ADVERTISEMENT

ವಿವಿಧೆಡೆ ಕಾರ್ಯಾಚರಣೆ: ರೂ.9.16 ಕೋಟಿ ವಶ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2013, 19:59 IST
Last Updated 21 ಏಪ್ರಿಲ್ 2013, 19:59 IST

ಬೆಂಗಳೂರು:  ಚುನಾವಣಾ ಅಕ್ರಮಗಳಿಗೆ ಸಂಬಂಧಿಸಿದಂತೆ ರಾಜ್ಯದ ವಿವಿಧೆಡೆ ಕಾರ್ಯಾಚರಣೆ ನಡೆಸಿದ ಜಾಗೃತದಳವು ಇದುವರೆಗೆ  ರೂ. 9.16 ಕೋಟಿ ನಗದು ವಶಪಡಿಸಿಕೊಂಡಿದೆ. ಇದಲ್ಲದೆ ಮದ್ಯ, ಸೀರೆ, ಬಳೆ ಇತ್ಯಾದಿ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬೀಳಗಿಯಲ್ಲಿ 340 ಚೀಲ ಸಕ್ಕರೆ, ಗೌರಿಬಿದನೂರಿನಲ್ಲಿ 412 ಟಿಶರ್ಟ್, ಸಂಡೂರಿನಲ್ಲಿ 266 ಲೀಟರ್ ಮದ್ಯ, ಹೊಸಕೋಟೆಯಲ್ಲಿ 28 ಲೀಟರ್ ಮದ್ಯ, ನಾಗಮಂಗಲ, ಮದ್ದೂರಿನಲ್ಲಿ 42 ಲೀಟರ್ ಮದ್ಯವನ್ನು ಭಾನುವಾರ ವಶಪಡಿಸಿಕೊಳ್ಳಲಾಗಿದೆ.

ರೂ. 1.65 ಲಕ್ಷ ವಶ 
ಕೃಷ್ಣರಾಜಪೇಟೆ:
ಸೂಕ್ತ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ರೂ.1.65 ಲಕ್ಷಗಳನ್ನು ಚುನಾವಣಾ ಅಧಿಕಾರಿಗಳು ತಾಲ್ಲೂಕಿನ  ಹರಿಯಾಲದಮ್ಮನ ಗುಡಿ ಬಳಿಯ ಚೆಕ್‌ಪೋಸ್ಟ್‌ನಲ್ಲಿ ವಶಪಡಿಸಿಕೊಂಡಿದ್ದಾರೆ.

ಈ ಸಂಬಂಧ ಇಬ್ಬರು ಯುವಕರನ್ನು ಬಂಧಿಸಿ, ಚುನಾವಣಾ ನೀತಿಸಂಹಿತೆ ಉಲ್ಲಂಘನೆ ಮೊಕದ್ದಮೆ ದಾಖಲಿಸಿದ್ದಾರೆ. ಬೆಂಗಳೂರು ಮೂಲದ ಸರ್ವಣ್, ಮಂಜುನಾಥ್ ಬಂಧಿತರು. ತಾಲ್ಲೂಕಿನ ಕುಂದೂರು ಗ್ರಾಮದ ಕಡೆಯಿಂದ ದ್ವಿಚಕ್ರ ವಾಹನದಲ್ಲಿ ಬಂದ ಇವರನ್ನು ಹರಿಯಾಲದಮ್ಮನ ಗುಡಿ ಬಳಿ ಸ್ಥಾಪಿಸಿರುವ ಚುನಾವಣಾ ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಗೆ ಒಳಪಡಿಸಲಾಯಿತು. ಇವರ ಬಳಿ ಇದ್ದ ಹಣವನ್ನು ವಶಪಡಿಸಿಕೊಂಡ ಅಧಿಕಾರಿಗಳು ಈ ಬಗ್ಗೆ ವಿಚಾರಣೆ ನಡೆಸಿದರು. ಆದರೆ ಸಾಗಿಸುತ್ತಿದ್ದ ಹಣಕ್ಕೆ ಸಂಬಂಧಿಸಿದಂತೆ ಸೂಕ್ತ ದಾಖಲಾತಿ ನೀಡಲು ಯುವಕರು ವಿಫಲರಾದಾಗ ಅವರನ್ನು ತಪಾಸಣಾ ಕೇಂದ್ರದ ಅಧಿಕಾರಿಗಳಾದ ಯೋಗೇಶ್ ಮತ್ತು ಕೆಂಪೇಗೌಡ ಪೊಲೀಸರಿಗೆ ಒಪ್ಪಿಸಿದರು.

ರೂ. 11 ಲಕ್ಷ ವಶ
ಶ್ರೀನಿವಾಸಪುರ (ಕೋಲಾರ ಜಿಲ್ಲೆ):
ಆಂಧ್ರಪ್ರದೇಶದಿಂದ ಬೆಂಗಳೂರಿಗೆ ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ರೂ. 11.16 ಲಕ್ಷ   ನಗದನ್ನು ತಾಲ್ಲೂಕಿನ ಗಡಿಭಾಗ ರಾಯಲ್ಪಾಡ್ ಚೆಕ್‌ಪೋಸ್ಟ್‌ನಲ್ಲಿ ಚುನಾವಣೆ ವಿಚಕ್ಷಣ ದಳ ವಶಪಡಿಸಿಕೊಂಡಿದೆ.

ಜೆಡಿಎಸ್ ಸಭೆಯಲ್ಲಿ ಮದ್ಯ
ಹಿರೀಸಾವೆ: 
ಪಟ್ಟಣದಲ್ಲಿ ಭಾನುವಾರ ನಡೆದ ಜೆಡಿಎಸ್ ಪ್ರಚಾರ ಸಭೆಗೂ ಮೊದಲು ಕಾರ್ಯಕರ್ತರಿಗೆ ಮದ್ಯವನ್ನು ವಿತರಿಸಲಾಯಿತು.  ಸಂಜೆ 4 ಗಂಟೆಗೆ ಜೆಡಿಎಸ್ ಪಕ್ಷದ ಪ್ರಚಾರ ಸಭೆ ಇರುವುದನ್ನು ತಿಳಿದು ಅಪಾರ ಕಾರ್ಯಕರ್ತರು ಮಧ್ಯಾಹ್ನವೇ ಪಟ್ಟಣಕ್ಕೆ ಆಗಮಿಸಿದ್ದರು. ಸ್ಥಳೀಯ ನಾಯಕರು ಮತ್ತು ಪ್ರತಿ ಗ್ರಾಮದ ಪಕ್ಷದ ಮುಖಂಡರು ಕಾರ್ಯಕರ್ತರಿಗೆ ಮದ್ಯದ ಪೊಟ್ಟಣ್ಣಗಳನ್ನು ಹಂಚಿದರು. ಈ ಕ್ಷೇತ್ರದಿಂದ  ಸಿ.ಎಸ್.ಬಾಲಕೃಷ್ಣ ಅಭ್ಯರ್ಥಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT