ADVERTISEMENT

ವಿ.ವಿ ಕಾರ್ಯನಿರ್ವಹಣೆಯಲ್ಲಿ ಏಕರೂಪ

ವಿಧಾನಸಭೆಯಲ್ಲಿ ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ– 2017 ಮಂಡಿಸಿದ ಸಚಿವ ರಾಯರಡ್ಡಿ

​ಪ್ರಜಾವಾಣಿ ವಾರ್ತೆ
Published 14 ಜೂನ್ 2017, 19:30 IST
Last Updated 14 ಜೂನ್ 2017, 19:30 IST
ವಿಧಾನಸಭೆಯಲ್ಲಿ ಸಚಿವ ಬಸವರಾಜ ರಾಯರಡ್ಡಿ
ವಿಧಾನಸಭೆಯಲ್ಲಿ ಸಚಿವ ಬಸವರಾಜ ರಾಯರಡ್ಡಿ   

ಬೆಂಗಳೂರು: ಉನ್ನತ ಶಿಕ್ಷಣ ಇಲಾಖೆಯ ಅಧೀನದ  17  ವಿಶ್ವವಿದ್ಯಾಲಯಗಳ ಕಾರ್ಯನಿರ್ವಹಣೆಯಲ್ಲಿ ಏಕರೂಪ ತರುವ ಉದ್ದೇಶದಿಂದ  ‘ಕರ್ನಾಟಕ ರಾಜ್ಯ ವಿಶ್ವವಿದ್ಯಾಲಯಗಳ ಮಸೂದೆ– 2017’ ಅನ್ನು ವಿಧಾನಸಭೆಯಲ್ಲಿ ಬುಧವಾರ ಮಂಡಿಸಲಾಯಿತು.

ಪ್ರಸ್ತುತ ಈ ವಿಶ್ವವಿದ್ಯಾಲಯಗಳಿಗೆ ಸಂಬಂಧಿಸಿದಂತೆ ಏಳು ಕಾಯ್ದೆಗಳು ಜಾರಿಯಲ್ಲಿವೆ. ಪ್ರತಿ ವಿಶ್ವವಿದ್ಯಾಲಯದ ಕಾರ್ಯನಿರ್ವಹಣೆ ವಿಭಿನ್ನವಾಗಿದೆ. ಹೀಗಾಗಿ ವ್ಯವಸ್ಥೆಯಲ್ಲಿ ಬದಲಾವಣೆ ತರುವುದು ಅನಿವಾರ್ಯ ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

‘ದೇಶದಲ್ಲಿ 46 ಕೇಂದ್ರೀಯ ವಿಶ್ವವಿದ್ಯಾಲಯಗಳು ಇವೆ. ಈ ಎಲ್ಲ ವಿ.ವಿ.ಗಳು ಕೇಂದ್ರೀಯ ವಿಶ್ವವಿದ್ಯಾಲಯ ಕಾಯ್ದೆ– 2009ರ ವ್ಯಾಪ್ತಿಗೆ ಬರುತ್ತವೆ. ನಮ್ಮಲ್ಲೂ ಅದೇ ರೀತಿಯ ಕಾಯ್ದೆ ಜಾರಿಗೆ ತರಲು ಈ ಮಸೂದೆ ಮಂಡಿಸಲಾಗಿದೆ’  ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಸ್ಪಷ್ಟಪಡಿಸಿದರು.

ADVERTISEMENT

‘ನೇಮಕ ಹಾಗೂ ಕಾಮಗಾರಿಯಲ್ಲಿ ಭ್ರಷ್ಟಾಚಾರ ಎಸಗಿದ ಕಾರಣಕ್ಕೆ 10 ವರ್ಷಗಳಲ್ಲಿ ಎಂಟು ಕುಲಪತಿಗಳು ಅಮಾನತು ಆಗಿದ್ದಾರೆ. ವಿಶ್ವವಿದ್ಯಾಲಯಗಳಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಇದಕ್ಕೆ ಕಡಿವಾಣ ಹಾಕುವ ಉದ್ದೇಶ ಹೊಂದಿದ್ದೇವೆ’ ಎಂದೂ ಹೇಳಿದರು.

ಪ್ರಭಾರ ಹೊಣೆ:  ವಿಶ್ವವಿದ್ಯಾಲಯದ ಕುಲಪತಿ ರಜೆ, ಅನಾರೋಗ್ಯ ಹಾಗೂ ಹುದ್ದೆ ಖಾಲಿಯಾದ ಸಂದರ್ಭದಲ್ಲಿ ಇನ್ನು ಮುಂದೆ ಅದೇ ವಿಶ್ವವಿದ್ಯಾಲಯದ ಪ್ರಾಧ್ಯಾಪಕರನ್ನು ಪ್ರಭಾರ ಕುಲಪತಿಯನ್ನಾಗಿ ಮಾಡುವಂತಿಲ್ಲ. ಪಕ್ಕದ ವಿಶ್ವವಿದ್ಯಾಲಯದ ಕುಲಪತಿಯನ್ನು ಪ್ರಭಾರ ಕುಲಪತಿಯನ್ನಾಗಿ ನಿಯೋಜಿಸಬೇಕು ಎಂದು ಮಸೂದೆಯಲ್ಲಿ ತಿಳಿಸಲಾಗಿದೆ.

ಪರೀಕ್ಷಾ ನಿಯಂತ್ರಕ: ಕುಲಸಚಿವ (ಮೌಲ್ಯಮಾಪನ) ಹುದ್ದೆಯ ಹೆಸರನ್ನು ‘ಪರೀಕ್ಷಾ ನಿಯಂತ್ರಕ’ ಎಂಬುದಾಗಿ ಬದಲಿಸಲಾಗಿದೆ. ಈ ಹುದ್ದೆಗೆ ಮೂವರ ಹೆಸರನ್ನು ವಿಶ್ವವಿದ್ಯಾಲಯದ ಕಾರ್ಯನಿರ್ವಾಹಕ ಪರಿಷತ್‌ಗೆ ಕುಲಪತಿ ಶಿಫಾರಸು ಮಾಡಬೇಕು. ಈ ಪೈಕಿ ಒಬ್ಬರನ್ನು ಎರಡು ವರ್ಷದ ಅವಧಿಗೆ ನೇಮಕ ಮಾಡಲಾಗುತ್ತದೆ.  ಐದು ವರ್ಷಗಳ ಅನುಭವ ಹೊಂದಿರುವ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಘಟಕ ಕಾಲೇಜುಗಳ ಪ್ರಾಂಶುಪಾಲರು ಅಥವಾ  ಕೆಎಎಸ್‌ (ಹಿರಿಯ ಶ್ರೇಣಿ) ಅಧಿಕಾರಿಗಳು ಈ ಹುದ್ದೆಗೆ ಅರ್ಹರಾಗಿರುತ್ತಾರೆ.

ಶೋಧನಾ ಸಮಿತಿಗೆ ಐವರು:  ಹೊಸ ಕಾಯ್ದೆ ಜಾರಿಯಾದರೆ ಕುಲಪತಿಯ ಆಯ್ಕೆಯ ಶೋಧನಾ ಸಮಿತಿಯು ಐವರು ಸದಸ್ಯರನ್ನು ಹೊಂದಿರಲಿದೆ. ಕುಲಪತಿಗಳು, ವಿಶ್ವಾಂತ ಕುಲಪತಿಗಳು ಅಥವಾ ರಾಷ್ಟ್ರೀಯ ಪ್ರಾಮುಖ್ಯತೆಯ ಸಂಸ್ಥೆಗಳ ನಿರ್ದೇಶಕರ ದರ್ಜೆಯ ಶಿಕ್ಷಣ ತಜ್ಞರನ್ನು ಸಮಿತಿಗೆ ಸದಸ್ಯರನ್ನಾಗಿ ನೇಮಕ ಮಾಡಬಹುದು. ಕುಲಪತಿ ಹುದ್ದೆ ಖಾಲಿ ಇರುವ ವಿಶ್ವವಿದ್ಯಾಲಯಕ್ಕೆ ಅಥವಾ ಸಂಯೋಜಿತ ಸಂಸ್ಥೆಗೆ ಸಂಬಂಧಪಟ್ಟ ತಜ್ಞರನ್ನು ಸಮಿತಿಗೆ ನಾಮನಿರ್ದೇಶನ ಮಾಡುವಂತಿಲ್ಲ ಎಂದು ಮಸೂದೆಯಲ್ಲಿ ಸ್ಪಷ್ಟಪಡಿಸಲಾಗಿದೆ.

ಸಿಂಡಿಕೇಟ್‌ ಬದಲು ಕಾರ್ಯನಿರ್ವಾಹಕ ಪರಿಷತ್‌: ವಿ.ವಿ.ಗಳ ಸಿಂಡಿಕೇಟ್‌ ಹೆಸರನ್ನು ‘ಕಾರ್ಯನಿರ್ವಾಹಕ ಪರಿಷತ್‌’ ಎಂದು ಬದಲಿಸಲಾಗುತ್ತದೆ. ಇದಕ್ಕೆ ಆರು ಮಂದಿಯನ್ನು ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಬಹುದು. ಅವರು ಸ್ನಾತಕೋತ್ತರ ಪದವಿ ಅಥವಾ ಸಮಾನಾಂತರ ಪದವಿ ಹೊಂದಿರಬೇಕು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯಕ್ಕೆ ನಾಮನಿರ್ದೇಶನ ಮಾಡಿರುವ ಆರು ಜನರ ಪೈಕಿ ಕನಿಷ್ಠ ಪಕ್ಷ ನಾಲ್ವರು ಮಹಿಳೆಯರು ಇರಬೇಕು.

ಅಂತರ್‌ ವಿಶ್ವವಿದ್ಯಾಲಯ ವರ್ಗಾವಣೆ: ವಿಶ್ವವಿದ್ಯಾಲಯಗಳ ನೌಕರರ ‘ಅಂತರ್‌ ವಿಶ್ವವಿದ್ಯಾಲಯ ವರ್ಗಾವಣೆ’ಗೆ ಮಸೂದೆಯಲ್ಲಿ ಅವಕಾಶ ಕಲ್ಪಿಸಲಾಗಿದೆ.  ಕೋರಿಕೆ ಮೇರೆಗೆ ನೌಕರ ವರ್ಗ ಮಾಡಿಸಿಕೊಂಡರೆ ಜೇಷ್ಠತೆಯನ್ನು ಬಿಟ್ಟುಕೊಡಬೇಕು ಎಂದು ತಿಳಿಸಲಾಗಿದೆ.

ಗಂಗೂಬಾಯಿ ಹಾನಗಲ್‌ ಸಂಗೀತ ಮತ್ತು ಪ್ರದರ್ಶನ ಕಲೆಗಳ ವಿಶ್ವವಿದ್ಯಾಲಯದ ಕುಲಪತಿಯ ಹುದ್ದೆಯನ್ನು ಹೊಂದಲು ಗರಿಷ್ಠ ವಯೋಮಿತಿಯನ್ನು 67ಕ್ಕೆ ಏರಿಸುವ ಮಸೂದೆಯನ್ನೂ ಸದನದಲ್ಲಿ ಮಂಡಿಸಲಾಯಿತು.

***
ಅಭಿವೃದ್ಧಿ ಮಂಡಳಿಗೆ ಸಚಿವರೇ ಅಧ್ಯಕ್ಷರು!

ವಿಶ್ವವಿದ್ಯಾಲಯಗಳ ಕಾಮಗಾರಿಗಳ ಮೇಲ್ವಿಚಾರಣೆ ನೋಡಿಕೊಳ್ಳಲು ಉನ್ನತ ಶಿಕ್ಷಣ ಮೂಲಸೌಕರ್ಯ ಅಭಿವೃದ್ಧಿ ಮಂಡಳಿ ರಚಿಸಲಾಗುತ್ತದೆ. ವಿಶ್ವವಿದ್ಯಾಲಯಗಳಲ್ಲಿ ನಡೆಯುವ ₹1 ಕೋಟಿ ಮೀರಿದ ಕಾಮಗಾರಿಗಳಿಗೆ ಈ ಮಂಡಳಿಯ ಒಪ್ಪಿಗೆ ಪಡೆಯಬೇಕು ಎಂಬ ಅಂಶ ಮಸೂದೆಯಲ್ಲಿದೆ.

ಉನ್ನತ ಶಿಕ್ಷಣ ಸಚಿವರು ಮಂಡಳಿ ಅಧ್ಯಕ್ಷರು. ರಾಜ್ಯ ಸರ್ಕಾರ ನಾಮನಿರ್ದೇಶನ ಮಾಡಿರುವ ನಾಲ್ವರು ಸದಸ್ಯರು ಇದರಲ್ಲಿ  ಇರುತ್ತಾರೆ. ಸಂಬಂಧಪಟ್ಟ ವಿ.ವಿ.ಯ ಕುಲಪತಿ ಸದಸ್ಯರಾಗಿರುತ್ತಾರೆ.

***
‘ಕುಲಪತಿಗಳೂ ಪಾಠ ಮಾಡುವುದು ಕಡ್ಡಾಯ’

‘ವಿಶ್ವವಿದ್ಯಾಲಯದ ಕುಲಪತಿಗಳು ತರಗತಿಗಳಲ್ಲಿ ಪಾಠ ಮಾಡುವುದು ಕಡ್ಡಾಯ ಮಾಡಲಾಗಿದೆ’ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ತಿಳಿಸಿದರು.

ವಿಧಾನಸಭೆಯಲ್ಲಿ ಬುಧವಾರ ಪ್ರಶ್ನೋತ್ತರ ಅವಧಿಯಲ್ಲಿ ಕಾಂಗ್ರೆಸ್‌ನ ಜೆ.ಎರ್‌. ಲೋಬೊ ಪ್ರಶ್ನೆಗೆ ಉತ್ತರಿಸಿ, ‘ಉಪನ್ಯಾಸಕರಿಗೆ ಹಾಗೂ ಪ್ರಾಧ್ಯಾಪಕರಿಗೆ ತರಬೇತಿ ನೀಡಲು ಕರ್ನಾಟಕ ವೃತ್ತಿ ಶಿಕ್ಷಣ ಅಕಾಡೆಮಿ ಸ್ಥಾಪನೆ ಮಾಡಲಾಗಿದೆ’ ಎಂದರು.
***
ವಿಶ್ವವಿದ್ಯಾಲಯಗಳಲ್ಲಿ ಭ್ರಷ್ಟಾಚಾರ    ತೊಡೆದು ಹಾಕಿ ಪಾರದರ್ಶಕತೆ ತರುವ ಉದ್ದೇಶವನ್ನು ಈ ಮಸೂದೆ ಹೊಂದಿದೆ.
ಬಸವರಾಜ ರಾಯರಡ್ಡಿ, ಉನ್ನತ ಶಿಕ್ಷಣ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.