ADVERTISEMENT

ವಿಷಾಹಾರ: 80 ಮಂದಿ ಅಸ್ವಸ್ಥ

​ಪ್ರಜಾವಾಣಿ ವಾರ್ತೆ
Published 5 ಜೂನ್ 2011, 19:30 IST
Last Updated 5 ಜೂನ್ 2011, 19:30 IST

ಸಂತೇಬೆನ್ನೂರು: ನಾಮಕರಣ ಸಮಾರಂಭದ ಊಟ ಮಾಡಿದ ಸುಮಾರು 80ಕ್ಕೂ ಹೆಚ್ಚು ಮಂದಿ ಅಸ್ವಸ್ಥಗೊಂಡ ಘಟನೆ ಸಂತೇಬೆನ್ನೂರಿನಲ್ಲಿ ಭಾನುವಾರ ರಾತ್ರಿ ನಡೆದಿದೆ.

ಸಂತೇಬೆನ್ನೂರು ಸಮೀಪದ ಕೊಂಡದಹಳ್ಳಿಯಲ್ಲಿ ಚಂದ್ರಪ್ಪ ಎಂಬುವರ ಮನೆಯಲ್ಲಿ ನಡೆದ ನಾಮಕರಣ ಸಮಾರಂಭದಲ್ಲಿ ಊಟ ಮಾಡಿದ ಮಂದಿ ಇದ್ದಕ್ಕಿದ್ದಂತೆ ತೀವ್ರ ಅಸ್ವಸ್ಥಗೊಂಡರು. ಅವರನ್ನು ಕೂಡಲೇ ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಯಿತು. ಅವರ ಪೈಕಿ ತೀವ್ರ ಅಸ್ವಸ್ಥಗೊಂಡ 10 ಮಂದಿಯನ್ನು ದಾವಣಗೆರೆಯ ಜಿಲ್ಲಾ ಚಿಗಟೇರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಂಬುಜಾಕ್ಷಮ್ಮ ಎಂಬುವರ ಸ್ಥಿತಿ ಗಂಭೀರವಾಗಿದೆ. ಘಟನೆಗೆ ವಿಷಾಹಾರ ಸೇವನೆ ಕಾರಣ ಎಂದು ಆರೋಗ್ಯ ಕೇಂದ್ರದ ಮೂಲಗಳು ತಿಳಿಸಿವೆ. ಇದೇ ಸಮಾರಂಭಕ್ಕೆ ಉಬ್ರಾಣಿಯಿಂದ ಬಂದ ಬಂಧುಗಳೂ ಅಸ್ವಸ್ಥಗೊಂಡಿದ್ದು, ಅವರನ್ನು ಶಿವಮೊಗ್ಗ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉಳಿದ ರೋಗಿಗಳಿಗೆ ಇಲ್ಲಿನ ಆರೋಗ್ಯ ಕೇಂದ್ರದಲ್ಲಿಯೇ ಚಿಕಿತ್ಸೆ ನೀಡಲಾಗಿದೆ. ಜಿಲ್ಲಾ ಪಂಚಾಯ್ತಿ ಸದಸ್ಯ ಪ್ರೇಮಾ ಸಿದ್ದೇಶ್, ಕೊಂಡದಹಳ್ಳಿ ಗ್ರಾ.ಪಂ. ಅಧ್ಯಕ್ಷ ಸದಸ್ಯರು ಆಸ್ಪತ್ರೆಗೆ ಭೇಟಿ ನೀಡಿದರು.

ಡಾ.ಯಶೋಧಾ ಮತ್ತು ಡಾ.ಬಿಂದು ಮತ್ತು ಆರೋಗ್ಯ ಕೇಂದ್ರದ ಸಿಬ್ಬಂದಿ ತಡರಾತ್ರಿಯವರೆಗೂ ರೋಗಿಗಳಿಗೆ ಚಿಕಿತ್ಸೆ ನೀಡಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.