ADVERTISEMENT

ವಿಮಾನ ನಿಲ್ದಾಣದಲ್ಲಿ ರೆಕ್ಕೆ ಬಿಚ್ಚಿದ ಮಹಿಳೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 19:30 IST
Last Updated 8 ಮಾರ್ಚ್ 2018, 19:30 IST
ಏರ್‌ಸೈಡ್‌ ಆಪರೇಷನ್‌ ವಿಭಾಗದಲ್ಲಿ ಕೆಲಸ ನಿರ್ವಹಿಸಿದ ರಚನಾ ಕಟ್ಟಿಮನಿ
ಏರ್‌ಸೈಡ್‌ ಆಪರೇಷನ್‌ ವಿಭಾಗದಲ್ಲಿ ಕೆಲಸ ನಿರ್ವಹಿಸಿದ ರಚನಾ ಕಟ್ಟಿಮನಿ   

ಬೆಂಗಳೂರು: ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮಹಿಳಾ ಸಿಬ್ಬಂದಿಯರದ್ದೇ ಪಾರಮ್ಯ. 36 ಮಹಿಳೆಯರು ಇಲ್ಲಿನ ಎಲ್ಲಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಿ, ಮಹಿಳಾ ದಿನವನ್ನು ಅರ್ಥಪೂರ್ಣಗೊಳಿಸಿದರು.

ಬೆಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು ವಿಮಾನ ನಿಲ್ದಾಣದ ಸಂ‍ಪೂರ್ಣ ಚಟುವಟಿಕೆಗಳನ್ನು ಮಹಿಳಾ ಸಿಬ್ಬಂದಿಗೆ ವಹಿಸುವ ಮೂಲಕ ಅಂತರರಾಷ್ಟ್ರೀಯ ಮಹಿಳಾ ದಿನವನ್ನು ಆಚರಿಸಿತು. ಬೆಳಿಗ್ಗೆ 6ರಿಂದ ಮಧ್ಯಾಹ್ನ 2ರವರೆಗಿನ ಪಾಳಿಯನ್ನು ಮಹಿಳೆಯರೇ ನಿಭಾಯಿಸಿದರು. ಈ ಅವಧಿಯಲ್ಲಿ ಇಲ್ಲಿಂದ ಸುಮಾರು 250 ವಿಮಾನಗಳು ಹಾರಾಟ ನಡೆಸಿದವು.

ಟರ್ಮಿನಲ್‌ನ ಎಲ್ಲಾ ಚಟುವಟಿಕೆಗಳು, ಟ್ಯಾಕ್ಸಿ ಸೇವೆ, ರನ್‌ ವೇಗಳ ನಿರ್ವಹಣೆ, ವಿಮಾನಯಾನ ಸುರಕ್ಷತೆ, ಗಣ್ಯರ ನಿರ್ವಹಣೆ... ಹೀಗೆ ಪ್ರತಿಯೊಂದು ಕೆಲಸವನ್ನು ಮಹಿಳಾ ತಂಡವೇ ನೋಡಿಕೊಂಡಿತು. ಏರ್‌ ಟ್ರಾಫಿಕ್‌ ಕಂಟ್ರೋಲ್‌ನಲ್ಲಿ (ಎಟಿಸಿ) ಮಹಿಳೆಯರ ತಂಡವೇ ಕಂಟ್ರೋಲ್‌ ಟವರ್‌ನ ಜವಾಬ್ದಾರಿಯನ್ನು ನಿರ್ವಹಿಸಿತು.

ADVERTISEMENT

‘ವಿಮಾನಯಾನ ಸಂಸ್ಥೆಗಳ ಎಲ್ಲಾ ಸೇವೆಗಳು ಹಾಗೂ ನಿಲ್ದಾಣದ ಚಟುವಟಿಕೆ ಸುಗಮವಾಗಿ ನಡೆಯುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ. ಸಾಕಷ್ಟು ಸವಾಲುಗಳಿಂದ ಕೂಡಿದ ಈ ಕೆಲಸವನ್ನು ನಿರ್ವಹಿಸುವುದು ಹೆಮ್ಮೆಯ ವಿಷಯ. ಎರಡು ತಿಂಗಳ ಹಿಂದಷ್ಟೇ ನಿಲ್ದಾಣಕ್ಕೆ ಬಾಂಬ್‌ ಇಡಲಾಗಿದೆ ಎಂಬ ಕರೆ ಬಂದಿತ್ತು. ಪರೀಕ್ಷಿಸಿದ ನಂತರವಷ್ಟೇ ಅದು ಸುಳ್ಳು ಎಂದು ಗೊತ್ತಾಯಿತು. ಆದರೆ, ಅಂತಹ ಕ್ಲಿಷ್ಟಕರ ಸಂದರ್ಭದಲ್ಲೂ ಒತ್ತಡಕ್ಕೆ ಒಳಗಾಗದೇ ಜವಾಬ್ದಾರಿಯನ್ನು ನಿಭಾಯಿಸುವುದು ಮುಖ್ಯವಾಗುತ್ತದೆ’ ಎಂದು ಟರ್ಮಿನಲ್‌ ಕಾರ್ಯಾಚರಣೆ ವ್ಯವಸ್ಥಾಪಕಿ ನೇಹಾ ಸಿಂಗ್‌ ಅನುಭವವನ್ನು ಹಂಚಿಕೊಂಡರು.

‘ನಮ್ಮ ಸೇವೆಯನ್ನು ಮೆಚ್ಚಿ ಪ್ರಯಾಣಿಕರು ಖುಷಿಯಿಂದ ಪ್ರತಿ ಕ್ರಿಯಿಸಿದಾಗ ಕೆಲಸ ಸಾರ್ಥಕ ಎನಿಸುತ್ತದೆ. ಜನರೊಂದಿಗೆ ಬೆರೆಯಲು ಸಿಗುವ ಅವಕಾಶದಲ್ಲಿಯೇ ನಮ್ಮ ಒತ್ತಡವನ್ನು ಮರೆಯುತ್ತೇವೆ’ ಎಂದು ಅವರು ಹೇಳಿದರು.

ವಿಮಾನ ನಿಲ್ದಾಣದ ಹೃದಯಭಾಗ ಎಂದೇ ಕರೆಯುವ ಏರ್‌ಪೋರ್ಟ್‌ ಆಪರೇಷನ್ಸ್‌ ಕಂಟ್ರೋಲ್‌ ಸೆಂಟರ್‌ನ (ಎಒಸಿಸಿ) ತಂಡದ ನೇತೃತ್ವ ವಹಿಸಿದ್ದ ಬೀನಾ, ‘ರನ್‌ವೇಗೆ ಬಂದ ವಿಮಾನಗಳಿಗೆ ಸರಿಯಾದ ನಿಲುಗಡೆ ತಾಣ ನೀಡುವುದು ನಮ್ಮ ಜವಾಬ್ದಾರಿ. ಎಲ್ಲರೊಂದಿಗೆ ಹೊಂದಾಣಿಕೆಯಿಂದ ಕೆಲಸ ಮಾಡುವುದು ಅತ್ಯಂತ ಮುಖ್ಯ. ಸಣ್ಣ ತಪ್ಪಾದರೂ ಮತ್ತೊಂದು ವಿಮಾನದೊಂದಿಗೆ ಘರ್ಷಣೆಯಾಗುವ ಸಂಭವವಿರುತ್ತದೆ’ ಎಂದು ತಮ್ಮ ಕಾರ್ಯ ಚಟುವಟಿಕೆಯನ್ನು ವಿವರಿಸಿದರು.

ಟರ್ಮಿನಲ್‌ನಲ್ಲಿ ಕೆಲಸ ಮಾಡುತ್ತಿದ್ದ ಬೀನಾ ಅವರು ಎಒಸಿಸಿಯಲ್ಲಿ ಕಾರ್ಯನಿರ್ವಹಿಸಲು 6 ತಿಂಗಳ ತರಬೇತಿ ಪಡೆದಿದ್ದಾರೆ. ‘ಪುರುಷರೇ ಹೆಚ್ಚಾಗಿ ನಿರ್ವಹಿಸುವ ಈ ಕೆಲಸವನ್ನು ನಾವೂ ಯಶಸ್ವಿಯಾಗಿ ನಿಭಾಯಿಸಬಹುದು ಎಂಬುದನ್ನು ತೋರಿಸಿದ್ದೇವೆ. ಈ ಬಗ್ಗೆ ಖುಷಿ ಇದೆ’ ಎಂದರು.

ರನ್‌ವೇಗಳಲ್ಲಿ ವಿಮಾನಗಳಿಗೆ ದಾರಿ ತೋರುವ ಏರ್‌ಸೈಡ್‌ ಆಪರೇಷನ್‌ ವಿಭಾಗದ ಪುಷ್ಪಾ ಪಾಂಡೆ, ರಚನಾ ಕಟ್ಟಿಮನಿ, ಟರ್ಮಿನಲ್‌ ಆಪರೇಷನ್‌ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಲಾವಣ್ಯ, ಎಟಿಸಿಯ ದಿಶಾ... ಹೀಗೆ ಪ್ರತಿಯೊಬ್ಬರ ಮೊಗದಲ್ಲೂ ಹೆಮ್ಮೆಯ ಛಾಯೆ ಮನೆಮಾಡಿತ್ತು.

ಶೇ 15ರಷ್ಟು ಸಿಬ್ಬಂದಿ ಮಹಿಳೆಯರು
ವಿಮಾನ ನಿಲ್ದಾಣದಲ್ಲಿ ಶೇ 15ರಷ್ಟು ಮಹಿಳಾ ಸಿಬ್ಬಂದಿ ಇದ್ದಾರೆ. ದೇಶದ ಬೇರೆ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ, ಇದು ಉತ್ತಮ ಅನುಪಾತ. ಇದನ್ನು ಇನ್ನಷ್ಟು ಹೆಚ್ಚಿಸುವ ಆಲೋಚನೆ ಇದೆ. ಲಿಂಗ ತಾರತಮ್ಯಕ್ಕೆ ಇಲ್ಲಿ ಅವಕಾಶವಿಲ್ಲ ಎಂದು ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥ ಸಾಜಿತ್‌ ತಿಳಿಸಿದರು.

‘ದೇಶದಲ್ಲಿ ಪ್ರಯಾಣಿಕರ ದಟ್ಟಣೆ ಹೆಚ್ಚು ಇರುವ ವಿಮಾನ ನಿಲ್ದಾಣಗಳಲ್ಲಿ ನಮ್ಮದು ಮೂರನೇ ಸ್ಥಾನದಲ್ಲಿದೆ. ಇಲ್ಲಿ ಸೂಕ್ತ ಭದ್ರತಾ ವ್ಯವಸ್ಥೆಗಳನ್ನು ಹೇಗೆ ಕೈಗೊಳ್ಳಬೇಕು ಎಂಬ ಬಗ್ಗೆ ಮಹಿಳಾ ಸಿಬ್ಬಂದಿಗೆ ಆರು ತಿಂಗಳ ತರಬೇತಿ ನೀಡಲಾಗಿದೆ. ಪ್ರತಿ ವಾರ ಪರಿಶೀಲನಾ ಸಭೆಗಳನ್ನು ನಡೆಸಿದ್ದೇವೆ’ ಎಂದರು.

*


-ಟರ್ಮಿನಲ್‌ ಚಟುವಟಿಕೆಗಳನ್ನು ನಿರ್ವಹಿಸಿದ ಮಹಿಳಾ ಸಿಬ್ಬಂದಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.