೆ ಅಷ್ಟೇ~ ಎಂದು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.